Advertisement
ಸಾಮಾನ್ಯವಾಗಿ ಹಬ್ಬ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಬೆಲೆಯೇರಿಕೆಯಾಗುವುದು ಸಹಜ. ಆದರೆ, ಸಂಕ್ರಾಂತಿ ಹಬ್ಬ ಕಳೆದು ಮೂರು ದಿನವಾದರೂ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದಕ್ಕೆ ಬೇಡಿಕೆ ಮತ್ತು ಪೂರೈಕೆಯಲ್ಲಿನ ವ್ಯತ್ಯಾಸವೇ ಕಾರಣ ಎನ್ನುತ್ತಾರೆ ಮೈಸೂರಿನ ಎಪಿಎಂಸಿ ಮಾರುಕಟ್ಟೆಯ ತರಕಾರಿ ಸಗಟು ವರ್ತಕರಾದ ಕೆಂಪೇಗೌಡ.
Related Articles
Advertisement
ಆದರೆ, ನೀರಾವರಿ ವ್ಯವಸ್ಥೆಯನ್ನು ಮಾಡಿಕೊಂಡು ತರಕಾರಿ ಬೆಳೆಯನ್ನು ನಿಯಮಿತವಾಗಿ ಬೆಳೆಯುವ ರೈತರು, ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತವನ್ನು ಗಮನಿಸಿಯೇ ನಾವು ಯಾವ ತರಕಾರಿ ಬೆಳೆಯಬೇಕು ಎಂದು ನಿರ್ಧರಿಸುತ್ತಾರೆ. ಕಳೆದ ಆರೇಳು ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ತೀವ್ರ ಕುಸಿತ ಕಂಡಿದ್ದರಿಂದ ಹೆಚ್ಚಿನವರು ಹಾಕಿದ ಬಂಡವಾಳ ವಾಪಸ್ ಬರುತ್ತದೋ ಇಲ್ಲವೋ ಎಂಬ ಗೊಂದಲದಲ್ಲಿ ತರಕಾರಿ ಬೆಳೆಯುವ ಗೋಜಿಗೆ ಹೋಗಿಲ್ಲ.
ಇನ್ನು ತರಕಾರಿ ಬೆಳೆ ಹಾಕಿರುವವರಿಗೆ ಈ ವರ್ಷ ವಿಪರೀತ ಚಳಿ ಹೆಚ್ಚಳದಿಂದ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಕಳೆದ 8-10ದಿನಗಳಿಂದ ಮಾರುಕಟ್ಟೆಗೆ ಬರುವ ತರಕಾರಿಯ ಪ್ರಮಾಣ ಕಡಿಮೆಯಾಗಿರುವುದರಿಂದ ತರಕಾರಿ ಬೇಡಿಕೆಯನ್ನು ಪೂರೈಸಲಾಗುತ್ತಿಲ್ಲ. ಆದ್ದರಿಂದ ಬೆಲೆ ಗಗನಮುಖೀಯಾಗುತ್ತಿದೆ. ಮೂರು ದಿನಗಳ ಹಿಂದೆ ಪ್ರತಿ ಕೇಜಿಗೆ 30 ರೂ.ಇದ್ದ ಟೊಮೆಟೋ ಬೆಲೆ ಗುರುವಾರ 22 ರೂ.ಗೆ ಇಳಿದಿದೆ. ಆದರೆ, ಮೂರು ದಿನಗಳ ಹಿಂದೆ ಕೇಜಿಗೆ 30 ರೂ. ಇದ್ದ ಬೀನ್ಸ್ ದರ 40 ರೂ. ಆಗಿದೆ ಎನ್ನುತ್ತಾರೆ ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆ ತರಕಾರಿ ವರ್ತಕರು.
ದರ ಕಡಿಮೆ ಇದ್ದುದರಿಂದ ಹೆಚ್ಚಿನ ರೈತರು ತರಕಾರಿ ಬೆಳೆಗೆ ಮುಂದಾಗದಿದ್ದರ ಜೊತೆಗೆ ಶೀತ ವಾತಾವರಣದಿಂದಾಗಿ ಇಳುವರಿ ಕಡಿಮೆ ಬರುವುದರಿಂದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಏರಿಕೆಯಾಗಿದೆ.-ಡಿ.ಮಂಜುನಾಥ್, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ ಕಳೆದ ಹತ್ತು ದಿನಗಳಿಂದ ಮಾರುಕಟ್ಟೆಗೆ ಟೊಮೆಟೋ ಸೇರಿದಂತೆ ತರಕಾರಿಗಳ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸವಾಗಿರುವುದರಿಂದ ದರ ಹೆಚ್ಚಳ ಆಗುತ್ತಿದೆ.
-ನಾಗರಾಜ್, ಮೇಲ್ವಿಚಾರಕ, ಎಪಿಎಂಸಿ ಮಾರುಕಟ್ಟೆ, ಬಂಡಿಪಾಳ್ಯ ಮಾರುಕಟ್ಟೆಗೆ ತರಕಾರಿಗಳ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ 2-3 ದಿನಗಳಿಂದ ತರಕಾರಿಗಳ ಬೆಲೆ ಜಾಸ್ತಿಯಾಗಿದೆ. ಟೊಮೆಟೋ ಬೆಲೆ ಕಡಿಮೆಯಾಗುತ್ತಿದ್ದು, ಬೀನ್ಸ್ ಬೆಲೆ ಹೆಚ್ಚಾಗುತ್ತಿದೆ.
-ಕೆಂಪೇಗೌಡ, ತರಕಾರಿ ಸಗಟು ವರ್ತಕರು, ಎಪಿಎಂಸಿ, ಬಂಡಿಪಾಳ್ಯ ಇಂದಿನ ತರಕಾರಿ ವಹಿವಾಟಿನ ಬೆಲೆ ಪ್ರತಿ ಕೇಜಿಗೆ (17.01.2019)
ಬೀನ್ಸ್ 40 ರೂ.
ಮೆಣಸಿನಕಾಯಿ 30 ರೂ.
ಸೌತೆಕಾಯಿ 13 ರೂ.
ಗುಂಡು ಬದನೆ 16 ರೂ.
ಕುಂಬಳಕಾಯಿ 4 ರೂ.
ಹೀರೆಕಾಯಿ 25 ರೂ.
ಪಡವಲ ಕಾಯಿ 13 ರೂ.
ತೊಂಡೆಕಾಯಿ 20 ರೂ.
ಹಾಗಲ(ಬಿಳಿ) 30 ರೂ.
ಹಾಗಲ(ಹಸಿರು) 30 ರೂ.
ಕಾಲಿಫ್ಲವರ್ 12 ರೂ.
ದಪ್ಪ ಮೆಣಸಿನಕಾಯಿ 40 ರೂ.
ಬಜ್ಜಿ ಮೆಣಸಿನಕಾಯಿ 32 ರೂ.
ಸೋರೆಕಾಯಿ 8 ರೂ.
ಬಿಳಿ ಬದನೆ 20 ರೂ.
ಕೋಸು 9 ರೂ.
ಸೀಮೆ ಬದನೆ 11 ರೂ.
ಬೆಂಡೆಕಾಯಿ 27 ರೂ.
ಟೊಮೆಟೋ (ಹುಳಿ) 22 ರೂ. * ಗಿರೀಶ್ ಹುಣಸೂರು