Advertisement

ಕ್ಷಮಿಸು ಮಗಳೇ! -5 ವರ್ಷದ ಮಗುವಿನ ಅತ್ಯಾಚಾರ, ಹತ್ಯೆ: ಕ್ಷಮೆಯಾಚಿಸಿದ ಪೊಲೀಸರು

08:30 PM Jul 30, 2023 | Team Udayavani |

ತಿರುವನಂತಪುರಂ: ಮಧ್ಯಪ್ರದೇಶದಲ್ಲಿ ಬಾಲಕಿ ಅತ್ಯಾಚಾರ ಘಟನೆ ಬೆನ್ನಲ್ಲೇ, ಕೇರಳದಲ್ಲಿ 5 ವರ್ಷದ ಮಗುವನ್ನು ಅಪಹರಿಸಿ, ಅತ್ಯಾಚಾರವೆಸಗಿ ಹತ್ಯೆಗೈದಿರುವ ಪೈಶಾಚಿಕ ಕೃತ್ಯ ವರದಿಯಾಗಿದ್ದು, ಮಗುವಿನ ಅಂತಿಮಯಾತ್ರೆಯನ್ನು ಭಾನುವಾರ ನಡೆಸಲಾಗಿದೆ. ಅಂತ್ಯಸಂಸ್ಕಾರದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು, ಅಪರಾಧಿಗೆ ಮರಣದಂಡನೆ ವಿಧಿಸಲು ಆಗ್ರಹಿಸಿದ್ದಾರೆ.

Advertisement

ಎರ್ನಾಕುಲಂ ಜಿಲ್ಲೆಯ ಅಲುವಾದಲ್ಲಿ ಬಿಹಾರ ಮೂಲದ ವಲಸಿಗರಾಗಿ ವಾಸಿಸುತಿದ್ದ ದಂಪತಿಯೊಬ್ಬರ 5 ವರ್ಷದ ಮಗು ಶುಕ್ರವಾರ ಮಧ್ಯಾಹ್ನ ನಾಪತ್ತೆಯಾಗಿತ್ತು. ಪ್ರಕರಣ ದಾಖಲಿಸಿ ಮಗುವಿಗಾಗಿ ಹುಡುಕಾಟ ನಡೆಸಲಾಗಿದೆ. ಆದರೆ, 20 ಗಂಟೆಗಳವರೆಗೆ ಮಗುವಿನ ಪತ್ತೆಯಾಗಿಲ್ಲ.

ಬಳಿಕ ದಂಪತಿ ವಾಸವಿದ್ದ ಕಟ್ಟಡದಲ್ಲೇ, ವಾಸವಿದ್ದ ಬಿಹಾರ ಮೂಲದ ವಲಸಿಗನೊಬ್ಬನನ್ನು ಮಗುವಿನ ಅಪಹರಣದ ಶಂಕೆಯ ಮೇಲೆ ಪೊಲೀಸರು ಬಂಧಿಸಿದ್ದು, ಆತ ತಪ್ಪೊಪ್ಪಿಕೊಂಡ ಬಳಿಕ ಶನಿವಾರ ಮಧ್ಯಾಹ್ನದ ವೇಳೆಗೆ ಅಲುವಾ ಮಾರ್ಕೆಟ್‌ ಒಂದರ ಬಳಿ ಮಗುವಿನ ದೇಹ ರಕ್ತಸಿಕ್ತ ಸ್ಥಿತಿಯಲ್ಲಿ, ಪ್ಲಾಸ್ಟಿಕ್‌ ಕವರ್‌ ಒಂದರಲ್ಲಿ ಸುತ್ತಿಟ್ಟುರುವುದು ಪತ್ತೆಯಾಗಿದೆ. ಮಗುವಿನ ಮೇಲೆ ಅತ್ಯಾಚಾರವೆಸಗಿ, ಹತ್ಯೆಗೈದಿರುವುದು ತಿಳಿದುಬಂದಿದೆ.

ಸಿಹಿ ಕೊಡಿಸುವ ಆಸೆ ತೋರಿಸಿ ಅಪಹರಣ
ಆರೋಪಿಯು ಮಗುವಿಗೆ ಸಿಹಿ ತೆಗೆಸಿಕೊಡುವುದಾಗಿ ತಿಳಿಸಿ, ಮಾರ್ಕೆಟ್‌ಗೆ ಕರೆದೊಯ್ದಿದ್ದಾನೆ. ಮಾರ್ಗಮಧ್ಯೆ ನೆರೆಮನೆಯವರು ವಿಚಾರಿಸಿದಾಗ ಇದು ತನ್ನದೇ ಮಗು, ಮಾರ್ಕೆಟ್‌ ತೋರಿಸುವುದಕ್ಕಾಗಿ ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಕೃತ್ಯದಲ್ಲಿ ಮತ್ತೂ ಯಾರೋ ಭಾಗಿಯಾಗಿರುವ ಶಂಕೆ ಇದ್ದು, ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಶಾಲೆಯಲ್ಲಿ ಅಂತಿಮ ದರ್ಶನ
ಅಲುವಾದ ಸ್ಥಳೀಯ ಶಾಲೆಯೊಂದರಲ್ಲಿ ಮಗು 1ನೇ ತರಗತಿ ವ್ಯಾಸಂಗ ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಅದೇ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ನೂರಾರು ಸಂಖ್ಯೆಯಲ್ಲಿ ಜನರ ಮಗುವಿನ ಅಂತಿಮ ದರ್ಶನ ಪಡೆದಿದ್ದು, ಕಂಬನಿ ಮಿಡಿದಿದ್ದಾರೆ. ನಗರದ ಹಲವಾರು ಶಾಲೆಗಳನ್ನು ಮುಚ್ಚಿ, ನಮನ ಸಲ್ಲಿಸಲಾಗಿದೆ. ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ಜನರು ಪಟ್ಟು ಹಿಡಿದಿದ್ದಾರೆ.

Advertisement

ಕ್ಷಮೆಯಾಚಿಸಿದ ಪೊಲೀಸರು
ಸತತ ಪ್ರಯತ್ನಗಳ ಹೊರತಾಗಿಯೂ ಮಗುವನ್ನು ಸುರಕ್ಷಿತವಾಗಿ ಕರೆತರಲಾಗದ್ದಕ್ಕೆ ಕೇರಳ ಪೊಲೀಸರು ಕ್ಷಮೆಯಾಚಿಸಿದ್ದಾರೆ. ಅಲ್ಲದೇ, ಟ್ವಿಟರ್‌ನಲ್ಲಿ ಕ್ಷಮಿಸು ಮಗಳೇ ಎಂದು ಪೋಸ್ಟ್‌ ಹಾಕಿದ್ದು, ಮಗುವಿನ ದಾರುಣ ಅಂತ್ಯಕ್ಕೆ ನೆಟ್ಟಿಗರು ಕೂಡ ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next