ನವ ದೆಹಲಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು(ಶುಕ್ರವಾರ, ಆಗಸ್ಟ್ 20) ಸಂಜೆ 14 ಪ್ರತಿ ಪಕ್ಷಗಳ ನಾಯಕರನ್ನು ವರ್ಷುವಲ್ ಮೀಟಿಂಗ್ ಗೆ ಕರೆದಿದ್ದು, ಮುಂದಿನ ಲೋಕ ಸಭಾ ಚುನಾವಣೆಗೆ ಮೈತ್ರಿ ವಿಚಾರಕ್ಕೆ ಸಂಬಧಿಸಿದಂತೆ ಬಹುತೇಕ ಎಲ್ಲಾ ಚರ್ಚೆಗಳಿರಲಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳು ನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟ್ಯಾಲಿನ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಸೇರಿ 14 ಪಕ್ಷದ ಪ್ರಮುಖ ನಾಯಕರು ಸೋನಿಯಾ ಕರೆದ ವರ್ಷುವಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ನದಿ, ಕೆರೆಕಟ್ಟೆ ಸುತ್ತಲೂ ನೆಡುತೋಪು ಬೆಳೆಸುವ ರೋಟರಿ ಇಚ್ಛಾಶಕ್ತಿ ಶ್ಲಾಘನೀಯ
ಏತನ್ಮಧ್ಯೆ, ಸಭೆಗೆ ಬಹುಜನ್ ಸಮಾಜವಾದಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ಆಹ್ವಾನಿಸಿಲ್ಲ. ಆದಾಗ್ಯೂ, 14 ಪಕ್ಷದ ಪ್ರಮುಖರನ್ನು ಆಹ್ವಾನಿಸಿದ್ದು, ಮೋದಿ ಸರ್ಕಾರದ ಈವರೆಗಿನ ಕಾರ್ಯಕ್ಷಮತೆಯಲ್ಲಿನ ವೈಫಲ್ಯತೆಯ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಪ್ರಮುಖವಾಗಿ ಸೋನಿಯಾ ಗಾಂಧಿ ಮುಂದಿನ ಲೋಕಸಭಾ ಚುನಾವಣಯನ್ನು ಕೇಂದ್ರವಾಗಿಟ್ಟುಕೊಂಡು ಮೈತ್ರಿಯಾಗಿ ಚುನಾವಣೆಯನ್ನು ಎದುರಿಸುವ ಬಗ್ಗೆ ಮಾತುಕತೆ ನಡೆಸುತ್ತಾರೆ ಎನ್ನಲಾಗಿದೆ.
ಇನ್ನು, ಮುಂಗಾರು ಅಧಿವೇಶನ ಹಾಗೂ ಕೇಂದ್ರದ ಮೂರು ಕೃಷಿ ಕಾಯ್ದೆಗಳು ಹಾಗೂ ಕೋವಿಡ್ 19 ವಿಷಯದ ಬಗ್ಗೆಯೂ ಕೂಡ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ರಾಜಕೀಯ ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಪ್ರಮುಖವಾಗಿ ಸದೃಢ ವಿರೋಧ ಪಕ್ಷವನ್ನು ಕಟ್ಟುವ ಉದ್ದೇಶದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಸಭೆಯನ್ನು ಕರೆದಿದ್ದು, ದೇಶದಾದ್ಯಂತ ಪ್ರಬಲ ಮೈತ್ರಿ ಸರ್ಕಾರ ಅಧಿಕಾರ ಹಿಡಿಯುವಂತೆ ಮಾಡುವುದು ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದಲೇ ಪ್ರತಿಪಕ್ಷಗಳ ಒಗ್ಗೂಡುವಿಕೆ ಅಗತ್ಯ ಎಂಬ ದೃಷ್ಟಿಯಿಂದ ಮಾಡುತ್ತಿರುವ ಪೂರ್ವ ತಯಾರಿ ಸಭೆ ಇದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಶನಿ ದೋಷದ ಬಗ್ಗೆ ಜನರಲ್ಲಿ ಅಪನಂಬಿಕೆಗಳೇ ಹೆಚ್ಚು…ಶುಭ, ಅಶುಭ ಫಲಗಳಿಗೆ ಕಾರಣವೇನು?