ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರ ಜೋಗಿ, ಇಂಗ್ಲಿಷ್‌ನಿಂದ ಅನುವಾದವಾದ ನೀಳ್ಗವಿತೆ. ಇದರ ಮೂಲ ಲೇಖಕ ಬ್ರೌನಿಂಗ್ ಸಾರ್ಡೆಲ್ಲೋ- ಆತ ತನ್ನ 28ನೇ ವಯಸ್ಸಿನಲ್ಲಿ ಬರೆದು ಪ್ರಕಟಿಸಿದ ನೀಳ್ಗವಿತೆ. ಈ ಕವಿತೆ ಐರೋಪ್ಯ ಕಾವ್ಯಜಗತ್ತಿನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಬಹುತೇಕ ಕವಿ, ಸಾಹಿತಿ, ವಿಮರ್ಶಕರಿಗೆ ಈ ಕಾವ್ಯದ ತಲೆಬುಡ ಅರ್ಥವಾಗಲಿಲ್ಲ. ಡಗ್ಲಾಸ್ ಜೆರಾಲ್ಡ್ ಎಂಬ ಸಾಹಿತಿ ಜ್ವರದಿಂದ ಬಳಲುತ್ತಿದ್ದಾಗ “ಸಾರ್ಡೆಲ್ಲೋ’ ಓದಿದನಂತೆ.
ಅದು ಜನಸಾಮಾನ್ಯರಿಗೆ ಏನೇನೂ ಅರ್ಥವಾಗದೆಂದೂ, ಪಂಡಿತರಿಗಷ್ಟೇ ಆ ಕಾವ್ಯದ ರುಚಿ ಸಿಕ್ಕೀತೆಂದೂ, ಅವನಿಗೆ ಅನ್ನಿಸಿತಂತೆ. ಆತ ತನ್ನ ಹೆಂಡತಿಗೆ ಅದನ್ನು ಓದಲು ಕೊಟ್ಟ. ಪೂರ್ತಿ ಓದಿದ ಆಕೆ- ಇದೇನು, ಸ್ವಲ್ಪವೂ ಅರ್ಥವಾಗದ ಗೊಬ್ಬರ ಇದು! ಎಂದಾಗ, ತನ್ನ ಊಹೆ ನಿಜ ಎಂದು ಕುಣಿದು ಕುಪ್ಪಳಿಸಿದನಂತೆ! ಸಾರ್ಡೆಲ್ಲೋ ಕಾವ್ಯದಿಂದಾಗಿ, ಬ್ರೌನಿಂಗ್‌ನ ಸಾಮರ್ಥ್ಯಕ್ಕೆ ಒಳಗೊಳಗೇ ಉರಿದವರೂ ಇದ್ದರು.
ಲಾರ್ಡ್ ಟೆನ್ನಿಸನ್ ಎಂಬ ಕವಿ, ಸಾರ್ಡೆಲ್ಲೋ ವಿಷಯದಲ್ಲಿ, ಆ ಅಷ್ಟುದ್ದದ ಕವಿತೆಯಲ್ಲಿ ಅರ್ಥವಾಗ ಬಲ್ಲ ಸಾಲುಗಳು ಎರಡೇ. ಆದರೆ, ಅವೆರಡೂ ಸುಳ್ಳು ಗಳೇ ಎಂದಿದ್ದಾನೆ. ಕಾಲೈಲ್ ಎಂಬ ಇನ್ನೊಬ್ಬ ಕವಿ, ನಾನು ಅದನ್ನು ನನ್ನ ಪತ್ನಿಗೆ ಓದಿಸಿದೆ. ಸಾರ್ಡೆಲ್ಲೋ ಎಂದರೆ ವ್ಯಕ್ತಿಯೇ, ನಗರವೇ ಅಥವಾ ಕೇವಲ ಪುಸ್ತಕದ ಹೆಸರೇ ಎಂಬುದು ಆಕೆಗಿನ್ನೂ ಬಗೆಹರಿದಿಲ್ಲ ಎಂದ. ಒಮ್ಮೆ, ಒಂದಷ್ಟು ಮಂದಿ ನೇರ ಬ್ರೌನಿಂಗ್ ಬಳಿಯೇ ಬಂದು, ಕವಿತೆಯ ಒಂದೆರಡು ಭಾಗಗಳನ್ನು ತೋರಿಸಿ ಇದರ ಅರ್ಥ ಹೇಳಿ ಎಂದು ದುಂಬಾಲು ಬಿದ್ದರು.
ಬ್ರೌನಿಂಗ್, ಕವಿತೆಯ ಕೆಲ ಸಾಲುಗಳನ್ನು ನಾಟಕೀಯವಾಗಿ, ಧ್ವನಿಯ ಏರಿಳಿತಗಳೊಂದಿಗೆ ಓದಿ ಹೇಳಿದ. ಅರ್ಥವಾಗಲಿಲ್ಲ ಎಂದಿತು ಗುಂಪು. ಆತ ಮತ್ತೂಮ್ಮೆ ಅವೇ ಸಾಲುಗಳನ್ನು ಇನ್ನಷ್ಟು ಲಂಬಿಸಿ ಓದಿದ. ಆಗಲೂ ಗುಂಪಿಗೆ ಏನೇನೂ ತಿಳಿಯಲಿಲ್ಲ. ಆಗ ಬ್ರೌನಿಂಗ್ ಹೇಳಿದ: ನಾನು ಈ ಸಾಲುಗಳನ್ನು ಬರೆದಾಗ ಇಬ್ಬರಿಗೆ ಅವುಗಳ ಅರ್ಥ ತಿಳಿದಿತ್ತು. ಒಂದು ನಾನು, ಇನ್ನೊಂದು ದೇವರು. ಆದರೆ ಈಗ ಅವುಗಳ ಅರ್ಥ ಗೊತ್ತಿರುವುದು ಆ ದೇವರಿಗೆ ಮಾತ್ರ.
* ರೋಹಿತ್ ಚಕ್ರತೀರ್ಥ