Advertisement

ಅಳಿಯನಿಂದಲೇ ಅತ್ತೆ-ಮಾವ ಕೊಲೆ

11:50 AM Mar 04, 2017 | |

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಳಿಯನೇ ನಾಲ್ವರಿಗೆ ಚಾಕುವಿನಿಂದ ಇರಿದಿದ್ದು, ಅತ್ತೆ ಮತ್ತು ಮಾವ ಮೃತಪಟ್ಟಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

Advertisement

ಅನ್ನಪೂರ್ಣೆಶ್ವರಿ ಲೇಔಟ್‌ ನಿವಾಸಿ ಕುಮಾರ್‌ (60) ಇವರ ಪತ್ನಿ ಮುರುಗಮ್ಮ (55) ಮೃತರು. ಆರೋಪಿ ಸೆಂಥಿಲ್‌ ಕುಮಾರ್‌  ಕೃತ್ಯ ಎಸಗಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ ತಿಳಿಸಿದ್ದಾರೆ.

ಆರೋಪಿಯು ಪತ್ನಿ ಸತ್ಯವತಿ (30) ಹಾಗೂ ಜಗಳ ಬಿಡಿಸಲು ಹೋಗಿದ್ದ ನೆರೆ ಮನೆಯ ನಿವಾಸಿ ಮಂಜುನಾಥ್‌ ಎಂಬುವರಿಗೂ ಚಾಕುವಿನಿಂದ ಇರಿದಿದ್ದು ಇಬ್ಬರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲತಃ ಆಂಧ್ರದ ಚಿತ್ತೂರು ಜಿಲ್ಲೆಯ ಮೃತ ಕುಮಾರ್‌ ಮತ್ತು ಮುರುಗಮ್ಮ ನಿವಾಸಿ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದರು. ಗಾರೆ ಕೆಲಸ ಮಾಡುತ್ತಿದ್ದರು.

ಮೂರು ವರ್ಷಗಳ ಹಿಂದೆ ಕುಮಾರ್‌ ಅವರ ಪುತ್ರಿ ಸತ್ಯವತಿ, ತಮಿಳುನಾಡು ಮೂಲದ ಆರೋಪಿ ಸೆಂಥಿಲ್‌ ಕುಮಾರ್‌ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದರು. ಸೆಂಥಿಲ್‌ ಮತ್ತು ಸತ್ಯವತಿ ದಂಪತಿಗೆ ಎರಡು ವರ್ಷದ ಹೆಣ್ಣು ಮಗುವಿದೆ. ವಿವಾಹವಾದ ಬಳಿಕ ಸತ್ಯಾ ದಂಪತಿ ನಡುವೆ ತಮಿಳುನಾಡಿನಲ್ಲಿಯೇ ನೆಲೆಸಿದ್ದರು. ಮದ್ಯ ವ್ಯಸನಿಯಾಗಿದ್ದ ಸೆಂಥಿಲ್‌ ವರ್ತನೆಯಿಂದ ಬೇಸತ್ತಿದ್ದ ಪತ್ನಿ, ಪತಿ ತೊರೆದು ಬೆಂಗಳೂರಿನಲ್ಲಿರುವ ತವರು ಮನೆ ಸೇರಿದ್ದಳು. 

ಆರೋಪಿ ಸೆಂಥಿಲ್‌ ಆಗ್ಗಾಗ್ಗೆ ಮನೆಗೆ ಬಂದು ಪತ್ನಿಯನ್ನು ಕಳಿಸಿಕೊಡುವಂತೆ ಕೇಳಿಕೊಳ್ಳುತ್ತಿದ್ದ. ಇದಕ್ಕೆ ಒಪ್ಪದ ಅತ್ತೆ-ಮಾವ ನೀನು ಇಲ್ಲಿಯೇ ಬಂದು ಇರುವಂತೆ ಹೇಳಿದ್ದರು. ಶುಕ್ರವಾರ ರಾತ್ರಿ ಮದ್ಯ ಸೇವಿಸಿ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ಬಂದಿದ್ದ ಆರೋಪಿ ಅತ್ತೆ-ಧಿಮಾವನೊಂದಿಗೆ ಜಗಳವಾಡಿದ್ದಾನೆ.

Advertisement

ಕೋಪದಲ್ಲಿ ಮಾವ ಕುಮಾರ್‌ ಹಾಗೂ ಅತ್ತೆ ಮುರುಗಮ್ಮ ಅವರ ಹೊಟ್ಟೆ ಭಾಗಕ್ಕೆ ಇರಿದಿದ್ದಾನೆ. ಈ ವೇಳೆ ಪತ್ನಿ ಚೀರಾಡುತ್ತಾ ತಡೆಯಲು ಹೋದಾಗ ಅವರ ತೊಡೆ ಭಾಗಕ್ಕೂ ಇರಿದಿದ್ದಾನೆ. ರಕ್ಷಣೆಗೆ ಬಂದ ನೆರೆ ಮನೆ ನಿವಾಸಿ ಮಂಜುನಾಥ್‌ ಎಂಬುವರಿಗೂ ಬೆನ್ನಿಗೆ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ.  ಪ್ರಾಥಮಿಕ ಮಾಹಿತಿಯಂತೆ ಕೌಟುಂಬಿಕ ಕಲಹದ ಹಿನ್ನೆಲೆ ಆರೋಪಿ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಸೆಂಥಿಲ್‌ ಮತ್ತು ಸತ್ಯವತಿ ಅವರು ಪೋಷಕರು ವಿರೋಧದ ನಡುವೆ ವಿವಾಹವಾಗಿದ್ದರು ಎನ್ನಲಾಗಿದೆ. 
-ಡಾ.ಎಸ್‌.ಡಿ.ಶರಣಪ್ಪ, ಡಿಸಿಪಿ (ದಕ್ಷಿಣ ವಿಭಾಗ)

Advertisement

Udayavani is now on Telegram. Click here to join our channel and stay updated with the latest news.

Next