ಮುಂಬಯಿ: 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿಯೇ ಪ್ರಧಾನಿಯಾಗಬೇಕಿತ್ತು ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅಭಿಪ್ರಾಯವ್ಯಕ್ತಪಡಿಸಿದ್ದು, ಅಮೆರಿಕದಲ್ಲಿ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿರುವಾಗ, ಸೋನಿಯಾ ಗಾಂಧಿ ಪ್ರಧಾನಿ ಯಾಕಾಗಬಾರದು ಎಂದು ಹೋಲಿಕೆ ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಮತಾ ಬ್ಯಾನರ್ಜಿಗೆ ಬಹುಪರಾಕ್; ಕಾಂಗ್ರೆಸ್ ಪಕ್ಷ ತೊರೆದ ಹಿರಿಯ ಮುಖಂಡ ಫಲೈರೋ
ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಪ್ರಧಾನಿಯಾಗಬೇಕಿತ್ತು. ಒಂದು ವೇಳೆ ಅಮೆರಿಕದಲ್ಲಿ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿದ್ದ ಮೇಲೆ ಸೋನಿಯಾ ಗಾಂಧಿ ಯಾಕೆ ಪ್ರಧಾನಿಯಾಗಬಾರದು? ಸೋನಿಯಾ ಗಾಂಧಿ ಕೂಡಾ ಭಾರತೀಯ ಪ್ರಜೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪತ್ನಿ ಹಾಗೂ ಲೋಕಸಭಾ ಸಂಸದೆಯಾಗಿದ್ದಾರೆ ಎಂದು ಅಠಾವಳೆ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಸೋನಿಯಾ ಗಾಂಧಿ ಅವರ ವಿದೇಶಿ ಮೂಲದ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. 2004ರಲ್ಲಿ ಯುಪಿಎ ಬಹುಮತ ಪಡೆದಾಗ, ಸೋನಿಯಾ ಗಾಂಧಿ ಪ್ರಧಾನಿಯಾಗಬೇಕಿತ್ತು, ಅವರ ವಿದೇಶಿ ಮೂಲದ ಬಗ್ಗೆ ಚರ್ಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅಠಾವಳೆ ಹೇಳಿದರು.
ಒಂದು ವೇಳೆ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆ ಏರಲು ಆಸಕ್ತಿ ಇಲ್ಲದಿದ್ದಲ್ಲಿ, ಅಂದು ಮನಮೋಹನ್ ಸಿಂಗ್ ಬದಲು ಶರದ್ ಪವಾರ್ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಬೇಕಾಗಿತ್ತು ಎಂದು ಅಠಾವಳೆ ತಿಳಿಸಿದ್ದಾರೆ.