ಕಾಲೇಜ್ ಹುಡುಗಿಯಾಗಿ, ಗಯ್ಯಾಳಿಯಾಗಿ, ಟೆಕ್ಕಿಯಾಗಿ ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಸೋನು ಗೌಡ ಇದೇ ಮೊದಲ ಬಾರಿಗೆ ತನಿಖಾಧಿಕಾರಿಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇವತ್ತಿನ ತಂತ್ರಜ್ಞಾನದ ದುರುಪಯೋಗ.., ಅದರಿಂದಾಗುವ ಪರಿಣಾಮಗಳು.., ಅದನ್ನು ಪತ್ತೆಹಚ್ಚಿ, ನಿಯಂತ್ರಿಸುವುದು.., ಹೀಗೆ ಹಲವು ಸಂಗತಿಗಳ ಸುತ್ತ “ರೆಡ್’ ಚಿತ್ರ ನಡೆಯಲಿದೆ. ಚಿತ್ರದ ಬಗ್ಗೆ ಮಾತನಾಡಿರುವ ಸೋನುಗೌಡ, “ಮೊದಲ ಬಾರಿಗೆ ಈ ಥರದ ಪಾತ್ರವೊಂದು ಸಿಗುತ್ತಿರುವುದಕ್ಕೆ ಖುಷಿಯಿದೆ.
ನಾವು ಅನುಭವಿಸುತ್ತಿದ್ದರೂ, ಕಣ್ಣಿಗೆ ಕಂಡರೂ ಕೆಲವೊಮ್ಮೆ ನಮ್ಮ ಸುತ್ತಲಿನ ಸಮಸ್ಯೆಗಳನ್ನು ಹೇಳಿಕೊಳ್ಳಲಾಗುವುದಿಲ್ಲ. ಅಂತಹ ಸಮಸ್ಯೆಗಳನ್ನು ನಾವೇ ಹೇಗೆ ಬಗೆಹರಿಸಿಕೊಳ್ಳಬೇಕು ಎಂಬುದನ್ನು ಈ ಸಿನಿಮಾ ಹೇಳಲಿದೆ. ಕ್ರೈಂ-ಥ್ರಿಲ್ಲರ್ ಜಾನರ್ ಶೈಲಿಯಲ್ಲಿ ನಡೆಯುವ ಈ ಸಿನಿಮಾದಲ್ಲಿ ನಾನು ಅಂಡರ್ ಕವರ್ ಇನ್ವೆಸ್ಟಿಗೇಟಿಂಗ್ ಆಫೀಸರ್ ಆಗಿ, ಸಾಮಾನ್ಯ ಹುಡುಗಿಯಾಗಿ ಎರಡು ಶೇಡ್‌ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.
“ರೆಡ್’ ಅನ್ನೋದು ಸಿನಿಮಾದಲ್ಲಿ ಆಪರೇಷನ್ ಕೋಡ್. ಆಪರೇಷನ್ “ರೆಡ್’ನಲ್ಲಿ ಹೇಗೆ ಸಮಸ್ಯೆಗಳನ್ನು ಪರಿಹಾರ ಸಿಗುತ್ತದೆ ಎನ್ನುವುದೇ ಚಿತ್ರದ ಕಥೆ. ಟೆಕ್ನಾಲಜಿ ಯುಗದಲ್ಲಿ ಮನುಷ್ಯ ಹೇಗೆ ತನ್ನನ್ನು ಕಳೆದುಕೊಂಡಿದ್ದೇನೆ. ಹಣದ ಹಿಂದೆ ಹೋದರೆ, ಕ್ರಿಯೇಟಿವಿಟಿ ಹೇಗೆ ಹಾಳಾಗುತ್ತದೆ ಎನ್ನುವುದನ್ನು ಸಿನಿಮಾ ಚರ್ಚಿಸುತ್ತದೆ. ಕ್ರೈಂ-ಥ್ರಿಲ್ಲರ್ ಸಿನಿಮಾವಾದ್ರೂ, ಇದರಲ್ಲಿ ಆ್ಯಕ್ಷನ್ ಇದೆ, ರೊಮ್ಯಾನ್ಸ್ ಇದೆ.
ಸಿನಿಮಾದ ಬಗ್ಗೆ ನಾನು ಕೂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇನೆ’ ಎನ್ನುತ್ತಾರೆ ಸೋನು. ಅಂದಹಾಗೆ, ಇದೇ 19ರಂದು “ರೆಡ್’ ಚಿತ್ರ ಸೆಟ್ಟೇರುತ್ತಿದೆ. ಜಗ್ಗೇಶ್ ಅಭಿನಯದ “8ಎಂಎಂ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದ ಹರಿಕೃಷ್ಣ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. “ಪುಟ್ಟಗೌರಿ ಮದುವೆ’ ಧಾರಾವಾಹಿಯ ರಕ್ಷಿತ್ ಚಿತ್ರದಲ್ಲಿ ಸೋನುಗೌಡಗೆ ನಾಯಕನಾಗಿ ಜೋಡಿಯಾಗುತ್ತಿದ್ದಾರೆ.
ಅತುಲ್ ಕುಲಕರ್ಣಿ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ, ಸಂದೀಪ್ ಛಾಯಾಗ್ರಹಣವಿದೆ. ಉಳಿದಂತೆ ಚಿತ್ರದ ಇತರ ಕಲಾವಿದರು, ತಂತ್ರಜ್ಞರ ಆಯ್ಕೆ ಕೊನೆ ಹಂತದಲ್ಲಿದ್ದು, ಮುಹೂರ್ತದ ವೇಳೆಗೆ ಎಲ್ಲವೂ ಅಂತಿಮವಾಗುವ ಸಾಧ್ಯತೆ ಇದೆ. ಸಕಲೇಶಪುರ , ಕೊಡಗು, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಯಲಿದ್ದು, ಮುಂದಿನ ಫೆಬ್ರವರಿ ವೇಳೆಗೆ “ರೆಡ್’ ತೆರೆಗೆ ಬರುವ ಯೋಜನೆಯಲ್ಲಿದೆ.