ಒಂದೊಮ್ಮೆ ತುಳು ಸಿನೆಮಾ ಲೋಕದಲ್ಲಿ ಧೂಳೆಬ್ಬಿಸಿದ್ದ ಕೆ.ಎನ್. ಟೇಲರ್ ಅವರ ‘ಬಿಸತ್ತಿ ಬಾಬು’ ಹೆಸರು ಈಗ ಮತ್ತೆ ಕೋಸ್ಟಲ್‌ವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ವಿಷ್ಣುವರ್ಧನ್ ಅಭಿನಯದ ‘ನಾಗರ ಹಾವು’ ಇತ್ತೀಚೆಗೆ ಸುದ್ದಿ ಮಾಡಿದಂತೆ ಕೋಸ್ಟಲ್‌ವುಡ್‌ನಲ್ಲಿ ಬಿಸತ್ತಿ ಬಾಬು ಹೆಸರು ಮತ್ತೆ ಚಾಲ್ತಿಗೆ ಬಂದಿದೆ. ಅಂದಹಾಗೆ, ಈಗ ಸುದ್ದಿಗೆ ಬಂದಿರುವ ‘ಬಿಸತ್ತಿ ಬಾಬು’ ಹಿಂದಿನದ್ದಲ್ಲ. ಬದಲಾಗಿ ಹೊಸದಾಗಿ ಬಿಸತ್ತಿ ಬಾಬು ಎಂಟ್ರಿಯಾಗಲಿದ್ದಾರೆ ಎಂಬುದು ಸದ್ಯದ ಸುದ್ದಿ.
ಹಿಂದಿನ ಬಿಸತ್ತಿ ಬಾಬು ಟೈಟಲ್‌ನ ಎದುರುಗಡೆ ‘ಸನ್ ಆಫ್’ ಎಂದು ಸೇರಿಸಿಕೊಂಡು ‘ಸನ್ ಆಫ್ ಬಿಸತ್ತಿ ಬಾಬು’ ಸಿನೆಮಾ ಮಾಡಲು ಸದ್ಯ ಪ್ರಯತ್ನ ನಡೆಯುತ್ತಿದೆ. ಆದರೆ, ಹಳೆಯ ಬಿಸತ್ತಿ ಬಾಬುವಿಗೂ ‘ಸನ್ ಆಫ್ ಬಿಸತ್ತಿ ಬಾಬು’ವಿಗೂ ಸಂಬಂಧವಿಲ್ಲ ಎಂಬುದು ಈಗ ಕೇಳಿಬರುವ ವಿಚಾರ. ಆದರೆ, ನಿಜಕ್ಕೂ ಇದೇನು ವಿಚಾರ ಎಂಬುದಕ್ಕೆ ಇನ್ನಷ್ಟೇ ಉತ್ತರ ದೊರೆಯಬೇಕಿದೆ.
ಅಂದಹಾಗೆ, ಕೋಸ್ಟಲ್‌ವುಡ್‌ನಲ್ಲಿ ತುಂಬಾನೆ ಹಿಟ್ ನಿರ್ದೇಶಕ ಎಂಬ ಪಟ್ಟ ಪಡೆದ ಸೂರಜ್ ಶೆಟ್ಟಿ ಇಂತಹ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಯಾವಾಗ? ಏನು ಕಥೆ? ಹಳೆಯ ಸಿನೆಮಾದ ಮುಂದುವರಿಕೆಯಾ? ಹೊಸ ಕತೆಯಾ? ಯಾರೆಲ್ಲ ಸಿನೆಮಾದಲ್ಲಿದ್ದಾರೆ? ಯಾವಾಗ ಶೂಟಿಂಗ್? ಪ್ರೊಡ್ಯುಸರ್ ಯಾರು? ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರ ಇನ್ನಷ್ಟೇ ದೊರೆಯಬೇಕಿದೆ. ಸದ್ಯಕ್ಕೆ ‘ಸನ್ ಆಫ್ ಬಿಸತ್ತಿ ಬಾಬು’ ಎಂಬ ಸಿನೆಮಾ ಮೂಡಿಬರಲಿದೆ ಎಂಬ ಮಾಹಿತಿ ಮಾತ್ರ ಇದೆ. ಈ ಬಗ್ಗೆ ಸೂರಜ್ ಅವರನ್ನು ಸಂಪರ್ಕಿಸಿದಾಗ ಅವರ ಮೊಬೈಲ್ ಸ್ವಿಚ್ ಆಫ್!
ನಿರೀಕ್ಷಿತ ಗೆಲುವು ಪಡೆಯದ ‘ಅಮ್ಮೆರ್ ಪೊಲೀಸಾ’ ಅನಂತರ ಸೂರಜ್ ಹೊಸ ಸಿನೆಮಾ ಮಾಡುವ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂಬ ತವಕದಲ್ಲಿದ್ದಾರೆ. ಹೀಗಾಗಿ ಕೋಸ್ಟಲ್‌ವುಡ್‌ನಲ್ಲಿ ವಿಭಿನ್ನ ಮ್ಯಾನರಿಸಂನ ಸಿನೆಮಾ ನೀಡುವ ಕುತೂಹಲದಲ್ಲಿ ಸೂರಜ್ ಇದ್ದಾರೆ.
ಇದಿಷ್ಟು ಹೊಸ ಬಿಸತ್ತಿ ಬಾಬು ಕಥೆಯಾದರೆ, 1972ರಲ್ಲಿ ಬಂದ ‘ಬಿಸತ್ತಿ ಬಾಬು’ ಬಗ್ಗೆ ಹೇಳುವುದಾದರೆ ಮೈಕ್ರೋ ಫಿಲಂಸ್‌ನ ಎಂ.ವೈ. ಕೋಲ ನಿರ್ಮಿಸಿದ ಈ ಸಿನೆಮಾ 1972ರಲ್ಲಿ ಪ್ರಾರಂಭವಾಗಿತ್ತು. ಇದು ತುಳುವಿನ 4ನೇ ಸಿನೆಮಾ. ಕೆ.ಎನ್.ಟೇಲರ್ ಅವರ ‘ಬಾಡಾಯಿದ ಬಂಗಾರ್’ ತುಳು ನಾಟಕದ ಕಥೆಗೆ ಚಿತ್ರಕಥೆ ಬರೆದರು. ಆರೂರು ಪಟ್ಟಾಭಿ ಅವರು ಚಿತ್ರ ನಿರ್ದೇಶನ ಮಾಡಿದ್ದರು.
‘ಅನ್ಯಾಯನಾ ವಿಚಿತ್ರನಾ ಕಲ್ಜಿಗ ಕಾಲ’ ಎಂಬ ಹಾಡಿನ ಮೂಲಕ ಗಮನಸೆಳೆದ ಈ ಸಿನೆಮಾಕ್ಕೆ ಉಪೇಂದ್ರ ಕುಮಾರ್ ಸಂಗೀತ ನೀಡಿದ್ದಾರೆ. ಮಂಗಳೂರಿನ ಕೆಲವು ಭಾಗಗಳ ಈ ಸಿನೆಮಾ ಶೂಟಿಂಗ್ ಕಂಡಿತ್ತು. ಕೆ.ಕೆ. ಮೆನನ್ ಛಾಯಾಗ್ರಹಣವಿತ್ತು. ಕರ್ನಾಟಕ ರಾಜ್ಯ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಪ್ರಥಮ ಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರದ್ದು. ವಿಶೇಷವೆಂದರೆ ಈ ಸಿನೆಮಾದ 75ನೇ ದಿನ ಸಂಭ್ರಮ ಕಾರ್ಯಕ್ರಮಕ್ಕೆ ಡಾ|ರಾಜ್‌ಕುಮಾರ್ ಅವರು ಬಂದಿದ್ದರು. ಬಾಡಿಗೆ ಗಂಡನಿಂದ ಸಂಸಾರದ ಗೊಂದಲ ನಿವಾರಣೆ ಎಂಬ ಕಥೆಯಾಧಾರಿತವಾಗಿ ಈ ಸಿನೆಮಾ ಮೂಡಿಬಂದಿತ್ತು. ಸೋಮಶೇಖರ್ ಪುತ್ರನ್, ಕೆ.ಎನ್. ಟೇಲರ್, ಬಾಲಕೃಷ್ಣ ಕದ್ರಿ, ರಾಮಚಂದ್ರ ಕೂಳೂರು, ಲೀಲಾವತಿ ಹೇಮಲತಾ, ಶಶಕಲಾ, ಸೀತಾ ಟೀಚರ್ ಮುಂತಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಪಿ.ಬಿ. ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ, ಸರೋಜಿನಿ ಪಟ್ಟಾಭಿ ಹಿನ್ನೆಲೆ ಗಾಯಕರಾಗಿದ್ದರು.
ದಿನೇಶ್ ಇರಾ