ನವದೆಹಲಿ : ಬಹುಭಾಷಾ ನಟ ಹಾಗೂ ಸಮಾಜ ಸೇವಕ ಸೋನು ಸೂದ್ ಅವರಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಈ ನಟ ರಾಜಕೀಯಕ್ಕೆ ಸೇರಲಿದ್ದಾರೆ ಎನ್ನುವ ಪ್ರಶ್ನೆ ಕೂಡ ಕೇಳಿ ಬಂದಿತ್ತು. ಆದರೀಗ ಕುತೂಹಲಕ್ಕೆ ತೆರೆ ಬಿದ್ದಿದ್ದು, ದೆಹಲಿ ಸರ್ಕಾರದ ಯೋಜನೆಯೊಂದ ರಾಯಭಾರಿ ಜವಾಬ್ದಾರಿ ಹೊತ್ತಿದ್ದಾರೆ ನಟ ಸೋನುಸೂದ್.
ಸೂದ್ ಅವರು ದೆಹಲಿ ಸರ್ಕಾರದ ‘ದೇಶ್ ಕಾ ಮೆಂಟರ್ಸ್’ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ವಿಶೇಷ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಆಯ್ಕೆಗಳನ್ನು ಮಾಡಲು ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದ್ದಾರೆ.
“ಸರ್ಕಾರಿ ಶಾಲೆಗಳಲ್ಲಿ ಕೆಲವು ವಿದ್ಯಾರ್ಥಿಗಳು ತೀರಾ ಬಡತನದ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಅವರಿಗೆ ಮಾರ್ಗದರ್ಶನ ಮಾಡಲು ಕೆಲವೇ ಜನರಿದ್ದಾರೆ. ಈ ಮಕ್ಕಳಿಗೆ ಮಾರ್ಗದರ್ಶಕರಾಗಲು ನಾವು ವಿದ್ಯಾವಂತರಿಗೆ ಮನವಿ ಮಾಡುತ್ತಿದ್ದೇವೆ. ಕಾರ್ಯಕ್ರಮಕ್ಕೆ ಸೋನು ಸೂದ್ ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿರುತ್ತಾರೆ” ಎಂದು ಕೇಜ್ರಿವಾಲ್ ಹೇಳಿದರು .
ಕೇಜ್ರಿವಾಲ್ ಮತ್ತು ಸೋನು ಸೂದ್ ಇಬ್ಬರೂ ಬೆಳಿಗ್ಗೆ ಭೇಟಿಯಾದಾಗ ರಾಜಕೀಯ ವಿಚಾರವಾಗಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಹೇಳಿದರು.
“ನಾವು ಈ ಕಾರ್ಯಕ್ರಮದ ಬಗ್ಗೆ ಚರ್ಚಿಸಿದ್ದೇವೆ ಮತ್ತು ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ” ಎಂದು ಕೇಜ್ರಿವಾಲ್ ಸೂದ್ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.