ಸೊರಬ: ಕೋವಿಡ್ ಯೋಧರಾಗಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಶ್ರಮ ಸ್ಮರಣೀಯ. ನಿತ್ಯ ಮನೆ- ಮನೆ ಭೇಟಿ ನೀಡಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಮಾತೃ ಸ್ವರೂಪರು ಎಂದು ಜಿಪಂ ಸದಸ್ಯ ಶಿವಲಿಂಗೇ ಗೌಡ ಹೇಳಿದರು.
ತಾಲೂಕಿನ ಜಡೆ ಜಿಪಂ ಕ್ಷೇತ್ರ ವ್ಯಾಪ್ತಿಯ ತುಮರಿಕೊಪ್ಪ ಗ್ರಾಮದಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಮಾರ್ಗದರ್ಶನದಲ್ಲಿ ಎಸ್. ಬಂಗಾರಪ್ಪ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆ, ದಿನಸಿ ಕಿಟ್ ವಿತರಣೆ ಹಾಗೂ ಗೌರವಪೂರ್ವಕ ಉಡಿ ತುಂಬಿ, ಸೀರೆ ಮತ್ತು ಛತ್ರಿಯನ್ನು ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಶಾ ಕಾರ್ಯಕರ್ತೆಯರಿಗೆ ತಮ್ಮದೇ ಆದ ಕುಟುಂಬವಿದೆ. ಸಮಾಜದ ಆರೋಗ್ಯಕ್ಕಾಗಿ ಶ್ರಮಿಸುವ ಅವರ ಕಾರ್ಯವನ್ನು ಗೌರವಯುತವಾಗಿ ಕಾಣಬೇಕು. ತಮ್ಮ ಜೀವದ ಹಂಗು ತೊರೆದು ಕೋವಿಡ್ ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆರಿಗೆ ಸರ್ಕಾರ ಸೌಲಭ್ಯಗಳನ್ನು ಒದಗಿಸಬೇಕು. ಜೊತೆಗೆ ಸೇವೆಯನ್ನು ಕಾಯಂಗೊಳಿಸಿ ಜೀವನ ಭದ್ರತೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಬಂಗಾರಪ್ಪ ಅಭಿಮಾನಿ ಬಳಗದ ಎಚ್. ಗಣಪತಿ ಹುಲ್ತಿಕೊಪ್ಪ ಮಾತನಾಡಿ, ಕೊರೊನಾ ಜಾಗೃತಿ ಮೂಡಿಸುವಲ್ಲಿ ಆಶಾ ಕಾರ್ಯಕರ್ತೆಯರ ಶ್ರಮ ಸಾಕಷ್ಟಿದೆ. ಅವರ ಸೇವೆಯನ್ನು ಗುರುತಿಸಿ ಮಧು ಬಂಗಾರಪ್ಪ ಅವರ ಮಾರ್ಗದರ್ಶನದಲ್ಲಿ ಗೌರವಿಸಲಾಗುತ್ತಿದೆ. ಇದೊಂದು ಜಾತ್ಯಾತೀತ ವಾದ ಕಾರ್ಯಕ್ರಮವಾಗಿದೆ ಎಂದರು.
ಅಶ್ವಿನಿ ಶಿವಲಿಂಗೇಗೌಡ, ಅಂಜಲಿ ಸಂಜೀವ್ ಲಕ್ಕವಳ್ಳಿ, ರೇಣುಕಮ್ಮ ಮಂಜುನಾಥ್, ಸುನಂದಮ್ಮ, ಮಂಜುಳಾ ಮಂಜುಪ್ಪ ಗೌಡ ಜಡೆ ಜಿಪಂ ವ್ಯಾಪ್ತಿಯ ಆಶಾ ಕಾರ್ಯಕರ್ತೆರಿಗೆ ಉಡಿ ತುಂಬಿದರು. ಪ್ರಮುಖರಾದ ಪಪಂ ಸದಸ್ಯ ಡಿ.ಎಸ್. ಪ್ರಸನ್ನಕುಮಾರ್ ದೊಡ್ಮನೆ, ಸಂಜೀವ ಲಕ್ಕವಳ್ಳಿ, ಬಸವರಾಜ ಗೌಡ, ಮಾಲತೇಶ್, ಹೊಳೆಲಿಂಗಪ್ಪ, ಮಂಜುನಾಥ ತಲಗಡ್ಡೆ, ಬಂಗಾರಪ್ಪ ಅಭಿಮಾನಿ ಬಳಗದ ಜೆ.ಎಸ್. ನಾಗರಾಜ, ಸೈಯದ್ ಅನ್ಸರ್ ಇತರರಿದ್ದರು.