Advertisement

ಸೊರಬ : ನಿವೇಶನ ಹಂಚಿಕೆಯಲ್ಲಿ ಅನ್ಯಾಯ : ನಿವೇಶನ ವಂಚಿತರಿಂದ ಪುರಸಭೆ ಮುಂದೆ ಪ್ರತಿಭಟನೆ

04:47 PM Jun 07, 2022 | Team Udayavani |

ಸೊರಬ : ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ನಿವೇಶನ ರಹಿತರಿಗೆ ಮನೆ ನಿರ್ಮಾಣ ಮಾಡುವ ಸಂಬಂಧ ಪ್ರಕಟಗೊಳಿಸಿರುವ ಪಟ್ಟಿಯಲ್ಲಿ ಬಡವರಿಗೆ ಅನ್ಯಾಯಾಗಿದೆ ಎಂದು ಆರೋಪಿಸಿ ಯುವ ಹೋರಾಟ ಸಮಿತಿ, ದಲಿತ ಸಂಘರ್ಷ ಸಮಿತಿ, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಹಾಗೂ ನಿವೇಶನ ವಂಚಿತರು ಪಟ್ಟಣದ ಪುರಸಭೆ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಮಹೇಶ ಶಕುನವಳ್ಳಿ ಮಾತನಾಡಿ, ಪಟ್ಟಣ ಪಂಚಾಯ್ತಿಯಿಂದ ಪುರಸಭೆಯಾಗಿ ಮೇಲ್ದರ್ಜೆ ಏರಿಕೆಯಾಗಿದ್ದು, ನಿವೇಶನ ಹಂಚಿಕೆಯಲ್ಲಿ ಉಳ್ಳವರಿಗೆ ಆದ್ಯತೆ ನೀಡಲಾಗಿದೆ. ಪುರಸಭೆಯ ಮುಖ್ಯಾಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಆಶ್ರಯ ಸಮಿತಿಯ ಸದಸ್ಯರು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಕೂಡಲೇ ಪ್ರಕಟವಾಗಿರುವ ಆಶ್ರಯ ಸಮಿತಿಯ ನಿವೇಶನ ಹಂಚಿಕೆಯ ಪಟ್ಟಿಯನ್ನು ರದ್ದುಗೊಳಿಸಬೇಕು. ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಯುವ ಹೋರಾಟ ಸಮಿತಿಯ ಕಾರ್ಯದರ್ಶಿ ಜಿ. ಕೆರಿಯಪ್ಪ ಮಾತನಾಡಿ, ವಸತಿ ರಹಿತರಿಗೆ ಸೂರು ಕಲ್ಪಿಸಬೇಕು ಎನ್ನುವ ಮಹತ್ವಾಕಾಂಕ್ಷಿ ಯೋಜನೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಪುರಸಭೆ ಜಂಟಿಯಾಗಿ ಅನುಷ್ಠಾನ ಮಾಡುತ್ತಿರುವ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ಜಿ ಪ್ಲಸ್ 2 ಗುಂಪು ಮನೆಗಳನ್ನು ನಿರ್ಮಾಣ ಮಾಡಲು ಫಲಾನುಭವಿಗಳ ಪಟ್ಟಿಯನ್ನು ಪ್ರಕಟ ಮಾಡಲಾಗಿದೆ. ಆದರೆ, ಫಲಾನುಭವಿಗಳ ಪಟ್ಟಿಯಲ್ಲಿ ಉಳ್ಳವರ ಹೆಸರು ಪಟ್ಟಿಯಲ್ಲಿದೆ. ಅರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದ್ದು, ಇದು ನಿಜಕ್ಕೂ ಅನ್ಯಾಯ. ಆಶ್ರಯ ಸಮಿತಿಯ ಅಧ್ಯಕ್ಷರಾಗಿರುವ ಸ್ಥಳೀಯ ಶಾಸಕರು ಪಟ್ಟಿಯನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕು. ಅನರ್ಹರನ್ನು ರದ್ದುಗೊಳಿಸಬೇಕು ಎಂದರು.

ಇದನ್ನೂ ಓದಿ :ಪಣಜಿ : ಸ್ನೇಹಿತನನ್ನೇ ಅಪಹರಿಸಿ 70 ಲಕ್ಷಕ್ಕೆ ಬೇಡಿಕೆ ಇಟ್ಟವರು ಕಡೆಗೂ ಪೊಲೀಸರ ಬಲೆಗೆ

ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಮಾತನಾಡಿ, ಅನೇಕ ಬಡವರಿಗೆ ಅನ್ಯಾಯವಾಗಿರುವುದನ್ನು ಸಹಿಸಲು ಸಾಧ್ಯವಿಲ್ಲ. ಆಶ್ರಯ ಫಲಾನುಭವಿಗಳ ಪಟ್ಟಿಯೇ ದೋಷಪೂರಿತವಾಗಿದೆ ಎಂದು ಪಟ್ಟಿಯ ಪ್ರತಿಯನ್ನು ಸುಡುವ ಮೂಲಕ ಆಕ್ರೋಶ ಹೊರಹಾಕಿದರು.

Advertisement

ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಈರೇಶ್ ಮೇಸ್ತ್ರಿ ಮಾತನಾಡಿ, ಫಲಾನುಭವಿಗಳ ಆಯ್ಕೆಯ ಕುರಿತು ತಮ್ಮ ಗಮನಕ್ಕೆ ಬಂದಿಲ್ಲ. ಈ ಕುರಿತು ಆಶ್ರಯ ಸಮಿತಿಯ ಅಧ್ಯಕ್ಷರಾದ ಶಾಸಕರ ಗಮನಕ್ಕೆ ತರಲಾಗುವುದು. ಆಶ್ರಯ ಸಮಿತಿಯ ಸಭೆ ಕರೆದು ಗೊಂದಲಗಳ ನಿವಾರಣೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಯುವ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಭಂಡಾರಿ, ಸಹ ಕಾರ್ಯದರ್ಶಿ ಸಂಜೀವ್ ಆಚಾರ್, ಡಿಎಸ್‍ಎಸ್ ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್, ತಾಲೂಕು ಸಂ ಸಂಚಾಲಕ ಹರೀಶ್ ಚಿಟ್ಟೂರು, ಪ್ರಮುಖರಾದ ನಾಗಪ್ಪ ಮಾಸ್ತರ್, ಪರಶುರಾಮ ಸಣ್ಣಬೈಲ್, ಯು. ಫಯಾಜ್ ಅಹ್ಮದ್, ಕುಮಾರ್ ಹಿರೇಶಕುನ, ಮೋಹನ್ ಹಿರೇಶಕುನ, ರವಿ ಗುಡಿಗಾರ್, ಪ್ರಶಾಂತ, ಗಣೇಶ, ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನಿವೇಶನ ವಂಚಿತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next