ರಾಕ್ಷಸೀಗುಣ ಎನ್ನುವುದು ಪೂರ್ತಿಯಾಗಿ ಕೆಟ್ಟದ್ದು ಅಂದರೆ ಸರಿನೋ ತಪ್ಪೋ ಗೊತ್ತಿಲ್ಲ. ಯಾಕೆಂದರೆ ಆ ರಾಕ್ಷಸೀಗುಣದ ಮೇಲೆ ಹಿಡಿತವನ್ನು ಸ್ಥಾಪಿಸಿದಾಗಲೇ ಅಲ್ಲವೇ, ಅದೆಷ್ಟೋ ಮಹಾ ಪುರುಷರು ಜನ್ಮತಾಳಿದ್ದು.
ದರೋಡೆಕೋರನ ಸುತ್ತ ವಲ್ಮೀಕ ಬೆಳೆದಾಗಲೇ ಅಲ್ಲವೇ ಅವನು ವಾಲ್ಮೀಕಿಯಾಗಿದ್ದು. ಸೀತೆಯನ್ನ ಅಪಹರಿಸಿದ ಆ ರಾವಣ ಕೂಡ ಪರಶಿವನ ಮಹಾ ಭಕ್ತನೇ. ಹೀಗೆ ಈ ರಾಕ್ಷಸ ಗುಣಗಳ ಬಗ್ಗೆ ಯೋಚಿಸ್ತಾ ಇದ್ದಾಗ ಹಿಡಿಂಬೆಯ ಕಥೆ ನೆನಪಾಯಿತು.
ಮಹಾಭಾರತದಲ್ಲಿ ಹುಡುಕಿದಷ್ಟು ಸಿಗುವ ಅಮೂಲ್ಯ ಪಾತ್ರಗಳಲ್ಲಿ ಹಿಡಿಂಬೆ ಕೂಡ ಒಬ್ಬಳು.
ಹಿಡಿಂಬ ರಕ್ಕಸನ ತಂಗಿಯಾದ ಹಿಡಿಂಬೆ, ನರ ಭಕ್ಷಕಿ ರಕ್ಕಸಿ ಆದರೂ, ಅಂದು ಭೀಮನನ್ನು ನೋಡಿದಾಗ ಅವಳಲ್ಲಿ ಅರಳಿದ ಪ್ರೀತಿ ನಿಜಕ್ಕೂ ಆಶ್ಚರ್ಯಕರ. ಹಾಗಾದರೆ ಪ್ರೀತಿ ಎನ್ನುವುದು ಯಾವ ಮುಳ್ಳಿನ ರಾಶಿಯನ್ನೂ ಹೂವಾಗಿಸಬಹುದಲ್ವ?
ರಕ್ಕಸಿಯ ಮನದಲ್ಲೂ ಅರಳಿದ ಪ್ರೀತಿಯ ಈ ಕಥನ ಅದೆಷ್ಟೋ ಇಂದಿನ ಪ್ರೇಮಿಗಳಿಗೆ ಕೂಡ ಉದಾಹರಣೆ ಅಂದರೆ ತಪ್ಪಿಲ್ಲವೇನೋ.
ಹಲವಾರು ವರ್ಷಗಳಿಂದ ತಾನು ಬೆಳೆಸಿದ ಅಭ್ಯಾಸಗಳನ್ನೇ ಬಿಡಲಾಗದು ಎನ್ನುವ ಕಾರಣಕ್ಕೆ ದೂರಾವಾಗುವ ಈಗಿನ ಕಾಲದ ಪ್ರೇಮಿಗಳ ನಡುವೆ, ನರಭಕ್ಷಕ ರಕ್ಕಸಿಯೊಬ್ಬಳು ಪ್ರೀತಿಸಿ ಮದುವೆಯಾಗಿ ಕೊನೆಗೆ ತನ್ನ ಬದುಕನ್ನೇ ಬದಲಿಸಿದ ಈ ಕಥೆ ಮಹಾಭಾರತದ ಕವಲುಗಳಲ್ಲಿ ನನಗೆ ಪ್ರಿಯವಾದದ್ದು.
ಕೆಲವೇ ದಿನಗಳಲ್ಲಿ ಆ ಪ್ರೀತಿ ಕೈ ಬಿಟ್ಟು ಹೋದರು ಕೂಡ ಕಷ್ಟ ಕಾಲಕ್ಕೆ ಜೊತೆಯಾಗಿ ಪಾಂಡವರ ಸಾಲಲ್ಲಿ ಹಿಡಿಂಬೆಯ ಮಗ ಘಟೋತ್ಕಚ ಯುದ್ಧಕ್ಕೆ ನಿಂತಿದ್ದ. ಕೊನೆಗೆ ಅವನಲ್ಲಿದ್ದ ರಾಕ್ಷಸ ಗುಣದ ಸಂಹಾರಕ್ಕೆ ಕರ್ಣ ಇಂದ್ರಾಸ್ತ್ರವನ್ನು ಪ್ರಯೋಗಿಸಬೇಕಾಯಿತು ಎಂದಾದರೆ ರಾಕ್ಷಸ ಗುಣದಲ್ಲೂ ಭಗವಂತನ ಪಕ್ಷದಲ್ಲಿ ನಿಲ್ಲುವಷ್ಟು ಬಲಿಷ್ಠ ಸಂಸ್ಕಾರ ನೀಡಿ ಬೆಳೆಸಿದ ಆ ರಾಕ್ಷಸಿಯ ಒಳಗಿರುವ ಅಪಾರವಾದ ಆ ಶಕ್ತಿ “ತಾಯಿ” ಅಲ್ವಾ?
ಕೆಸರಲ್ಲಿ ಅರಳಿದ ಕಮಲದಂತೆ, ರಾಕ್ಷಸಿಯ ಒಳಗೆ ಬೆಳಗಿದ ತಾಯ್ತನದ ಈ ಕಥನ ಮಹಾಭಾರತದ ನಡುವಿನ ಅಮೂಲ್ಯ ರತ್ನ.
ತೇಜಸ್ವಿನಿ