ಮೇಕಪ್ ಮ್ಯಾನ್ ಆಗಿದ್ದ ದೇವರಾಜ್ ಕುಮಾರ್, ಇದೀಗ “ನಿಶ್ಯಬ್ಧ 2′ ಚಿತ್ರವನ್ನು ನಿರ್ದೇಶಿಸಿ, ಬಿಡುಗಡೆಗೆ ರೆಡಿಯಾಗಿದ್ದಾರೆ. ಅದಕ್ಕೂ ಮುನ್ನ ಚಿತ್ರತಂಡದೊಂದಿಗೆ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿದ್ದಾರೆ. ಅಂದು ಆ ಸಭಾಂಗಣ ತುಂಬಿತ್ತು. ಆಡಿಯೋ ಬಿಡುಗಡೆಗೆ ಹಿರಿಯ ಸಂಪಾದಕರಾದ ವಿಶ್ವೇಶ್ವರ ಭಟ್ ಹಾಗೂ ರವಿ ಹೆಗಡೆ ಆಗಮಿಸಿದ್ದರು.
ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಅದೊಂದು ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಮಾಡಿರುವ ಸಿನಿಮಾ ಅಂತ ಹೇಳುತ್ತಾ ಹೋದರು ನಿರ್ದೇಶಕರು. “ಹಣದ ಹಿಂದೆ ಬಿದ್ದರೆ ಏನಾಗುತ್ತೆ, ಒಂದು ಕೋಟಿ ಹಣ ಸಿಕ್ಕಾಗ ಹಂಚಿಕೊಳ್ಳುವ ಸಂದರ್ಭದಲ್ಲಿ ಎಂತಹ ಅವಘಡ ಸಂಭವಿಸುತ್ತವೆ ಎಂಬುದು ಚಿತ್ರದ ಕಥೆ. ಇದು ಒಂದೇ ದಿನದಲ್ಲಿ ನಡೆಯುವಂತಹ ಸ್ಟೋರಿ. ಸುಮಾರು 35 ದಿನಗಳ ಕಾಲ ಮಂಗಳೂರು, ಬೆಂಗಳೂರು ಇತರೆಡೆ ಚಿತ್ರೀಕರಿಸಲಾಗಿದೆ’ ಎಂದು ವಿವರ ಕೊಟ್ಟರು ಅವರು.
ಸಂಪಾದಕ ರವಿ ಹೆಗಡೆ ಅವರು, “ಇತ್ತೀಚೆಗೆ ಬರುವ ಹಾಡುಗಳಲ್ಲಿ ಸಾಹಿತ್ಯವೇ ಕೇಳಿಸುವುದಿಲ್ಲ. ಹೆಚ್ಚು ಮ್ಯೂಸಿಕ್ ತುಂಬಿರುತ್ತೆ. ಈ ಚಿತ್ರದಲ್ಲಿ ಸಾಹಿತ್ಯ ಚೆನ್ನಾಗಿದೆ ಎಂಬ ನಂಬಿಕೆ ಇದೆ. ಈಗಂತೂ ಚಿತ್ರದ ನಾಯಕ, ನಾಯಕಿಯರಿಗೆ ಕೊಡುವ ಪ್ರಾಮುಖ್ಯತೆ ಸಂಗೀತಕ್ಕೆ ಕೊಡುವುದಿಲ್ಲ. ಹೀಗಾಗಿ, ಸಿನಿಮಾಗೆ ಪೆಟ್ಟು ಬೀಳುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರಲ್ಲದೆ, ಸಹದ್ಯೋಗಿಯಾಗಿದ್ದ ರವೀಂದ್ರ ಮುದ್ದಿ ಕೆಲಸ ಗೊತ್ತಿದೆ. ಮೊದಲ ಸಲ ಅವರು ಬರೆದಿರುವ ಪದಗಳು ಅಚ್ಚುಕಟ್ಟಾಗಿವೆ ಶುಭವಾಗಲಿ’ ಎಂದರು ಅವರು.
ವಿಶ್ವೇಶ್ವರ ಭಟ್ ಕೂಡ, “ಸಿನಿಮಾ ಹಾಡುಗಳು ಹೆಚ್ಚು ಜನರಿಗೆ ತಲುಪಿದರೆ ಚಿತ್ರ ಅರ್ಧ ಗೆದ್ದಂತೆ. ರವೀಂದ್ರ ಮುದ್ದಿ ಅಪರೂಪದ ಪ್ರತಿಭೆ, ಅವರು ಚಿತ್ರ ಸಾಹಿತ್ಯದಲ್ಲಿ ನಾಯಕರಾಗಿ ಗೆಲುವು ಕಾಣಲಿ’ ಎಂದು ಶುಭ ಹಾರೈಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, “ಹೇಳಿದ ಬಜೆಟ್‌ನೊಳಗೆ ಚಿತ್ರ ಮಾಡಿರುವುದು ನಿರ್ದೇಶಕರ ಜಾಣತನ. ಮಂಗಳೂರು ಕಡೆಯಿಂದ ನಿರ್ಮಾಪಕರು, ನಾಯಕಿಯರು ಆಗಮಿಸುತ್ತಿರುವುದು ಸಂತಸ ತಂದಿದೆ ಅಂದರು.
ಇನ್ನು, ನಾಯಕ ರೂಪ್ ಶೆಟ್ಟಿಗೆ ಇದು ಮೂರನೇ ಸಿನಿಮಾ. ನಾಯಕಿ ಆರಾಧ್ಯ ಶೆಟ್ಟಿಗೆ ಇದು ಹೊಸ ಅನುಭವವಂತೆ. ಚಿತ್ರದಲ್ಲಿ ಎರಡು ನಾಯಿಗಳಿಗೂ ಪ್ರಮುಖ ಪಾತ್ರವಿದೆಯಂತೆ. ಇನ್ನು, ಅವಿನಾಶ್, ಪೆಟ್ರೋಲ್ ಪ್ರಸನ್ನ ಸೇರಿದಂತೆ ಹಲವು ನಟರು ನಟಿಸಿದ್ದಾರೆ. ನಿರ್ಮಾಪಕ ತಾರನಾಥ ಶೆಟ್ಟಿ ಬೋಳಾರ್ ಅವರಿಗೆ ಇದು ಮೊದಲ ಸಿನಿಮಾ. ಅವರಿಗೆ ಸಿನಿಮಾ ಚೆನ್ನಾಗಿ ಮೂಡಿಬಂದಿರುವ ಖುಷಿ ಇದೆ. ಸಮಾರಂಭದಲ್ಲಿ ಸಾಹಿತಿ ಕೆ.ಕಲ್ಯಾಣ್, ನಿರ್ದೇಶಕ ದಯಾಳ್, ಕೆ. ಮಂಜು ಇತರರು ಹಾಜರಿದ್ದರು. ಇವರೆಲ್ಲರ ಮಾತಿಗೂ ಮುನ್ನ ಚಿತ್ರದ ಎರಡು ಹಾಡುಗಳು ಹಾಗೂ ಟ್ರೇಲರ್ ತೋರಿಸಲಾಯಿತು.