ಕಿರುತೆರೆಯ ನಿರ್ದೇಶನ ವಿಭಾಗದಲ್ಲಿ ಅನುಭವ ಪಡೆದ ಅದೆಷ್ಟೋ ಪ್ರತಿಭಾವಂತರು, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಆ ಸಾಲಿಗೆ ಈಗ ಅಭಿಲಾಶ್ ಸೇರಿದ್ದಾರೆ. “ಸಣ್ಣ ಬ್ರೇಕ್‌ನ ನಂತರ’ ಮೂಲಕ ನಿರ್ದೇಶಕರಾಗಿರುವ ಅಭಿಲಾಶ್, ಕಿರುತೆರೆ ನಿರ್ದೇಶಕ ರವಿ ಆರ್. ಗರಣಿ ಜೊತೆ ಹಲವು ಧಾರಾವಾಹಿಗಳಿಗೆ ಕೆಲಸ ಮಾಡಿದ್ದಾರೆ. ಆ ಅನುಭವದ ಮೇಲೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
ಈಗಾಗಲೇ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾಗಿವೆ. ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ. ಇದು ನಾಲ್ವರು ಹುಡುಗರ ಜೀವನದ ಕಥೆ. ಆ ಹುಡುಗರ ಲೈಫಲ್ಲಿ ಒಂದು ಗ್ಯಾಪ್ ಬರುತ್ತೆ. ಅಲ್ಲೊಂದು ಬದಲಾವಣೆಯೂ ಆಗುತ್ತೆ. ಆ ಬದಲಾವಣೆ ಏನೆಂಬುದೇ ಕಥೆ. ಇಲ್ಲಿ ಸಸ್ಪೆನ್ಸ್ ಅಂಶಗಳಿವೆ.
ಅದರೊಂದಿಗೆ ಹಾಸ್ಯದ ಮಿಶ್ರಣವೂ ಇದೆ. ಮಂಡ್ಯ, ಚಿಕ್ಕಮಗಳೂರು ಮತ್ತು ಕೊಡಗು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್‌ನಲ್ಲಿ ಚಿತ್ರ ರಿಲೀಸ್ ಮಾಡುವ ಯೋಚನೆ ಚಿತ್ರತಂಡದ್ದು. ಸರ್ವಶ್ರೀ ಈ ಚಿತ್ರ ನಿರ್ಮಿಸಿದ್ದಾರೆ. ಲಹರಿ ಆಡಿಯೋ ಸಂಸ್ಥೆ ಮೂಲಕ ಹೊರಬಂದಿರುವ ಹಾಡುಗಳ ಬಗ್ಗೆ ಲಹರಿ ವೇಲು ಮೆಚ್ಚಿಕೊಂಡು, ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಈ ಚಿತ್ರಕ್ಕೆ ಹಿತನ್ ಹಾಸನ್ ಸಂಗೀತ ನೀಡಿದ್ದಾರೆ. ನಾಲ್ವರು ನಾಯಕರಲ್ಲಿ ಅವರೂ ಒಬ್ಬ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಹರ್ಷ ಪ್ರಿಯ, ಅಭಿಲಾಶ್ ಗೌಡ ಗೀತೆ ರಚಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ದೋಸ್ತಿ ಸೂರ್ಯ, ಕಿರಣ್ ಕೊಡ್ಲಿಪೇಟೆ, ಅಮ್ಮಣ್ಣಿ ನಟಿಸಿದ್ದಾರೆ. ನಾಯಕಿಯಾಗಿ ಚೈತ್ರ ಮಲ್ಲಿಕಾರ್ಜುನ್ ಕಾಣಿಸಿಕೊಂಡಿದ್ದಾರೆ.