ಎಚ್.ಕೆ.ಬಿ. ಸ್ವಾಮಿ
ಸೊರಬ: ತಾಲೂಕಿನ ವಾಣಿಜ್ಯ ಕೇಂದ್ರವಾದ ಆನವಟ್ಟಿಯನ್ನು ತಾಲೂಕು ಕೇಂದ್ರವಾಗಿ ರಚಿಸುವಂತೆ ಸಾರ್ವಜನಿಕರು ಧ್ವನಿ ಎತ್ತುತ್ತಿದ್ದಂತೆ, ಬನವಾಸಿ ಭಾಗದ ಮಂದಿ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಪ್ರಮುಖ ಹೋಬಳಿಯಾದ ಆನವಟ್ಟಿಯನ್ನು ತಾಲೂಕು ಕೇಂದ್ರವಾಗಿಸುವಂತೆ ದಶಕಗಳಿಂದಲೂ ಹೋರಾಟ ನಡೆಯುತ್ತಿದೆ. 150 ಗ್ರಾಮಗಳನ್ನೊಳಗೊಳ್ಳವ ಕೇಂದ್ರವು ಆಡಳಿತಾತ್ಮಕವಾಗಿ ಸರ್ವ ರೀತಿಯಲ್ಲಿಯೂ ಸೌಲಭ್ಯ ಹೊಂದಿದ ಆಯಕಟ್ಟಿನ ಸ್ಥಳ ಎನ್ನುವುದು ಪ್ರತ್ಯೇಕ ತಾಲೂಕು ಹೋರಾಟ ಸಮಿತಿಯ ವಾದವಾಗಿದೆ. ಈ ನಿಟ್ಟಿನಲ್ಲಿ ಆನವಟ್ಟಿಯ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆದ ದಿನವೇ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಜನತೆ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಪರ-ವಿರೋಧ ಚರ್ಚೆ: ತಾಲೂಕು ಕೇಂದ್ರದ ಗಡಿ ಗ್ರಾಮಗಳಾದ ಬಾರಂಗಿ, ಎಣ್ಣೆಕೊಪ್ಪ, ಯಲಿವಾಳ ಸೇರಿ ಬಹುತೇಕ ಹಾನಗಲ್ಲ ಮತ್ತು ಹಿರೇಕೆರೂರು ತಾಲೂಕಿಗೆ ಹೊಂದಿಕೊಂಡಂತಿರುವ ಗ್ರಾಮಗಳ ಜನತೆ ಸರ್ಕಾರಿ ಕೆಲಸಗಳಿಗೆ ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸುಮಾರು 30 ಕಿಮೀ ದೂರದ ತಾಲೂಕು ಕೇಂದ್ರ ಸೊರಬಕ್ಕೆ ಹೋಗುವ ಸ್ಥಿತಿ ಇದೆ. ಆನವಟ್ಟಿ ತಾಲೂಕು ಕೇಂದ್ರ ಘೋಷಣೆಯಾಗುವುದರಿಂದ ಅನುಕೂಲವಾಗಲಿದೆ ಎನ್ನುವುದು ಆನವಟ್ಟಿ ಭಾಗದ ಜನತೆಯ ಅಭಿಪ್ರಾಯವಾಗಿದ್ದರೆ, ಬನವಾಸಿಯನ್ನು ಯಾವುದೇ ಕಾರಣಕ್ಕೂ ಆನವಟ್ಟಿಗೆ ಸೇರಿಸಬಾರದು, ಐತಿಹಾಸಿಕ ಮಹತ್ವದ ಹಿನ್ನೆಲೆಯ ಬನವಾಸಿಯನ್ನೇ ಹೊಸ ತಾಲೂಕು ಕೇಂದ್ರವಾಗಿಸಬೇಕು. ಅವಶ್ಯಕವಿದ್ದಲ್ಲಿ ಶಿರಸಿಯನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕು ಎಂದು ಬನವಾಸಿಯಲ್ಲಿ 11 ಗ್ರಾಮಗಳ ಸುಮಾರು 2500 ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಸ್ವಯಂ ಪ್ರೇರಿತ ಬಂದ್ ಆಚರಿಸಿರುವುದು ಗಮನಾರ್ಹ ಸಂಗತಿ.
ಸಮಸ್ಯೆಗಳ ಸರಮಾಲೆ ಆಗಲಿದೆಯೇ?: ಶಿರಸಿ ತಾಲೂಕಿನ ಬನವಾಸಿ ಮತ್ತು ಹಾನಗಲ್ ತಾಲೂಕಿನ ತಿಳುವಳ್ಳಿ, ಶಿಕಾರಿಪುರ ತಾಲೂಕಿನ ತೊಗರ್ಸಿ ಹೋಬಳಿಗಳ ಭೂಪ್ರದೇಶವನ್ನು ಸೇರ್ಪಡೆಗೊಳಿಸಿ ನೂತನ ಆನವಟ್ಟಿ ತಾಲೂಕು ಕೇಂದ್ರ ರಚಿಸುವ ಉದ್ದೇಶವಾಗಿದೆಯಾದರೂ, ನೂತನ ಆನವಟ್ಟಿ ತಾಲೂಕು ಕೇಂದ್ರ ಘೋಷಣೆಯಾದರೆ, ವಿಧಾನಸಭಾ ಕ್ಷೇತ್ರಗಳ ಮರುವಿಂಗಡನೆಯಾಗುವುದು ಕನಿಷ್ಠ ಮೂರ್‍ನಾಲ್ಕು ದಶಕಗಳೇ ತಗುಲಬಹುದು. ಅಲ್ಲಿಯವರೆಗೂ ಅಭಿವೃದ್ಧಿಗೆ ಸಾಕಷ್ಟು ಹಿನ್ನೆಡೆಯಾಗಲಿದೆ. ಕೆಡಿಪಿ ಸಭೆ ನಡೆಯುವ ಸಂದರ್ಭ ಶಿಕಾರಿಪುರ, ಶಿರಸಿ, ಸೊರಬ, ಹಾನಗಲ್ ಹಾಗೂ ಹಿರೇಕೆರೂರು ಕ್ಷೇತ್ರಗಳ ಶಾಸಕರು ಸಭೆಗೆ ಹಾಜರಾಗಬೇಕಾದ ಸ್ಥಿತಿ ಎದುರಾಗಬಹುದು. ಮತದಾನ ಕ್ಷೇತ್ರವೇ ಬೇರೆ, ಸೌಲಭ್ಯ ಪಡೆಯಲು ತಾಲೂಕು ಬೇರೆಯಾಗಬಹುದು. ಈ ನಿಟ್ಟಿನಲ್ಲಿ ಹಲವು ಗ್ರಾಮಗಳ ಜನತೆ ಮತ್ತಷ್ಟು ಸಮಸ್ಯೆಗಳ ಸುಳಿಗೆ ಸಿಲುಕುವರು ಎನ್ನಲಾಗುತ್ತಿದೆ.