ಸೊರಬ: ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ, ಕ್ರಮ ಕೈಗೊಳ್ಳಬೇಕಾದ ಅಬಕಾರಿ ಇಲಾಖೆಯ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಸಾರ್ವಜನಿಕರಿಂದ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
Advertisement
ಇಲ್ಲಿನ ಕಾನಕೇರಿ ಸೇರಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕೃಷಿ ಕಾರ್ಮಿಕರು, ಯುವಕರು ಮದ್ಯದ ಚಟಕ್ಕೆ ದಾಸರಾಗುತ್ತಿದ್ದು, ಅವರ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಗ್ರಾಮೀಣ ಪ್ರದೇಶದ ಗೂಡಂಗಡಿ, ಕಿರಾಣಿ ಅಂಗಡಿಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.
55050 ಬಾಕ್ಸ್ ಮದ್ಯ ಮಾರಾಟದ ಗುರಿಯನ್ನು ವಲಯ ಅಬಕಾರಿ ಇಲಾಖೆ ಹೊಂದಿತ್ತು. ಈ ಪೈಕಿ 51871 ಬಾಕ್ಸ್ ಮದ್ಯ ಮಾರಾಟ ಮಾಡಲಾಗಿದೆ. ಕಳೆದ ಜುಲೈನಲ್ಲಿ ಶೇ. 85, ಆಗಸ್ಟ್‌ನಲ್ಲಿ ಶೇ. 99, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಶೇ. 97ರಷ್ಟು ಗುರಿ ತಲುಪಲಾಗಿದೆ. ಮೇಲಧಿ ಕಾರಿಗಳಿಂದ ಪ್ರಶಂಸೆ ಪಡೆಯಲು ಸ್ಥಳೀಯ ಮದ್ಯದ ಅಂಗಡಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಮದ್ಯ ಮಾರಾಟಗಾರರು (ಸನ್ನದುದಾರರು) ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುವವರಿಗೆ ಮದ್ಯ ಪೂರೈಕೆ ಮಾಡುತ್ತಿದ್ದು, ಇವರಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
Related Articles
Advertisement
ಕೇಸು ಇಲ್ಲ-ಕಂಪ್ಲೆಂಟು ಇಲ್ಲ: ಜುಲೈನಿಂದ ಸೆಪ್ಟೆಂಬರ್‌ವರೆಗೆ ಸ್ಥಳೀಯ ಅಬಕಾರಿ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಹಲವು ಅನುಮಾನಕ್ಕೆ ಕಾರಣವಾಗುತ್ತದೆ. ಜುಲೈನಲ್ಲಿ ಕೇವಲ 0.090 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಆಗಸ್ಟ್‌ನಲ್ಲಿ 0.240 ಲೀ. ಮದ್ಯ, ಸೆಪ್ಟೆಂಬರ್‌ನಲ್ಲಿ 0.400 ಲೀ., ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಇವೆಲ್ಲವೂ ನೆಪ ಮಾತ್ರಕ್ಕೆ ಎನ್ನುವ ಸತ್ಯ ಮೇಲ್ನೋಟಕ್ಕೆ ಗೋಚರಿಸುತ್ತದೆ. ಇತ್ತ ಅಧಿಕಾರಿಗಳು ಮೇಲಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಲು ಒಂದೆಡೆ ಅಕ್ರಮ ಮದ್ಯ ಮಾರಾಟಕ್ಕೆ ಪ್ರೋತ್ಸಾಹ ನೀಡುತ್ತಿದ್ದರೆ, ಮತ್ತೂಂದೆಡೆ ಸಣ್ಣ ಪುಟ್ಟ ಪ್ರಕರಣಗಳನ್ನು ದಾಖಲಿಸುವ ಮೂಲಕ ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಲು ಯತ್ನಿಸುತ್ತಿದ್ದಾರೆ. ಒಟ್ಟಾರೆ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.