Advertisement

ಯಾರಲ್ಲಿ ಸೌಂಡು ಮಾಡೋದು?

12:30 AM Feb 19, 2019 | |

ಸಂಗೀತ, ಸಿನಿಮಾ, ನಾಟಕ, ಟಿ.ವಿ ವಾಹಿನಿ, ಹೀಗೆ ಯಾವುದೇ ಮಾಧ್ಯಮವಾದರೂ ಶಬ್ದ ಪ್ರಮುಖ ಪಾತ್ರ ವಹಿಸುತ್ತದೆ. ವೀಕ್ಷಕರಿಗೆ ವಿನೂತನ ಅನುಭವ ನೀಡುವುದರಲ್ಲಿ ಶಬ್ದದ ಪಾತ್ರ ಹಿರಿದು. ಕಥೆ ಮತ್ತು ದೃಶ್ಯಾವಳಿ ಇವೆರಡನ್ನೂ ತಕ್ಕಡಿಯಲ್ಲಿ ಹಾಕಿ ಅವೆರಡಕ್ಕೂ ಸರಿದೂಗುವಂತೆ ಶಬ್ದ ನೀಡುವ ಸವಾಲನ್ನು ಹೊರುವವನು ಸೌಂಡ್‌ ಡಿಸೈನರ್‌. ಹೀಗಾಗಿಯೇ ಕ್ಯಾಮೆರಾಮನ್‌ಗೆ ಎಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆಯೋ ಅಷ್ಟೇ ಪ್ರಾಮುಖ್ಯತೆ ಸೌಂಡ್‌ ಡಿಸೈನರ್‌ಗೂ ನೀಡಲಾಗುತ್ತದೆ. ಚಿತ್ರಮಂದಿರದಲ್ಲಿ, ಅಥವಾ ಹೆಡ್‌ಫೋನ್‌ ಹಾಕಿಕೊಂಡು ಸಿನಿಮಾ ನೋಡುವಾಗ ಪಾತ್ರಧಾರಿಯ ಚಲನೆಗೆ ತಕ್ಕಂತೆ ಆತನ ದನಿಯೂ ಕೇಳುಗನ ಎಡ ಮತ್ತು ಬಲದ ಕಿವಿಗಳಲ್ಲಿ ಕೇಳುವಂತೆ ಮಾಡುವುಡು ಸೌಂಡ್‌ ಡಿಸೈನರ್‌ನ ಚಾಕಚಕ್ಯತೆಗೆ ಹಿಡಿದ ಕೈಗನ್ನಡಿ. ಒಮ್ಮೆ ಸುಮ್ಮನೆ ಕಣ್ಮುಚ್ಚಿಕೊಂಡು ಸುತ್ತಮುತ್ತಲಿನ ಶಬ್ದಗಳನ್ನು ಆಲಿಸಿ. ಎಷ್ಟೊಂದು ಬಗೆಯ ನಾದಗಳು ಕಿವಿಗೆ ಬೀಳುತ್ತಿದೆಯಲ್ಲವೆ? ಆ ಶಬ್ದಗಳ ತೀವ್ರತೆಯ ಆಧಾರದ ಮೇಲೆ ಸದ್ದನ್ನು ಹೊರಡಿಸುತ್ತಿರುವ ವ್ಯಕ್ತಿ, ವಾಹನ, ವಸ್ತುಗಳು  ದೂರದಲ್ಲಿದೆಯೋ, ಹತ್ತಿರದಲ್ಲಿದೆಯೋ, ಯಾವ ದಿಕ್ಕಿನಲ್ಲಿದೆ ಮುಂತಾದ ಮಾಹಿತಿಯನ್ನು ನಿಖರವಾಗಿ ಊಹಿಸಬಲ್ಲಿರಾ? ಹೌದು ಎಂದಾದರೆ ನಿಮಗೆ ಸೂಕ್ಷ್ಮ ಧ್ವನಿಗ್ರಹಣ ಸಾಮರ್ಥ್ಯ ಇದೆ ಎಂದರ್ಥ. ಜನರ ಧ್ವನಿಯ ಏರಿಳಿತ, ವ್ಯತ್ಯಾಸಗಳನ್ನು ಗ್ರಹಿಸಬಲ್ಲವರಿಗೆ ಸೌಂಡ್‌ ಡಿಸೈನಿಂಗ್‌ ಕ್ಷೇತ್ರ ಸೂಕ್ತವಾದುದು.

Advertisement

ಸೌಂಡ್‌ ಡಿಸೈನರ್‌ ಏನು ಮಾಡುತ್ತಾರೆ?
ಶ್ರವಣೇಂದ್ರಿಯದ ಅನುಭವದ ದಟ್ಟತೆಯನ್ನು ಹೆಚ್ಚಿಸುವವನು ಸೌಂಡ್‌ ಡಿಸೈನರ್‌. ಅವನು ಶಬ್ದವನ್ನು ಸೃಜಿಸುತ್ತಾನೆ ಮತ್ತು ರೆಕಾರ್ಡ್‌ ಮಾಡುತ್ತಾನೆ. ಸಿನೆಮಾ, ಟಿ.ವಿ., ವಿಡಿಯೋ ಗೇಮ್ಸ್‌, ಆನ್‌ಲೈನ್‌ ಮೀಡಿಯಾ, ಜಾಹೀರಾತು, ಅನಿಮೇಷನ್‌, ಮ್ಯೂಸಿಕ್‌ ಆಲ್ಬಮ್‌, ರೇಡಿಯೊ ಮತ್ತು ನಾಟಕ ರಂಗಗಳಲ್ಲಿ – ಅಂದರೆ ಎಲ್ಲ ಮಾಧ್ಯಮಗಳಲ್ಲಿ ಧ್ವನಿಯ ಜವಾಬ್ದಾರಿಯನ್ನು ಸೌಂಡ್‌ ಡಿಸೈನರ್‌ ನಿರ್ವಹಿಸುತ್ತಾನೆ. ಧ್ವನಿ ಮುದ್ರಿಸಿ, ಅಗತ್ಯವಿದ್ದರೆ ಸೌಂಡ್‌ ಎಫೆಕ್ಟ್ಗೆ ಮತ್ತಷ್ಟು ಧ್ವನಿ ಸೇರ್ಪಡೆ ಮಾಡಿ, ಆ ಮುದ್ರಿತ ಧ್ವನಿಗಳನ್ನೆಲ್ಲ ಎಡಿಟ್‌ ಮಾಡಿ ಒಂದು ವಿಭಿನ್ನ ಅನುಭವ ನೀಡುವಾತ ಸೌಂಡ್‌ ಡಿಸೈನರ್‌. 

ಸೌಂಡ್‌ ಡಿಸೈನರ್‌ನ ಕಾರ್ಯಕ್ಷೇತ್ರ
ಸೌಂಡ್‌ ಡಿಸೈನರ್‌ನ ಕಾರ್ಯರಂಗ ಸೌಂಡ್‌ ಸ್ಟುಡಿಯೊ. ಅಲ್ಲಿ ಕಂಪ್ಯೂಟರ್‌ಗಳನ್ನು MIDI (Musical Instrument Digital Interface) ಬಳಸಿ ಅಪೇಕ್ಷಿತ ಧ್ವನಿಗಳನ್ನು ಮುದ್ರಿಸುತ್ತಾನೆ. ಸೌಂಡ್‌ ಡಿಸೈನರ್‌ಗಳು ಸದಾ ಒಂದಿಲ್ಲೊಂದು ಪ್ರಯೋಗಗಳಲ್ಲಿ ನಿರತರಾಗಿರುತ್ತಾರೆ. ಸ್ಟುಡಿಯೊದ ಎಲ್ಲ ಅಂಶಗಳನ್ನು ಅರಿತಿರುವುದು, ಅಲ್ಲಿರುವ ಎಲ್ಲ ಪರಿಕರಗಳನ್ನು ಬಳಸುವ ತಿಳಿವಳಿಕೆ ಪಡೆದಿರುವುದು ಬಹಳ ಮುಖ್ಯ. ಅನಾಲಾಗ್‌ ಟೇಪ್‌ ಮತ್ತು ಡಿಜಿಟಲ್‌ ಮಲ್ಟಿಟ್ರಾಕಿಂಗ್‌ ರೆಕಾರ್ಡಿಂಗ್‌ನ ಬಳಕೆಯನ್ನು ಚೆನ್ನಾಗಿ ಅರಿತಿರಬೇಕು. ಜೊತೆಗೆ ಆ ಯೋಜನೆಯಲ್ಲಿ ಒಳಗೊಂಡಿರುವ ಇತರ ವಿಭಾಗದ ಮುಖ್ಯಸ್ಥರೊಡನೆ ಸಮಾಲೋಚನಾ ಸಭೆ ನಡೆಸಿ ಕಾರ್ಯಪ್ರಗತಿಯ ವಿವರ ನೀಡುವುದು, ಅವರ ಅಪೇಕ್ಷೆಗಳನ್ನು ಅರಿಯುವುದು ಕೂಡ ಸೌಂಡ್‌ ಡಿಸೈನರ್‌ನ ಕರ್ತವ್ಯ. ಸಂಗೀತ ನಿರ್ದೇಶಕರು, ಕಂಪೋಸರ್, ನಟರು, ಗಾಯಕರು, ವಾದಕರು, ರೆಕಾರ್ಡಿಂಗ್‌ ಇಂಜಿನಿಯರ್‌ಗಳು ಮತ್ತು ನಿರ್ಮಾಪಕರು- ಇವರೆಲ್ಲರ ಜೊತೆ ಸೇರಿ ಅವರು ಕೆಲಸ ಮಾಡಬೇಕು. ಬಹುತೇಕ ಸೌಂಡ್‌ ಇಂಜಿನಿಯರ್‌ಗಳು ಫ್ರೀಲಾನ್ಸರ್‌(ಸ್ವತಂತ್ರ) ಆಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಸಿನಿಮಾ, ಟಿ.ವಿ., ಅನಿಮೇಷನ್‌, ವಿಡಿಯೋ ಗೇಮ್‌, ರಂಗಭೂಮಿ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ.

ಬೇಕಾದ ವಿದ್ಯಾರ್ಹತೆ
ಸಂಗೀತದ ಅಭಿರುಚಿ, ಅನುಭವ, ಆಸಕ್ತಿ ಉಳ್ಳವರಿಗೆ ಮೀಡಿಯಾ ಮತ್ತು ಮನರಂಜನಾ ಉದ್ಯಮದಲ್ಲಿ ಸೌಂಡ್‌ ಡಿಸೈನರ್‌ಗಳಾಗಿ ಸೇವೆ ಸಲ್ಲಿಸಬಹುದು. ಮೀಡಿಯಾ ಮತ್ತು ಮಾಸ್‌ ಕಮ್ಯುನಿಕೇಷನ್‌ ಪದವೀಧರರು ಅಥವಾ ಸ್ನಾತಕೋತ್ತರ ಪದವೀಧರರು ಕಲಿಕೆಯ ಸಂದರ್ಭದಲ್ಲಿಯೇ ಸ್ಟುಡಿಯೋಗಳಲ್ಲಿ ಕೆಲಸ ಮಾಡುವುದರಿಂದ ವಿದ್ಯಾರ್ಥಿದೆಸೆಯಲ್ಲಿಯೇ ಸೌಂಡ್‌ ಡಿಸೈನಿಂಗ್‌ ಕುರಿತು ಅನುಭವ ಪಡೆಯುತ್ತಾರೆ. ಇದಲ್ಲದೆ ಸೌಂಡ್‌ ಡಿಸೈನ್‌ ಕುರಿತ ಪದವಿ, ಪಿ.ಜಿ. ಡಿಪ್ಲೊಮಾ ಮತ್ತು ಸರ್ಟಿಫಿಕೇಟ್‌ ಕೋರ್ಸ್‌ಗಳು ಕೂಡಾ ಲಭ್ಯ ಇವೆ. ಖರಗ್‌ಪುರದ ಪ್ರತಿಷ್ಟಿತ ಐಐಟಿ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷ ಅವಧಿಯ ಮೀಡಿಯಾ ಅಡ್‌ ಸೌಂಡ್‌ ಎಂಜಿನಿಯರಿಂಗ್‌ನ ಎಂ.ಟೆಕ್‌, ಪಿ.ಜಿ. ಡಿಪ್ಲೊಮಾ ಪದವಿ ಪಡೆಯಬಹುದು. ವಾರ್ತಾ ಮತ್ತು ಪ್ರಚಾರ ಇಲಾಖೆ (ಐ – ಆ) ಅಡಿಯಲ್ಲಿ ಕೊಲ್ಕತಾದ ಸತ್ಯಜಿತ್‌ ರೇ ಫಿಲ್ಮ್ ಆಂಡ್‌ ಟೆಲಿಷನ್‌ ಇನ್ಸಿಟಿಟ್ಯೂಟಿನಲ್ಲಿ ಪಿ.ಜಿ. ಡಿಪ್ಲೊಮಾ ಇನ್‌ ಎಡಿಟಿಂಗ್‌ ಆ್ಯಂಡ್‌ ಆಡಿಯೊಗ್ರಫಿ ಇವು ಸೌಂಡ್‌ ಡಿಸೈನ್‌ ಸಂಬಂಧಿತ ದೇಶದ ಉನ್ನತ ವಿದ್ಯಾಲಯಗಳಲ್ಲಿ ಕೆಲವು. 

ಇರಬೇಕಾದ ಗುಣಗಳು
1)ಶಾಂತ, ಸಮಾಧಾನದ ಸ್ವಭಾವ, ಮತ್ತೆ ಮತ್ತೆ ಟೇಕ್‌ ತೆಗೆದುಕೊಳ್ಳಬೇಕಾದ ತಾಳ್ಮೆ.
2)ಸಂಶೋಧಕ ಪ್ರವೃತ್ತಿ.
3)ಬಗೆ ಬಗೆಯ ಸಂಗೀತ, ಧ್ವನಿವಾದ್ಯಗಳ ಬಗೆ ಆಸಕ್ತಿ, ಉತ್ತಮ ಧ್ವನಿಗ್ರಹಣ ಶಕ್ತಿ.
4)ಪಿಚ್‌, ರಿದಮ್‌, ಟೆಂಪೊ, ಪೇಸ್‌, ಬೀಟ್‌ಗಳಲ್ಲಿ ಸೂಕ್ಷ್ಮ ವ್ಯತ್ಯಾಸವನ್ನೂ ಗುರುತಿಸಬಲ್ಲ ಸಾಮರ್ಥ್ಯ.
5)ತಂತ್ರಜ್ಞಾನದ ಬಗ್ಗೆ ಒಲವು ಮತ್ತು ತಾಂತ್ರಿಕ ಸಾಧನಗಳನ್ನು ಬಳಸುವ ಪರಿಣತಿ.
6)ನಿಗದಿತ ಸಮಯದೊಳಗೆ ಕೆಲಸವನ್ನು ಮುಗಿಸಬಲ್ಲ ಶಕ್ತಿ ಮತ್ತು 
7)ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಹುಮ್ಮಸ್ಸು.
8)ಉತ್ತಮ ಟೀಮ್‌ ಸ್ಪಿರಿಟ್‌ ಮತ್ತು ಸಂವಹನ ಕೌಶಲ್ಯ.

Advertisement

ರಘು ವಿ.

Advertisement

Udayavani is now on Telegram. Click here to join our channel and stay updated with the latest news.

Next