Advertisement

ಶೀಘ್ರದಲ್ಲೇ ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸರಣಿ ವೇಳಾಪಟ್ಟಿ  

11:56 AM Sep 20, 2017 | |

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಭಾರತದ ಸುದೀರ್ಘ‌ ಕ್ರಿಕೆಟ್‌ ಸರಣಿ 2018ರ ಜನವರಿ 5 ಅಥವಾ 6ರಿಂದ ಆರಂಭವಾಗುವ ಸಾಧ್ಯತೆ ಇದೆ. ಸರಣಿಯ ವೇಳಾಪಟ್ಟಿಯನ್ನು ಅಂತಿಮಗೊಳಿಸಲು ಎರಡೂ ಕ್ರಿಕೆಟ್‌ ಮಂಡಳಿಗಳು ಸತತ ಮಾತುಕತೆಯಲ್ಲಿ ತೊಡಗಿವೆ. ಶೀಘ್ರದಲ್ಲೇ ಇದನ್ನು ಪ್ರಕಟಿಸುವುದಾಗಿ ಹೇಳಿವೆ.

Advertisement

ಈ ಸುದೀರ್ಘ‌ ಸರಣಿ ವೇಳೆ 4 ಟೆಸ್ಟ್‌, 3 ಏಕದಿನ ಹಾಗೂ 3 ಟಿ-20 ಪಂದ್ಯಗಳನ್ನು ಆಡಲಾಗುವುದು. “ಕ್ರಿಕೆಟ್‌ ಸೌತ್‌ ಆಫ್ರಿಕಾ’ ಅಪೇಕ್ಷೆ ಹಾಗೂ ಸಂಪ್ರದಾಯದಂತೆ ಈ ಸರಣಿ ಡಿಸೆಂಬರ್‌ 26ರ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯದೊಂದಿಗೆ ಆರಂಭವಾಗಬೇಕಿತ್ತು. ಆದರೆ ಭಾರತ ಡಿ. 24ಕ್ಕಷ್ಟೇ ಶ್ರೀಲಂಕಾ ದೆದುರಿನ ತವರಿನ ಸರಣಿಯನ್ನು ಮುಗಿಸಲಿದೆ. ಹೀಗಾಗಿ ಬಾಕ್ಸಿಂಗ್‌ ಡೇ ಟೆಸ್ಟ್‌ ಅಸಾಧ್ಯ ಎಂದು ಬಿಸಿಸಿಐ ಕಳೆದ ಆಗಸ್ಟ್‌ನಲ್ಲೇ ಸ್ಪಷ್ಟಪಡಿಸಿದೆ. ಸ್ವಲ್ಪ ದಿನಗಳ ವಿಶ್ರಾಂತಿ ಪಡೆದು ದಕ್ಷಿಣ ಆಫ್ರಿಕಾಕ್ಕೆ ತೆರಳುವುದು ಭಾರತದ ಯೋಜನೆ. 

ವರ್ಷಾರಂಭದ ಟೆಸ್ಟ್‌ ಕೂಡ ಅಸಾಧ್ಯ
ಟೆಸ್ಟ್‌ ಸರಣಿಗೂ ಮುನ್ನ ಅಭ್ಯಾಸ ಪಂದ್ಯವನ್ನೂ ಆಯೋಜಿಸಬೇಕೆಂಬುದು ಬಿಸಿಸಿಐಯ ಮತ್ತೂಂದು ಬೇಡಿಕೆಯಾಗಿದೆ. ಆಗ ಜ. 2ರಿಂದ ಆರಂಭವಾಗಲಿರುವ “ವರ್ಷಾರಂಭದ ಟೆಸ್ಟ್‌’ ಪಂದ್ಯವನ್ನೂ ಆಡಲು ಸಾಧ್ಯವಾಗದು. ಜ. 5 ಅಥವಾ 6ರಂದು ಕೇಪ್‌ಟೌನ್‌ ಟೆಸ್ಟ್‌ ಪಂದ್ಯದೊಂದಿಗೆ ಸರಣಿ ಆರಂಭಗೊಳ್ಳುವ ಸಾಧ್ಯತೆ ಇದೆ. 

ದಕ್ಷಿಣ ಆಫ್ರಿಕಾದ ಚಿಂತೆಯೆಂದರೆ ಸಾಂಪ್ರದಾಯಿಕ “ಬಾಕ್ಸಿಂಗ್‌ ಡೇ ಟೆಸ್ಟ್‌’ ಪಂದ್ಯಕ್ಕೆ ಕಂಟಕ ಎದುರಾಗಿರುವುದು. ಇದನ್ನು ಕೈಬಿಡಲು ಅಲ್ಲಿನ ಅಭಿಮಾನಿಗಳಿಗೂ ಮನಸ್ಸಿಲ್ಲ. ಹೀಗಾಗಿ ಬದಲಿಯಾಗಿ ಪಾಕಿಸ್ಥಾನ ಅಥವಾ ನೂತನವಾಗಿ ಟೆಸ್ಟ್‌ ಮಾನ್ಯತೆ ಪಡೆದ ಅಫ್ಘಾನಿಸ್ಥಾನ ತಂಡವನ್ನಾದರೂ ಆಹ್ವಾನಿಸಿ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವನ್ನು ನಡೆಸುವುದು ಆಫ್ರಿಕಾದ ಯೋಜನೆ. 

ಭಾರತದ ಪ್ರವಾಸ ಮುಗಿದ ಬೆನ್ನಲ್ಲೇ ಆಸ್ಟ್ರೇಲಿಯ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಮಾರ್ಚ್‌ ಒಂದರಿಂದ ಸರಣಿ ಆರಂಭವಾಗಲಿದೆ. ಆಸೀಸ್‌ ಸರಣಿಗೂ ಮುನ್ನ ಕೆಲವು ದಿನಗಳ ವಿಶ್ರಾಂತಿ ಪಡೆಯುವುದು ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಬೇಡಿಕೆ. ಈ ಎಲ್ಲ ಅಂಶಗಳು ಭಾರತ-ದಕ್ಷಿಣ ಆಫ್ರಿಕಾ ವೇಳಾಪಟ್ಟಿಯ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next