ಮಂಡ್ಯ/ಮದ್ದೂರು: ಜಿಲ್ಲೆಯಲ್ಲಿ ಜಾರಿ ಹಂತದಲ್ಲಿರುವ 15 ನೀರಾವರಿ ಕಾಮಗಾರಿಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ವಿಶ್ವೇಶ್ವರಯ್ಯ ನಾಲೆಯ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾ ಗುವುದು ಎಂದು ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಭರವಸೆ ನೀಡಿದರು. ಮಂಡ್ಯ ತಾಲೂಕಿನ ತೂಬಿನಕೆರೆ ಹೆಲಿಪ್ಯಾಡ್ ಆವರಣದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಕೊತ್ತತ್ತಿ ಹೋಬಳಿಯ 28 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಹಾಗೂ 5 ಕೆರೆಗಳಿಗೆ ನೀರು ತುಂಬಿಸುವ 18.5 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಯೋಜನೆಗಳು ಕಾಲಮಿತಿಯೊಳಗೆ ಪೂರ್ಣ ಗೊಳಿಸಲಾಗುವುದು. ವ್ಯವಸಾಯ ಮತ್ತು ಗೃಹ ಬಳಕೆಗೆ ನೀರು ಕಲ್ಪಿಸುವುದು ಪ್ರತಿ ಸರ್ಕಾರದ ಕರ್ತವ್ಯ. ಇದನ್ನು ಯಡಿಯೂರಪ್ಪ ಅವರ ಸರ್ಕಾರ ಅರ್ಥ ಮಾಡಿಕೊಂಡಿದೆ. ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದಟಛಿವಾಗಿದೆ. ಅದರಲ್ಲಿ ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಯೋಜನೆ ಅತ್ಯಂತ ಉಪಯುಕ್ತ: ಈ ಯೋಜನೆಯನ್ನು ಜನರಿಗೆ ಅರ್ಪಿಸುತ್ತಿ ರುವುದು ಸಂತೋಷ ಉಂಟು ಮಾಡಿದೆ. ಕೆರೆಗಳಿಗೆ ನೀರು ತುಂಬಿಸುವ ಮೂಲಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಎಲ್ಲೆಡೆ ಹಸಿರು ಮೂಡಿ ಜನ ಜಾನುವಾರುಗಳಿಗೆ ಅನುಕೂಲ ವಾಗುತ್ತದೆ. ಹೀಗಾಗಿ ಈ ಯೋಜನೆ ಅತ್ಯಂತ ಉಪಯುಕ್ತ. ಲೋಕಪಾವನಿ ನದಿಯಿಂದ ಎಲೆಚಾಕನಹಳ್ಳಿ, ರಾಗಿಮುದ್ದನಹಳ್ಳಿ, ಕಾಳೇನಹಳ್ಳಿ, ಉರಮಾರಕಸಲಗೆರೆ, ಜಕ್ಕನಹಳ್ಳಿ, ಅಲಗೂಡು ಕೆರೆಗಳಿಗೆ ಇವತ್ತು ನೀರು ತುಂಬಿಸುವ ಮಹತ್ಕಾರ್ಯಕ್ಕೆ ಚಾಲನೆ ನೀಡಿದ್ದೇನೆ ಎಂದು ಹೇಳಿದರು.
ಮೊದಲ ಅಭಿವೃದ್ಧಿ ಕಾರ್ಯಕ್ರಮ: ಬಿಜೆಪಿ ಸರ್ಕಾರ ಬಂದ ಮೇಲೆ ಜಿಲ್ಲೆಯಲ್ಲಿ ನಡೆಯುತ್ತಿರುವ ಮೊದಲ ಅಭಿವೃದ್ಧಿ ಕಾರ್ಯಕ್ರಮ ಇದಾಗಿದೆ. ಜಿಲ್ಲೆಯ ಅಭಿವೃದ್ಧಿ ಪರ್ವ ಆರಂಭವಾಗಿದೆ. ಹಿಂದಿನ ಡೀಸಿ ಮಂಜುಶ್ರೀ ಶ್ರಮ ವಹಿಸಿ ಭೂ ಸ್ವಾಧೀನ ಮತ್ತಿತರೆ ಕೆಲಸಗಳನ್ನು ಮಾಡಿದ್ದಾರೆ. ಅವರನ್ನು ನಾವಿಲ್ಲಿ ಸ್ಮರಿಸಲೇಬೇಕು ಎಂದರು.
ಕೋವಿಡ್ 19 ಸಮಸ್ಯೆ ಇಲ್ಲ: ಸೋಂಕಿತರ ಚಿಕಿತ್ಸೆಗಾಗಿ ಎಲ್ಲ ವ್ಯವಸ್ಥೆಗಳನ್ನು ಸರ್ಕಾರ ಮಾಡಿದೆ. ಅಗತ್ಯ ಬೆಡ್‌ಗಳು ಲಭ್ಯವಿದ್ದು, ಸೂಕ್ತ ಔಷಧ ಸಿಗುತ್ತಿದೆ. ಪರೀಕ್ಷಾ ಕೇಂದ್ರಗಳು, ವೈದ್ಯರು, ನರ್ಸ್‌ಗಳು ಕೊರತೆ ಇಲ್ಲ. ಯಾರೂ ಆತಂಕಪಡಬಾರದು ಎಂದು ಹೇಳಿದರು. ಸಚಿವ ಡಾ.ಕೆ.ಸಿ.ನಾರಾಯಣಗೌಡ, ಶಾಸಕ ರವೀಂದ್ರ ಶ್ರೀಕಂಠಯ್ಯ, ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಜಿಪಂ ಸದಸ್ಯ ರಾಮಲಿಂಗಯ್ಯ, ತೂಬಿನಕೆರೆ ಗ್ರಾಪಂ ಅಧ್ಯಕ್ಷ ಅಶೋಕಗೌಡ ಪಾಟೀಲ, ಡೀಸಿ ಡಾ.ಎಂ.ವಿ.ವೆಂಕಟೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರ ಶಂಕರೇಗೌಡ ಹಾಜರಿದ್ದರು.