Advertisement

ವೇಶ್ಯಾವಾಟಿಕೆ ಜಾಲ ಕುಖ್ಯಾತಿಯ ಸೋನು ಪಂಜಾಬನ್ ಗೆ 24 ವರ್ಷ ಜೈಲು ಶಿಕ್ಷೆ

08:45 PM Jul 22, 2020 | Hari Prasad |

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ದೆಹಲಿ ಕಂಡಂತಹ ಕುಖ್ಯಾತ ವೇಶ್ಯಾವಾಟಿಕೆ ಜಾಲದ ರೂವಾರಿ ಸೋನು ಪಂಜಾಬನ್  ಅಲಿಯಾಸ್ ಗೀತಾ ಅರೋರಾ ಗೆ ಇಲ್ಲಿನ ಸ್ಥಳೀಯ ನ್ಯಾಯಾಲಯವು 24 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

Advertisement

ಸೋನು ಪಂಜಾಬನ್ ಸಹಚರ ಸಂದೀಪ್ ಬೆಡ್ವಾಲ್ ಗೂ ಸಹ 20 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಇಲ್ಲಿನ ದ್ವಾರಕಾ ಜಿಲ್ಲಾ ನ್ಯಾಯಾಲಯವು ಇಂದು ತೀರ್ಪು ನೀಡಿದೆ.

ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆ ಉದ್ದೇಶಕ್ಕಾಗಿ ಬಲವಂತ ಮಾಡಿರುವ ಆರೋಪದ ಮೇಲೆ ದೆಹಲಿ ಪೊಲೀಸರು ಸೋನು ಪಂಜಾಬನ್ ಳನ್ನು ಬಂಧಿಸಿ ಆಕೆಯ ಮೇಲೆ ಪ್ರಕರಣ ದಾಖಲಿಸಿದ್ದರು. ಮತ್ತು ಈಕೆಯ ಸಹಚರ ಸಂದೀಪ್ ಬೆಡ್ವಾಲ್ ಮೇಲೆ ಅಪ್ರಾಪ್ತೆಯರನ್ನು ಅತ್ಯಾಚಾರ ಮಾಡಿದ ಆರೋಪ ಇತ್ತು.

ಈ ಎಲ್ಲಾ ಪ್ರಕರಣಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಇವರಿಬ್ಬರ ಮೇಲಿನ ಆರೋಪಗಳನ್ನು ಎತ್ತಿ ಹಿಡಿದಿತ್ತು.

ಈ ನಡುವೆ ವಿಚಾರಾಣಾಧೀನ ಕೈದಿಯಾಗಿ ಇಲ್ಲಿನ ತಿಹಾರ್ ಜೈಲಿನಲ್ಲಿದ್ದ ಸೋನು ಪಂಜಾಬನ್ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇದೀಗ ಆಕೆ ಚೇತರಿಸಿಕೊಂಡಿದ್ದಾಳೆ.

Advertisement

ಇದನ್ನೂ ಓದಿ: ಮಾನವಕಳ್ಳಸಾಗಣೆ, ವೇಶ್ಯೆವಾಟಿಕೆ ಕಿಂಗ್ ಪಿನ್ ಸೋನು ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನ!

‘ಈಕೆಯನ್ನು ಮಹಿಳೆ ಎಂದು ಕರೆಯಲು ಸಾಧ್ಯವಿಲ್ಲದೇ ಇರುವಂತ ರೀತಿಯ ತಪ್ಪನ್ನು ಈಕೆ ಎಸಗಿದ್ದಾಳೆ ಮತ್ತು ಈಕೆ ಮಾಡಿರುವ ಅಪರಾಧಕ್ಕೆ ತೀವ್ರ ಸ್ವರೂಪದ ಶಿಕ್ಷೆಯನ್ನು ವಿಧಿಸದೇ ಅನ್ಯ ಮಾರ್ಗವೇ ಇಲ್ಲ’ ಇದು ಸೋನು ಪಂಜಾಬನ್ ಗೆ ಶಿಕ್ಷೆಯ ಪ್ರಮಾಣವನ್ನು ವಿಧಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ವ್ಯಕ್ತಪಡಿಸಿದ ಅಭಿಪ್ರಾಯವಾಗಿತ್ತು.

ಇದೀಗ ಸೋನುವಿಗೆ ಶಿಕ್ಷೆಯಾಗಿರುವ ಪ್ರಕರಣಗಳಲ್ಲಿ ಸಂತ್ರಸ್ತೆಯಾಗಿದ್ದ 12 ವರ್ಷ ಮತ್ತು 10 ತಿಂಗಳ ಬಾಲಕಿಗೆ ನ್ಯಾಯಾಲವು 7 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡುವಂತೆ ಸೂಚಿಸಿದೆ. ಈ ಬಾಲಕಿಯನ್ನು ಅಪಹರಿಸಿದ್ದ ಅಪರಾಧಿಯು ಬಳಿಕ ಈಕೆಯನ್ನು ವೇಶ್ಯಾವಾಟಿಕೆ ಕೃತ್ಯಕ್ಕಾಗಿ ಕಳ್ಳಸಾಗಾಟ ಮಾಡಿದ್ದಳು.

ಸೋನು ಪಂಜಾಬನ್ ಹಾಗೂ ಇತರೇ ಆರು ಜನರ ವಿರುದ್ಧ ಅಪ್ರಾಪ್ತ ಬಾಲಕಿಯೊಬ್ಬಳನ್ನು ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿಸುವ ಪ್ರಯತ್ನಕ್ಕೆ ಸಂಬಂ‍ಧಿಸಿದಂತೆ ಪೊಲೀಸರು ಎಫ್.ಐ.ಆರ್. ದಾಖಲಸಿದ್ದರು ಹಾಗೂ 2014ರಲ್ಲಿ ಇಲ್ಲಿನ ನಝಾಫ್ ಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಬಳಿಕ ಈ ಪ್ರಕರಣದ ವಿಚಾರಣೆಯನ್ನು ಕ್ರೈಂ ಬ್ರ್ಯಾಂಚ್ ಗೆ ವರ್ಗಾಯಿಸಲಾಗಿತ್ತು.

ಇತ್ತ ಸೋನು ಪಂಜಾಬನ್ ಗೆ ಭಯಪಟ್ಟು ಅಪ್ರಾಪ್ತ ಬಾಲಕಿಯು ನಾಪತ್ತೆಯಾಗಿದ್ದಳು ಆದರೆ ಆ ಬಾಲಕಿಯನ್ನು ಬಳಿಕ ಪತ್ತೆ ಹಚ್ಚುವಲ್ಲಿ ಕ್ರೈಂ ಬ್ರ್ಯಾಂಚ್ ಯಶಸ್ವಿಯಾಗಿತ್ತು. ಹಾಗೂ 2017ರಲ್ಲಿ ಸೋನು ಪಂಜಾಬನ್ ಹಾಗೂ ಸಂದೀಪ್ ಬಂಧನವಾಗಿತ್ತು.

ಈಕೆಯ ವಿರುದ್ಧ ‘ಮಕ್ಕಳಿಗೆ ಲೈಂಗಿಕ ಅಪರಾಧಗಳಿಂದ ರಕ್ಷಣೆ’ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next