ನವದೆಹಲಿ:ಕಾಂಗ್ರೆಸ್ ಪಕ್ಷದಲ್ಲಿ ಸರ್ವಸಮ್ಮತ ನಾಯಕತ್ವ ಸೇರಿದಂತೆ ಆಮೂಲಾಗ್ರ ಬದಲಾವಣೆಯಾಗಬೇಕು ಎಂಬ ಆಗ್ರಹದ ಹಿನ್ನೆಲೆಯಲ್ಲಿ ಸೋಮವಾರ ದೆಹಲಿಯಲ್ಲಿ ನಡೆದ ದೀರ್ಘಾವಧಿಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಯಾವುದೇ ಮಹತ್ವದ ಬದಲಾವಣೆಯ ನಿರ್ಧಾರ ತೆಗೆದುಕೊಂಡಿಲ್ಲ. ಸೋನಿಯಾ ಗಾಂಧಿಯೇ ಇನ್ನೂ ಒಂದು ವರ್ಷಗಳ ಕಾಲಾವಧಿವರೆಗೆ ಹಂಗಾಮಿ ಅಧ್ಯಕ್ಷೆಯಾಗಿ ಮುಂದುವರಿಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಸಿಡಬ್ಲ್ಯುಸಿ (ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ)ಯಲ್ಲಿ ರಾಹುಲ್ ಗಾಂಧಿ ಅವರು ಪಕ್ಷದ ಹಿರಿಯರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ಪ್ರತಿಕ್ರಿಯೆ ವ್ಯಕ್ತಪಡಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಯೂಟರ್ನ್ ಹೊಡೆದ ಉಭಯ ನಾಯಕರು ಸ್ಪಷ್ಟನೆ ನೀಡಿ ಹೈಕಮಾಂಡ್ ಮುನಿಸನ್ನು ತಣ್ಣಗಾಗಿಸಲು ಮುಂದಾಗಿದ್ದರು.
ಇದನ್ನೂ ಓದಿ: 1998-99ರಲ್ಲಿಯೂ ಕಾಂಗ್ರೆಸ್ ಇದೇ ಸ್ಥಿತಿ ಅನುಭವಿಸಿತ್ತು…ಅಂದು ಘಟಾನುಘಟಿ ನಾಯಕರ ರಾಜೀನಾಮೆ!
ಪಕ್ಷದ ನಾಯಕತ್ವದ ಬಗ್ಗೆ ಪತ್ರ ಬರೆದ 23 ಮಂದಿ ಹಿರಿಯ ಕಾಂಗ್ರೆಸ್ ನಾಯಕರ ವಿರುದ್ಧವೂ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೆ ದೀರ್ಘಾವಧಿ ಚರ್ಚೆ, ವಾಗ್ವಾದದ ನಂತರ ಸದ್ಯದ ಸ್ಥಿತಿಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ನಿರ್ಧರಿಸಿ, ಸೋನಿಯಾ ಗಾಂಧಿ ಅವರನ್ನೇ ಹಂಗಾಮಿ ಅಧ್ಯಕ್ಷರನ್ನಾಗಿ ಮುಂದುವರಿಸಲು ಸಭೆ ನಿರ್ಧರಿಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ: ರಾಹುಲ್ ಹೇಳಿಕೆ ಗೊಂದಲ, ನಾಯಕತ್ವ ಬದಲಾವಣೆ ವಿಚಾರದಲ್ಲಿ ಒಡೆದ ಮನೆಯಾದ ಕಾಂಗ್ರೆಸ್ ?
ಪಕ್ಷದ ಅಧ್ಯಕ್ಷ ಸ್ಥಾನವನ್ನು ತೊರೆಯುವುದಾಗಿ ಸೋನಿಯಾ ಗಾಂಧಿ ಸಭೆಯಲ್ಲಿ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಪಕ್ಷ ಈಗಾಗಲೇ ನಾಯಕತ್ವದ ಬಿಕ್ಕಟ್ಟಿನಲ್ಲಿದೆ ಇಂತಹ ಸಂದರ್ಭದಲ್ಲಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಮೂಲಕ ಪಕ್ಷವನ್ನು ಮುನ್ನಡೆಸಬೇಕು ಎಂದು ಹಿರಿಯ ನಾಯಕರು ಭಿನ್ನವಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.