ಚಿತ್ರಪಟ ಸಂಧಿಯ ಹೊತ್ತಲ್ಲಿ ನೀನನುಭವಿಸಿದ ಸಂದಿಗ್ಧ ನನ್ನನ್ನು ಕಾಡುತ್ತಲೇ ಇರುತ್ತದೆ. ಕೊರವಂಜಿ ರೂಪದಲ್ಲಿ ಬಂದ ಶೂರ್ಪನಖೀಯ ಮಾಯೆಗೆ ಒಳಗಾಗಿ ನೀನು, ರಾವಣೇಶ್ವರನ ಚಿತ್ರ ಬರೆದೆಯಂತೆ, ಅಷ್ಟೇ ಅಲ್ಲ ಆ “ಚಿತ್ರದ ರಾವಣನಿಗೆ’ ಜೀವವನ್ನೂ ತುಂಬಿದೆ! ಜೀವಂತ ರಾವಣನನ್ನು ಮತ್ತೆ ಕಣ್ಣಾರೆ ಕಂಡು, ಗಾಬರಿಯಿಂದ, ಅವನನ್ನು ಬಚ್ಚಿಡಲು ಮುಂದಾದೆಯಂತೆ.
Advertisement
ದಿಗ್ಭ್ರಮೆ ಎನ್ನಿಸುವ ಸಂಗತಿಯೆಂದರೆ, ಈ ಲೋಕಕ್ಕೆ ಸತ್ತು ಇನ್ನಿಲ್ಲವಾದ ರಾವಣ ನಿನ್ನ ಚಿತ್ರಪಟದಲ್ಲಿ ಸಜೀವನಾಗುವುದು ಎಂದರೇನು? ಅವನನ್ನು ಬಚ್ಚಿಡಲೇಬೇಕೆಂಬ ನಿನ್ನ ಒಳಗುದಿಯ ಅರ್ಥವೇನು?
Related Articles
Advertisement
“ಗೌತಮ ಮುನಿಯ ಮಡದಿ ಅಹಲೆÂ ಮದುವೆಯ ದಿನ ಮೆಚ್ಚಿದ್ದು ಇಂದ್ರನನ್ನಂತೆ. ಆದರೆ, ವಧುವಿನ ತಂದೆಯಿಟ್ಟ ಪಂಥದಂತೆ ಪ್ರಪಂಚ ಪ್ರದಕ್ಷಿಣೆಗೆ ಇಂದ್ರ ಹೊರಟಾಗ, ಪ್ರಾಜ್ಞ ಗೌತಮ ಅಲ್ಲಿಯೇ ಇದ್ದ ಗೋಮಾತೆಗೇ ಒಂದು ಸುತ್ತು ಸುತ್ತಿ ಪಂಥ ಗೆದ್ದು ಅಹಲೆಯನ್ನು ವರಿಸಿದನಂತೆ. ಅಂದೇ ಅಹಲೆÂಯ ಮನಸ್ಸು ಕಲ್ಲಾಗಿ ಹೋಯ್ತು. ಮತ್ತೆ ಮೋಸದಿಂದ ಅವಳ ಮನದ ಕದ ತಟ್ಟಿದ ಇಂದ್ರ ತನ್ನ ಪ್ರೇಮ ಸಿಂಚನದಿಂದ ಕಲ್ಲು ಕರಗಿಸಿದನಂತೆ!’
“ಪಾತಿವ್ರತ್ಯದ ಬಲದಿಂದಲೇ ಮರಳಿನಿಂದ ಮಡಕೆ ಮಾಡಿ ಗಂಡನ ಯಜ್ಞಕ್ಕೆ ಮಡಿ ನೀರನ್ನು ದಿನವೂ ತರುತ್ತಿದ್ದ ರೇಣುಕಾದೇವಿ, ಒಮ್ಮೆ ಗಂಧರ್ವರ ಸೌಂದರ್ಯವನ್ನು ಸವಿಯುತ್ತಾ ಅರೆಕ್ಷಣ ಮೈಮರೆತಿದ್ದಳಂತೆ!’
“ಬೃಹಸ್ಪತಿಯ ಮಡದಿ ತಾರೆ ತನ್ನ ಗಂಡನ ಶಿಷ್ಯ ಶಶಾಂಕನನ್ನು ಅಗಲಿರಲಾರದೇ ಆಕಾಶದಗಲಕ್ಕೆ ಚದುರಿಕೊಂಡು ಈ ಜಗ ಕೊನೆಯಾಗುವವರೆಗೂ ಅವನನ್ನೇ ದಿಟ್ಟಿಸುತ್ತಲೇ ಇರುವ ವ್ರತ ಹಿಡಿದಿರುವಳಂತೆ!’
ಅರರೇ! ಎಂದೂ ಕಾಡದ ಈ ಕಥೆಗಳೆಲ್ಲ ಹೀಗೆ ಮಗ್ಗುಲು ಹೊರಳಿಸಿ ನಿಂತಿರುವ ಪರಿ ನೋಡಿ ನಮ್ಮ ಪತಿವ್ರತೆಯ ಮತಿ ಭ್ರಮಿಸಿಹೋಯ್ತು. “ತನ್ನ ಮನಸ್ಸೇಕೆ ಇಷ್ಟು ಭ್ರಷ್ಟವಾಗಿದೆ’ ಎಂದು ಹಲುಬಿದಳು. ಗಂಡನ ಮುಖದಲ್ಲಿ “ಅವನ’ ಮುಖ ಕಂಡಂತಾಗಿ ಹೌಹಾರಿದಳು. ತನ್ನಷ್ಟಕ್ಕೇ ಕಣ್ಣೀರಾದಳು. “ಈ ಪ್ರಪಂಚದ ಯಾವ ಸುಖವೂ ತನಗಲ್ಲ’ ಎಂಬಂತೆ ವ್ರತ, ಉಪವಾಸ, ಧ್ಯಾನದಲ್ಲಿ ತನ್ನನ್ನು ಅದ್ದಿಕೊಂಡು ಬಿಟ್ಟಳು.ಹೆಂಡತಿಯ ಆರೋಗ್ಯ ಹದಗೆಟ್ಟಿರುವುದು ಗಂಡನ ಗಮನಕ್ಕೂ ಬಂತು. ಜ್ಯೋತಿಷಿಗಳ ಮುಂದೆ ಮಂಡಿಯೂರಿದ.
ಅವರೆಂದದ್ದು ಒಂದೇ ಮಾತು, ವಾಸ್ತುದೋಷ! ಹಾಗಾಗಿ ಕಟ್ಟೋಣದ ಕೆಲಸ ಹಠಾತ್ತಾಗಿ ನಿಂತಿತು. ಸಿಮೆಂಟು, ಬಣ್ಣ ಕಾಣದ ಅರ್ಧಂಬರ್ಧ ಮೇಲೆ ಬಂದ ಹೊಸ ಗೋಡೆಗಳು ಹಳೆ ಮನೆಗೆ ತಾಗಿಕೊಂಡೇ ಕೆಲವು ಕಾಲ ಗಟ್ಟಿಯಾಗಿ ನಿಂತಿತ್ತು. ಮುಂದಿನ ಮಳೆಗಾಲಕ್ಕೆ ಅದು ತಾನಾಗೇ ಬಿದ್ದುಹೋದರೆ ಹೊಸ ಕಟ್ಟೋಣವನ್ನು ವಾಸ್ತುಪ್ರಕಾರ ಕಟ್ಟಿ ಮುಗಿಸಬೇಕೆಂಬುದು ಗಂಡನ ಲೆಕ್ಕಾಚಾರ.
ಈಗ ಹೇಳು ಸೀತೆ, ರೀತಿ-ನೀತಿ ಕೋಟೆಯೊಳಗೆ, ಸಂಯಮದ ಕವಚ ತೊಟ್ಟು ಬದುಕುತ್ತಿರುವ ಇಂತಹ ಗಟ್ಟಿ ಮನಸ್ಸಿನ ದಿಟ್ಟೆಯರೂ ಯಾವುದೋ ಮಾಯಕದಲ್ಲಿ ಬಂದೆರಗುವ ಮನ್ಮಥನ ಶರಹತಿಗೆ ಜರ್ಜರಿತರಾಗುವುದು ಸೋಜಿಗವೇ? ಸಹಜವೇ? ಇಂತಹ ಒಂದು ಕ್ಷಣದ ಚಿತ್ತಚಾಂಚಲ್ಯಕ್ಕೆ ಅವರು ತೆರಬೇಕಾದ ಬೆಲೆಯೂ ಅಂತಿಂಥದ್ದಲ್ಲ. ಹೊರಜಗತ್ತಿನ ಉಗ್ರ ಶಾಪಕ್ಕೆ ಅಹಲೆÂಯಂತೆ ಶಾಶ್ವತವಾಗಿ ಅವರು ಕಲ್ಲಾಗಬೇಕು, ರೇಣುಕೆಯಂತೆ ಹೆತ್ತ ಮಕ್ಕಳ ತಾತ್ಸಾರದ ಕುಡುಗೋಲಿಗೆ ಕತ್ತನ್ನೊಡ್ಡಬೇಕು, ತಾರೆಯಂತೆ ಬದುಕನ್ನು ಛಿದ್ರಗೊಳಿಸಿ ನಿರ್ವಾತದಲ್ಲಿ ಹರಡಿಕೊಳ್ಳಬೇಕು. ಇನ್ನು ಒಳ ಜಗತ್ತಿನ ಹಿಂಸೆಯೇನು ಕಡಿಮೆಯದ್ದೇ? ಒಳಿತು-ಕೆಡುಕು, ಸಾಧು-ಅಸಾಧು, ಸೊಗ-ದುಗುಡ ಈ ದ್ವಂದ್ವಗಳ ನಡುವೆ ಈಜುತ್ತಾ ತಪ್ಪಿತಸ್ಥ ಭಾವದೊಂದಿಗೆ ಮುಳುಗೇಳಬೇಕು, ಉಸಿರುಗಟ್ಟಿ ಸಾಯಬೇಕು. ಹೀಗಿದ್ದರೂ ಈ ನೀರೆಯರು ಗಂಡ, ಮನೆ, ಮಕ್ಕಳನ್ನು ಹಿಂದೆ ಬಿಟ್ಟು ಜೋಗಪ್ಪನ ಜಾಡು ಹಿಡಿಯುತ್ತಾರೆಂದರೆ ಆ ಸೆಳೆತ ಅದೆಷ್ಟು ತೀವ್ರವಾಗಿರಬಹುದು?
ರಾಮನ ಸೀತೆಯ ಮನದಲ್ಲೂ ಹೀಗೊಂದು ಪುಟ್ಟ ಅಲೆ ಎದ್ದಿರಬಹುದೇ ಎಂದರೆ ಅದಕ್ಕೊಂದು ಚಿಕ್ಕ ಕುರುಹೂ ನಿನ್ನ ಬಾಳ ಬಟ್ಟೆಯಲ್ಲಿ ಕಾಣಸಿಗುವುದಿಲ್ಲ. ಆದರೂ ಚಿತ್ರಪಟದಲ್ಲಿ ಜೀವಂತ ರಾವಣನನ್ನು ಸೃಷ್ಟಿಸಿದ ಸೀತೆಯ ಕುರಿತು ಕರುಣಾಳು ರಾಘವ ನಿಷ್ಠುರನಾಗಿಬಿಟ್ಟ. ಚಿತ್ರಪಟದ ರಾವಣನನ್ನು ಬ್ರಹ್ಮಾಸ್ತ್ರದಿಂದ ಸಂಹಾರಗೈದ ಅನುಜ ಲಕ್ಷ್ಮಣನಿಗೇ “ಸೀತೆಯನ್ನು ಕಾಡಿನಲ್ಲಿ ಕೊನೆಗೊಳಿಸು’ ಎಂದು ಆಜ್ಞಾಪಿಸಿದನಂತೆ.
ನೆನಪಿರಲಿಲ್ಲವೇ ಸೀತೆ? ನೆನಪುಗಳನ್ನೂ ಸಹಿಸುವುದಿಲ್ಲ ಪರಿಶುದ್ಧ ಪಾತಿವ್ರತ್ಯ!
– ಅಭಿಲಾಷಾ ಎಸ್.