ಬಾಲಿವುಡ್ ನಟ ಸೋನು ಸೂದ್ ಕನ್ನಡದ “ಶ್ರೀಮಂತ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವುದು ನಿಮಗೆ ಗೊತ್ತಿರಬಹುದು. ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಇದೇ ಏಪ್ರಿಲ್ 14 ರಂದು “ಶ್ರೀಮಂತ’ ಸಿನಿಮಾ ಬಿಡುಗಡೆಯಾಗಿ ತೆರೆಗೆ ಬರಬೇಕಿತ್ತು. ಆದರೆ ಆ ವೇಳೆ ಜಾರಿಯಲ್ಲಿರುವ ಚುನಾವಣಾ ಅಬ್ಬರ ಜೋರಾಗಿದ್ದರಿಂದ, ಚಿತ್ರತಂಡ ತಮ್ಮ ಸಿನಿಮಾದ ಬಿಡುಗಡೆಯನ್ನು ಕೆಲ ಕಾಲ ಮುಂದೂಡಿಕೊಂಡಿತ್ತು. ಇದೀಗ ಚುನಾವಣೆಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಚಿತ್ರತಂಡ ಇಂದು (ಮೇ. 19) “ಶ್ರೀಮಂತ’ ಸಿನಿಮಾವನ್ನು ತೆರೆಗೆ ತರುತ್ತಿದೆ.
“ಗೋಲ್ಡನ್ ರೈನ್ ಮೂವೀಸ್’ ಮತ್ತು “ಅಣ್ಣ ಟಾಕೀಸ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ “ಶ್ರೀಮಂತ’ ಸಿನಿಮಾದಲ್ಲಿ ಸೋನು ಸೂದ್ ಅವರೊಂದಿಗೆ ಯುವನಟ ಕ್ರಾಂತಿ, ವೈಷ್ಣವಿ ಪಟುವರ್ಧನ್, ವೈಷ್ಣವಿ ಚಂದ್ರನ್ ಮೆನನ್, ಗಿರೀಶ್ ಶಿವಣ್ಣ, ಕುರಿರಂಗ, ಮಂಜುನಾಥ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬರೋಬ್ಬರಿ ಎಂಟು ಹಾಡುಗಳಿದ್ದು, ಹಂಸಲೇಖ ಸಂಗೀತ ಸಂಯೋಜನೆಯಿದೆ. “ಶ್ರೀಮಂತ’ ಸಿನಿಮಾಕ್ಕೆ ಹಾಸನ್ ರಮೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಇನ್ನು ಸಿನಿಮಾದ ಬಿಡುಗಡೆಯ ಬಗ್ಗೆ ಮಾತನಾಡಿರುವ ನಿರ್ದೇಶಕ ಹಾಸನ್ ರಮೇಶ್, “ಇದೊಂದು ಅಪ್ಪಟ ರೈತರ ಕುರಿತಾಗಿ ಮಾಡಿರುವ ಸಿನಿಮಾ. ಹಳ್ಳಿಯ ಸೊಗಡು, ರೈತರ ಜೀವನದ ಏಳು-ಬೀಳುಗಳನ್ನು ಸಿನಿಮಾದಲ್ಲಿ ತೆರೆಮೇಲೆ ತರಲಾಗಿದೆ. ನಮ್ಮ ದೇಶದಲ್ಲಿ ಶೇ. 80ರಷ್ಟು ಜನ ರೈತರೇ ಆಗಿದ್ದಾರೆ. ಈ ಥಾಟ್ ಇಟ್ಟುಕೊಂಡು ಮಾಡಿರುವ ಸಂಗೀತಮಯ ಚಿತ್ರವಿದು. ಕಥೆಯಲ್ಲಿ ತುಂಬಾ ಮಜಲುಗಳಿವೆ. ಈಗಾಗಲೇ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪ್ರಚಾರ ಮಾಡಲಾಗಿದೆ. ನಮ್ಮ ಸಿನಿಮಾದಲ್ಲಿ ಕೇವಲ ರಾಜಕಾರಣಿಗಳು ಮಾತ್ರವಲ್ಲದೆ ಅನೇಕ ಸಾಧಕರು, ಸ್ವಾಮಿಜಿಗಳು, ಸಮಾಜ ಸೇವಕರು, ರೈತ ಸಂಘಟನೆಗಳು ಕೈಜೋಡಿಸಿದ್ದಾರೆ. ಪ್ರತಿಯೊಬ್ಬರಿಗೂ ತಲುಪುವಂತ ವಿಷಯ ಈ ಸಿನಿಮಾದಲ್ಲಿದೆ’ ಎಂದು ವಿವರಣೆ ನೀಡಿದರು.
“ಶ್ರೀಮಂತ’ ಸಿನಿಮಾದಲ್ಲಿ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ, ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ, ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಹೀಗೆ ಬೇರೆ ಬೇರೆ ಪಕ್ಷಗಳ ಅನೇಕ ರಾಜಕಾರಣಿಗಳು ಕಾಣಿಸಿಕೊಂಡಿದ್ದಾರೆ. ನಮ್ಮ ಯೋಜನೆಯಂತೆ ಏಪ್ರಿಲ್ 14ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಚುನಾವಣೆ ಸಂದರ್ಭವಾಗಿರುವುದರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿತ್ತು. ಈ ವೇಳೆ ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಪ್ರಮುಖ ರಾಜಕಾರಣಿಗಳು ಸಿನಿಮಾದಲ್ಲಿ ಕಾಣಿಸಿಕೊಂಡಿರುವುದರಿಂದ, ಸಿನಿಮಾ ಬಿಡುಗಡೆ ಮಾಡಿದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಗುರಿಯಾಗಬಹುದು ಎಂಬ ಆತಂಕದಲ್ಲಿ ನಮ್ಮ ಸಿನಿಮಾವನ್ನು ಚುನಾವಣೆ ಫಲಿತಾಂಶ ಬಂದ ನಂತರ ಬಿಡುಗಡೆ ಮಾಡಲು ನಿರ್ಧರಿಸಿದೆವು’ ಎನ್ನುವುದು ನಿರ್ದೇಶಕರ ಮಾತು