ಈ ಹಿಂದೆ “ಅನ್‌ಲಾಕ್’ ಎಂಬ ಕಿರುಚಿತ್ರದ ಮೂಲಕ ಗಮನ ಸೆಳೆದಿದ್ದ ಶ್ರೀಧರ ಶಾಸ್ತ್ರಿ ಈಗ “ಟೆನೆಂಟ್’ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕನಾಗುವ ತಯಾರಿಯಲ್ಲಿದ್ದಾರೆ. ಕೋವಿಡ್ ಲಾಕ್‌ಡೌನ್ ಸಂದರ್ಭವನ್ನು ಹಿನ್ನೆಲೆಯಾಗಿಟ್ಟುಕೊಂಡು ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ.
ಲಾಕ್‌ಡೌನ್ ವೇಳೆ ಮನೆಯ ಬಾಡಿಗೆದಾರ ಹಾಗೂ ಮನೆ ಮಾಲೀಕನ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ಚಿತ್ರದ ಕಥೆಗೆ ತಕ್ಕಂತೆ ಚಿತ್ರಕ್ಕೆ “ಟೆನೆಂಟ್’ ಎಂದು ಹೆಸರಿಟ್ಟಿದೆ ಚಿತ್ರತಂಡ.
ಇದನ್ನೂ ಓದಿ:ಅಮೃತಾಂಜನ್ ರಾಯಭಾರಿಗಳಾಗಿ ಒಲಿಂಪಿಕ್ ಪದಕ ವಿಜೇತ ಮೀರಾಬಾಯಿ ಚಾನು ಮತ್ತು ಪುನಿಯಾ
ಧರ್ಮ ಕೀರ್ತಿರಾಜ್, ತಿಲಕ್ ಶೇಖರ್, ಸೋನು ಗೌಡ, ರಾಕೇಶ್ ಮಯ್ಯ, ಉಗ್ರಂ ಮಂಜು ಮೊದಲಾದವರು “ಟೆನೆಂಟ್’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಗಿರೀಶ್ ಒತ್ತೂರು ಸಂಗೀತ ಸಂಯೋಜನೆಯಿದ್ದು, ಚಿತ್ರಕ್ಕೆ ಮನೋಹರ ಜೋಶಿ ಛಾಯಾಗ್ರಹಣವಿದೆ. “ಮಾಸ್ಟರ್ ಚಾಯ್ಸ್ ಕ್ರಿಯೇಶನ್ಸ್’ ಬ್ಯಾನರ್ ನಲ್ಲಿ ಟಿ. ನಾಗಾರಾಜ್ “ಟೆನೆಂಟ್’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.
ಇತ್ತೀಚೆಗಷ್ಟೇ “ಟೆನೆಂಟ್’ ಚಿತ್ರದ ಟೈಟಲ್ ಹಾಗೂ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, ದಸರಾ ಹಬ್ಬದ ಬಳಿಕ ಚಿತ್ರದ ಚಿತ್ರೀಕರಣ ಆರಂಭಿಸುವ ಯೋಚನೆಯಲ್ಲಿದೆ. ನವ ನಿರ್ದೇಶಕ ಶ್ರೀಧರ್ ಶಾಸ್ತ್ರಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.