ಪ್ರೀತಿಯನ್ನು ಮರುಳು ಮಾಡಿ ಪಡೆಯಲಾಗದು. ಅದು ತಾನಾಗಿಯೇ ಹುಟ್ಟಬೇಕಷ್ಟೆ. ಒಂದಂತೂ ನಿಶ್ಚಿತವಾಗಿ ತಿಳಿಯಿತು- ನೀನು ನನ್ನನ್ನು ಎಂದಿಗೂ ಪ್ರೀತಿಸುವುದಿಲ್ಲ. ಆ ಬಗ್ಗೆ ಅತೀವ ದುಃಖವಿದೆ. ಆದರೂ ನಿನಗೆ ಧನ್ಯವಾದ ಹೇಳುವೆ.
ಸುಮಾರು ದಿನಗಳು ಕಳೆದವು… ಇಂದಿಗೂ ನೀನು ಹೇಳಿದ್ದು, ಅಲ್ಲ ಅಲ್ಲ ಹೇಳಿಸಿದ ಮಾತು ನೆನೆದು ನನ್ನ ಮನಸ್ಸು ಅಳುತ್ತಲೇ ಇದೆ. ಆರೇಳು ತಿಂಗಳಿಂದ ಕೋಟೆಯಂತೆ ಸುಭದ್ರವಾಗಿ, ಸುವ್ಯವಸ್ಥಿತವಾಗಿ ಕಟ್ಟಿಕೊಂಡಿದ್ದ ಪ್ರೀತಿಯ ಕೋಟೆಯನ್ನು “ಇಷ್ಟವಿಲ್ಲ’ ಎಂಬ ಮಾತಿನ ಅಣುಬಾಂಬ್ ಹಾಕಿ ನಾಮಾವಶೇಷ ಮಾಡಿಬಿಟ್ಟೆ. ಅಷ್ಟು ತಿಂಗಳಿಂದ ನಿನ್ನ ಆಗಮನಕ್ಕಾಗಿ ಅನುಕ್ಷಣವೂ ಆಸೆಗಣ್ಣಿನಿಂದ ಕಾಯುತ್ತಿದ್ದ ಅಲ್ಲಿನ ಪ್ರತೀ ಕಲ್ಲುಗಳು ಅದೆಷ್ಟು ನೊಂದು ಸಿಡಿದವೋ? ಅದೆಷ್ಟು ಬಾರಿ “ಹೀಗೆ’ ಮಾಡಬೇಡ ಎಂದು ಕೂಗಿದವೋ? ಪುಡಿಯಾಗುವ ಕೊನೆ ಕ್ಷಣದವರೆಗೂ ಅದೆಂತಹ ಸಂಕಟ ಅನುಭವಿಸಿದವೋ? ಆದರೆ ನಿನಗೆ ಕಲ್ಲಿನ ರಾಶಿಯೊಂದನ್ನಷ್ಟೇ ಪುಡಿಮಾಡಿದ ಸಂತೃಪ್ತಿ.
ಅದೇಕಷ್ಟು ಇಷ್ಟವಾದೆಯೋ ನನಗೆ ಗೊತ್ತಿಲ್ಲ. ಹುಡುಗಿಯರನ್ನು ಅಷ್ಟು ಸುಲಭವಾಗಿ ಇಷ್ಟಪಡುವ ವ್ಯಕ್ತಿಯೂ ನಾನಲ್ಲ. ಆದರೆ ನಿನ್ನನ್ನು ಆ ಘಳಿಗೆಯಲ್ಲಿ ನೋಡಿದಾಕ್ಷಣ ಮನಸ್ಸು ಮೆಚ್ಚಿತು. ನೀನೂ ತ್ರಿಪುರ ಸುಂದರಿಯೋ ಅಥವಾ, ಕುಬೇರನ ಮೊಮ್ಮಗಳ್ಳೋ ಆಗಿದ್ದರೆ ನಾನು ಕಣ್ಣೆತ್ತಿಯೂ ಸಹ ನೋಡುತ್ತಿರಲಿಲ್ಲ. ನೀನು ನನ್ನಂತೆ ಹಣ, ಅಂದದಲ್ಲಿ ಸಾಧಾರಣಳೇ. ಜೊತೆಗೆ ಒಂದಷ್ಟು ತಿಳಿದ, ಮಾತನಾಡುವ ಹುಡುಗಿ ಬೇರೆ. ನಡೆ, ನುಡಿ, ಉಡುಪಿನಲ್ಲಿ ಎಂಥವರೂ ಮೆಚ್ಚುವಂತಿರುವ ನೀನು ನನ್ನ ಜೀವನದ ಜೊತೆಯಾದರೆ ಚೆನ್ನಾಗಿರುತ್ತದೆ ಎನ್ನಿಸಿತ್ತು. ಈ ಕಾರಣಗಳೇ ಪ್ರೀತಿ ಕೋಟೆಯ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದವು. ದಿನೇದಿನೆ ನಿನ್ನನ್ನು ನೋಡುತ್ತಾ, ಅಪರೂಪವೆನಿಸುವಷ್ಟು ಮಾತನಾಡುತ್ತಾ, ನಗುತ್ತಾ ಇರುವಾಗ ಪ್ರೀತಿಯ ಕೋಟೆ ಹಂತಹಂತವಾಗಿ ನಿರ್ಮಾಣಗೊಳ್ಳುತ್ತಾ ಹೋಯಿತು. ಕೊನೆಗೆ ಯಾರೂ ಭೇದಿಸಲಾರದಷ್ಟು ಬಲಿಷ್ಠವೂ ಅಯಿತು.
ಆದರೆ ಅದೇಕೋ ಆರಂಭದಿಂದಲೂ ನಿನ್ನ ಜೊತೆ ಸಲುಗೆಯಿಂದ ಇರಲು ಆಗಲೇ ಇಲ್ಲ. ಹತ್ತಿರ ಬಂದಾಗ, ನೀನಾಗಿಯೇ ಮಾತನಾಡಿಸಿದಾಗಲೂ ನಾನು ಒಳಗೊಳಗೇ ಆತಂಕಗೊಳ್ಳುತ್ತಿದ್ದೆ. ಮಾತನಾಡಿಸಬೇಕೆಂಬ ಬಯಕೆಯಿದ್ದರೂ ಪ್ರೀತಿ, ಮೌನವನ್ನು ಮುಂದೆ ತಂದು, ಮಾತನ್ನು ಹಿಂದೆಳೆಯುತ್ತಿತ್ತು. ಒಬ್ಬನೇ ಇರುವಾಗ, ರಾತ್ರಿ ಮಲಗುವಾಗ ನಿನ್ನದೇ ನೆನಪು. ನಿನಗೆ ನನ್ನ ಪ್ರೀತಿಯನ್ನು ಬೇಗನೆ ತಿಳಿಸಿಬಿಡಬೇಕೆಂಬ ಮಹದಾಸೆ. ಈ ಮನೋವೇದನೆಯನ್ನು ಆರೇಳು ತಿಂಗಳುಗಳ ಕಾಲ ಅನುಭವಿಸಿದರೂ ಒಂದು ರೀತಿಯಲ್ಲಿ ಸಮಾಧಾನವಿತ್ತು. ಕಾರಣ ಒಂದು ವೇಳೆ ನೀನು ಇಷ್ಟವಿಲ್ಲವೆಂದರೆ ನನಗೆ ಜೀವವೇ ಹೋದಷ್ಟು ಆಘಾತವಾಗುತ್ತಿತ್ತು. ಅದಕ್ಕಿಂತ ಮನದ ಕೋಟೆಯಲ್ಲಿಯೇ ನನ್ನ ಪ್ರೀತಿಯನ್ನು ಭದ್ರವಾಗಿಡುವ ಹಾಗೂ ನಿನ್ನ ನೆನಪುಗಳನ್ನು ಮೆಲುಕು ಹಾಕುವ ಕಾರ್ಯ ಸುಲಭವೂ, ಬಾಧಕವಲ್ಲದ್ದೂ ಆಗಿತ್ತು.
ಅಂದು, ಕಳೆದ ತಿಂಗಳ ಒಂದು ಭಾನುವಾರ. ಮನಸೇಕೋ ಸೂತ್ರವಿಲ್ಲದ ಗಾಳಿಪಟವಾಗಿತ್ತು. ನೀನೂ ನನ್ನನ್ನು ಇಷ್ಟಪಡುತ್ತಿರುವೆ ಎಂಬ ನಂಬಿಕೆಯ ಅಮಲು, ಸೂಕ್ತ ಕಾರಣಗಳಿಲ್ಲದೆಯೂ ಅತಿಯಾಗಿ ನೆತ್ತಿಗೇರಿತ್ತು. ಮನದ ಹುಚ್ಚಾಟವನ್ನು ತಡೆಯಲಾಗದೆ ಪ್ರೇಮಸಂದೇಶವನ್ನು ಮೊಬೈಲ್ ಮೂಲಕ ನಿನಗೆ ತಲುಪಿಸಿದ್ದಾಯಿತು. ಮುಂದಿನದೆಲ್ಲಾ ನಿನಗೇ ಗೊತ್ತು. ಇದಾದ ಎರಡು ದಿನಗಳಲ್ಲಿಯೇ ನಿನಗೆ ಇಷ್ಟವಿಲ್ಲ ಎಂದು ಸ್ನೇಹಿತೆಯು ತಿಳಿಸಿದಳು. ಆದರೆ ನಾನು ಮೊದಲು ಅಂದುಕೊಂಡಂತೆ ಜೀವ ಹೋದಂಥ ಆಘಾತವೇನೂ ಆಗಲಿಲ್ಲ. ಅಂದ ಮಾತ್ರಕ್ಕೆ ನಿನ್ನ ಮೇಲಿದ್ದದ್ದು ಪ್ರೀತಿಯಲ್ಲ ಎಂದೂ ಅರ್ಥವಲ್ಲ. ಅದರ ಹಿಂದಿನ ದಿನ ನಿನಗೆ ಸಂದೇಶ ಕಳುಹಿಸಿ “ಇಷ್ಟವಿಲ್ಲ’ ಎಂದಾದರೂ ಹೇಳು ಎಂದಾಗ ನೀನು ಒಂದು ಸಂದೇಶವನ್ನೂ ಕಳುಹಿಸಲಿಲ್ಲ. ಆಗಲೇ ಮನಸ್ಸು ನಿನ್ನ ನಿರಾಕರಣೆಯನ್ನು ಊಹಿಸಿತ್ತು. ಪ್ರೀತಿಯ ಕೋಟೆ ನಾಶವಾಗಿ ರುದ್ರಭೂಮಿದಂತಾದ ಮನಸಿನಲ್ಲಿ ನಿನ್ನ ಅಭಿಪ್ರಾಯವನ್ನೂ ಒಪ್ಪಬೇಕೆನ್ನುವ ತಂಗಾಳಿಯಷ್ಟೇ ನನ್ನನ್ನು ತಣ್ಣಗಿರಿಸಿದೆ.
ಇವಿಷ್ಟನ್ನೂ ಹೇಳಿ ನಿನ್ನ ಮನಸ್ಸನ್ನು ಹೇಗಾದರೂ ಸೆಳೆಯಬೇಕೆಂಬ ಅಲ್ಪ ಬುದ್ಧಿ ನನಗಿಲ್ಲ. ನನಗೆ ಗೊತ್ತು; ಪ್ರೀತಿಯನ್ನು ಮರುಳು ಮಾಡಿ ಪಡೆಯಲಾಗದು. ಅದು ತಾನಾಗಿಯೇ ಹುಟ್ಟಬೇಕಷ್ಟೆ. ಒಂದಂತೂ ನಿಶ್ಚಿತವಾಗಿ ತಿಳಿಯಿತು- ನೀನು ನನ್ನನ್ನು ಎಂದಿಗೂ ಪ್ರೀತಿಸುವುದಿಲ್ಲ. ಆ ಬಗ್ಗೆ ಅತೀವ ದುಃಖವಿದೆ. ಆದರೂ ನಿನಗೆ ಧನ್ಯವಾದ ಹೇಳುವೆ. ಒಂದಷ್ಟು ದಿನಗಳ ಕಾಲ ಕಲ್ಪನೆಯಲ್ಲಾದರೂ ನನಗೆ ಪ್ರೇಮಸುಖ ನೀಡಿದೆ. ಜೊತೆಗೆ ನನ್ನನ್ನು ಕ್ಷಮಿಸು… ನಾನಿನ್ನೂ ನಿನ್ನನ್ನೇ ಪ್ರೀತಿಸುತ್ತಿರುವೆ.
ಇಂತಿ,
ನಿನಗೆ ಇಷ್ಟವಿಲ್ಲದವ
ಗೋವರ್ಧನ್