ಮಂಡ್ಯ: ಈ ಬಾರಿಯ ಸಮ್ಮಿಶ್ರ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಬೇಕೆಂದು ದೆಹಲಿಯ ಹೈಕಮಾಂಡ್ ಗೆ ಹೇಳಿದ್ದೆ. ಆದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಒಪ್ಪಲಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಅವರು ಗುರುವಾರ ಮಂಡ್ಯದಲ್ಲಿ ಜೆಡಿಎಸ್ ಸಮಾವೇಶದಲ್ಲಿ ಮೊಮ್ಮಗ ನಿಖಿಲ್ ಕುಮಾರ್ ಸ್ವಾಮಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದ ನಂತರ ಮಾತನಾಡಿದ ಅವರು, ನಮ್ಮದು ಕುಟುಂಬ ರಾಜಕಾರಣ ಎಂದು ಹೀಯಾಳಿಸುತ್ತಿರುವುದಕ್ಕೆ ತುಂಬಾ ನೋವಾಗುತ್ತಿದೆ.
ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಹುದ್ದೆಯನ್ನು ಕುಮಾರಸ್ವಾಮಿ ಒಪ್ಪಿರಲಿಲ್ಲ. ಕೊನೆಗೆ ನಾನು ಖರ್ಗೆ ಹೆಸರನ್ನು ಸೂಚಿಸಿದೆ. ಆದರೆ ಸೋನಿಯಾ, ರಾಹುಲ್ ಗಾಂಧಿ, ಜೆಡಿಎಸ್ 37 ಸ್ಥಾನ ಪಡೆದಿದ್ದರೂ ಕೂಡಾ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಲಿ ಎಂದು ಹೇಳಿದರು.
ರಾಜಕೀಯದಲ್ಲಿ ಯಾರು, ಯಾರನ್ನೂ ಮುಗಿಸೋಕೆ ಸಾಧ್ಯವಿಲ್ಲ. ನಾನು ನಿನ್ನೆ ಒಬ್ಬ ಮೊಮ್ಮಗನಿಗೆ ಕಣ್ಣೀರು ಹಾಕಿದ್ದೇನೆ ಅಂತ ವ್ಯಂಗ್ಯವಾಡಬೇಡಿ. ನಾನು ಯಾಕೆ ಕಣ್ಣೀರು ಹಾಕಿದ್ದು ಗೊತ್ತಾ…ನನಗೆ 60 ವರ್ಷಗಳ ರಾಜಕೀಯ ಜೀವನದಲ್ಲಿ ಮೂಡಲಹಿಪ್ಪೆಯ ಜನ ನನ್ನ ಅಷ್ಟೊಂದು ಪ್ರೀತಿ ತೋರಿಸಿದ್ದರು. ಅವರ ಅಭಿಮಾನಕ್ಕೆ ನಾನು ಕಣ್ಣೀರು ಹಾಕಿದ್ದೆ ಎಂದು ಸಮಜಾಯಿಷಿ ನೀಡಿದರು.