Advertisement

ನೀರಿನ ಸಮಸ್ಯೆ ಇತ್ಯರ್ಥಕ್ಕೆ ಮಹಾರಾಷ್ಟ್ರ ಜತೆ ಶೀಘ್ರವೇ ಮಾತುಕತೆ: ಡಿ.ಕೆ.ಶಿವಕುಮಾರ

08:42 AM Jun 23, 2019 | Team Udayavani |

ಬೆಳಗಾವಿ: ಗಡಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆಗೆ ಇತಿಶ್ರೀ ಹಾಡಲು ಹಾಗೂ ಶಾಶ್ವತ ಪರಿಹಾರ ಕಲ್ಪಿಸಲು ಸದ್ಯದ ಸ್ಥಿತಿಯ ಮಾಹಿತಿ ಪಡೆದುಕೊಂಡು ಬಳಿಕ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವರ ಜತೆ ಶೀಘ್ರವೇ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.

Advertisement

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ರಾಜಾಪುರ ಬ್ಯಾರೇಜ್‌ಗೆ ಶನಿವಾರ ಭೇಟಿ ನೀಡಿದ ಸಚಿವರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿ, ಈ ಭಾಗದಲ್ಲಿ ಬೇಸಿಗೆಯಲ್ಲಿ ನೀರಿನ ವಿಪರೀತ ಸಮಸ್ಯೆ ತಲೆದೋರಿದೆ. ಅನೇಕ ಸಲ ಮನವಿ ಮಾಡಿದರೂ ಮಹಾರಾಷ್ಟ್ರ ಸರ್ಕಾರ ನೀರು ಬಿಟ್ಟಿಲ್ಲ. ಇಷ್ಟು ವರ್ಷಗಳ ಕಾಲ ಹಣ ಕೊಟ್ಟು ನೀರು ಪಡೆಯಲಾಗುತ್ತಿತ್ತು. ಈಗ ನೀರಿಗೆ ನೀರು ಬೇಕು ಎಂಬ ಬೇಡಿಕೆ ಇಟ್ಟಿದ್ದರಿಂದ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಕೃಷ್ಣಾ ನದಿಗೆ ನೀರು ಬಿಡುಗಡೆ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ. ಮಹಾರಾಷ್ಟ್ರದಲ್ಲಿ ಮಳೆ ಆಗಿರುವುದರಿಂದ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದೆ. ಇಷ್ಟೇ ಪ್ರಮಾಣದಲ್ಲಿ ನೀರು ಬಂದಿದೆ ಎಂಬ ಬಗ್ಗೆ ಸರ್ಕಾರದ ಬಳಿ ಅಂಕಿ-ಅಂಶ ಇಲ್ಲ. ಪ್ರತಿ ವರ್ಷ ಬೇಸಿಗೆಯ ಸಂದರ್ಭ ತಲೆದೋರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಮಹತ್ವದ ಒಪ್ಪಂದ ಮಾಡಿಕೊಳ್ಳಲಾಗುವುದು. ಎರಡೂ ರಾಜ್ಯಗಳಲ್ಲಿ ಕುಡಿಯುವ ನೀರು ಮತ್ತು ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಿದೆ ಎಂದರು.

ಪ್ರತಿ ವರ್ಷ ಎರಡೂ ರಾಜ್ಯಗಳು ನೀರು ವಿನಿಮಯ ಮಾಡಿಕೊಳ್ಳುವ ಒಡಂಬಡಿಕೆಗೆ ಕರ್ನಾಟಕ ಸರ್ಕಾರದ ಸಹಮತವಿದೆ. ಆದರೆ, ಈ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದ ಬಳಿಕವೇ ಒಡಂಬಡಿಕೆ ಮಾಡಿಕೊಳ್ಳಬಹುದು. ಹಣದ ಬದಲಾಗಿ ನಾಲ್ಕು ಟಿಎಂಸಿ ಅಡಿ ನೀರು ವಿನಿಮಯ ಪ್ರಸ್ತಾವವನ್ನು ಮಹಾರಾಷ್ಟ್ರ ಸರ್ಕಾರ ಇಟ್ಟಿದೆ. ಈ ಬಗ್ಗೆ ಅಧಿ ಕಾರಿಗಳ ಮಟ್ಟದಲ್ಲಿ ಪರಿಶೀಲನೆ ನಡೆದಿದೆ ಎಂದರು.

ನೀರು ವಿನಿಮಯ ಒಡಂಬಡಿಕೆಗಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ನಮ್ಮ ಮುಖ್ಯಮಂತ್ರಿಯವರು ಕಾಲಾವಕಾಶ ಕೇಳಿದ್ದಾರೆ. ನೀರು ವಿನಿಮಯ ಒಡಂಬಡಿಕೆ ಮಾಡಿಕೊಳ್ಳುವ ಮುನ್ನ ಉಭಯ ರಾಜ್ಯಗಳ ನೀರಾವರಿ ಸಚಿವರು ವಿಸ್ತೃತವಾಗಿ ಮಾತುಕತೆ ನಡೆಸಿ, ಬಳಿಕ ಮುಂದುವರಿಯುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ರವನ್ನೂ ಬರೆದಿದ್ದಾರೆ ಎಂದು ಹೇಳಿದರು.

Advertisement

ಮಾತುಕತೆಗೂ ಮುನ್ನ ಅಥಣಿ, ಕಾಗವಾಡ ಶಾಸಕರು ಹಾಗೂ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಒತ್ತಡ ಹಾಕಿದ್ದರಿಂದ ಆಲಮಟ್ಟಿ ಜಲಾಶಯದಿಂದ ಎರಡು ಟಿಎಂಸಿ ಅಡಿ ನೀರನ್ನು ಬಿಡಲಾಗಿತ್ತು. ಆದರೆ, ನೀರು ಎಲ್ಲಿಗೆ ಮುಟ್ಟಬೇಕಾಗಿತ್ತೋ ಅಲ್ಲಿ ತಲುಪಲಿಲ್ಲ. ನಂತರ ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ ಎಂದರು.

ಯಾವುದೇ ಸ್ಟಾರ್‌ ಬೇಡ ಕೆಲಸ ಮಾಡ್ತೀನಿ – ಡಿಕೆಶಿ: ಇಲ್ಲಿಯವರೆಗೂ ಯಾವುದೇ ನೀರಾವರಿ ಸಚಿವರು ಇಲ್ಲಿಗೆ ಬಂದಿಲ್ಲ. ನಾನು ಹಾಗೂ ಉಸ್ತುವಾರಿ ಸಚಿವರು ಸಭೆ ನಡೆಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇವೆ. ಕೋರೆಯವರು ಅಲ್ಲಿಗೆ ಹೋಗಿ ಫೋನ್‌ ಮಾಡಿ ಕೊಟ್ಟಾಗ ಅಲ್ಲಿನ ಮುಖ್ಯಮಂತ್ರಿ ಜತೆ ಚರ್ಚಿಸಿದ್ದೇನೆ. ನನ್ನಷ್ಟು ಪ್ರಯತ್ನವನ್ನು ಯಾವ ಸಚಿವರೂ ಮಾಡಿಲ್ಲ. ನನಗೆ ಯಾವುದೇ ಸ್ಟಾರ್‌ ಬೇಡ, ನನ್ನ ಡ್ನೂಟಿ ಮಾಡಲು ಬಂದಿದ್ದೇನೆ. ನನಗೆ ಜವಾಬ್ದಾರಿ ಮುಖ್ಯ. ಸ್ಥಳಕ್ಕಾಗಮಿಸಿ ಪ್ರತ್ಯಕ್ಷ ನೋಡಿ ಸಮಸ್ಯೆ ಆಲಿಸಿದ್ದೇನೆ ಎಂದು ಶಿವಕುಮಾರ್‌ ಹೇಳಿದರು.

ಡಿಕೆಶಿ ಕಾರಲ್ಲಿ ಜಾರಕಿಹೊಳಿ-ಹೆಬ್ಬಾಳಕರ: ಸಚಿವ ಡಿ.ಕೆ.ಶಿವಕುಮಾರ ಅವರು ಬ್ಯಾರೇಜ್‌ ವೀಕ್ಷಣೆಗೆ ಬಂದಾಗ ಅವರ ಕಾರಲ್ಲಿಯೇ ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಮಹಾಂತೇಶ ಕೌಜಲಗಿ ಇದ್ದರು. ಬಳಿಕ, ರಾಜಾಪುರಕ್ಕೆ ಬಂದಾಗ ಸಚಿವ ಸತೀಶ ಜಾರಕಿಹೊಳಿ ಆಗಮಿಸಿದರು. ವೀಕ್ಷಣೆ ಮುಗಿಸಿ ಉಗಾರ ಕಡೆಗೆ ಹೊರಟಿದ್ದಾಗ ಜಾರಕಿಹೊಳಿಯೂ ಡಿಕೆಶಿಯ ಕಾರನ್ನು ಹತ್ತಿದರು. ಎಲ್ಲ ಶಾಸಕರನ್ನು ಹತ್ತಿಸಿಕೊಂಡು ಡಿಕೆಶಿ ಹೊರಟಿದ್ದು ಚರ್ಚೆಗೆ ಗ್ರಾಸವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next