ಪಿಸಿರಿಲ್ಲದ ನುಡಿತ, ವೀಣೆಯ ಒಂದು ಮೀಟಿನ ಕಂಪನ – ವ್ಯಾಪ್ತಿಯೊಳಗೆ ರಾಗದ ಜೀವಸಂಚಾರವನ್ನು ತೆರೆದಿಡುವ ಜಾಣ್ಮೆ; ಬಿರ್ಕಾಗಳು ಅಥವಾ ವಲಿ, ಕುರುಳ ಮುಂತಾದ ಗಮಕಗಳನ್ನು ಸೂಕ್ತವಾದ ಜಾಗದಲ್ಲಿ ಅಚ್ಚುಕಟ್ಟಾಗಿ ವಿನಿಯೋಗಿಸುವ ಪ್ರಜ್ಞೆ; ಆಧುನಿಕ ಕಸರತ್ತುಗಳಿಲ್ಲದ ನೇರ ನುಡಿಸಾಣಿಕೆ. ಸ್ವತಃ ಗಾಯಕಿಯೂ ಆಗಿರುವ ಕಲಾವಿದೆ ಕೃತಿಗಳ ಸಾಹಿತ್ಯಾರ್ಥಕ್ಕೆ ಆದ್ಯತೆ ನೀಡಿದ ಪರಿ ಶ್ಲಾಘನೀಯ.ಮೊದಲಿಗೆ ಕಲ್ಯಾಣಿ ಅಟ ತಾಳ ವರ್ಣ, ಮುಂದೆ ಸ್ವರ ವಿನಿಕೆಗಳ ಸಹಿತ ಕಮಲಾಮನೋಹರಿ (ಶಂಕರಂ ಅಭಿರಾಮ), ವಿಳಂಬ ಕಾಲದಲ್ಲಿ ಸೊಗಸಾಗಿ ಮೂಡಿ ಬಂದ ರೀತಿ ಗೌಳ (ಜನನೀ ನಿನ್ನುವಿನಾ), ಅಪೂರ್ವ ರಾಗ ವಿಟಿಪಿ (ಸರಿ ಸಮಾನ) ಅಂತೆಯೇ ತ್ವರಿತ ಗತಿಯಲ್ಲಿ ಸಾಗಿದ ನಳಿನಕಾಂತಿ (ಪಾಲಯಸದಾ) ಕೃತಿಗಳು ತಮ್ಮ ನೆಲೆಯಲ್ಲಿ ಸೌಖ್ಯವಾಗಿ ಮೂಡಿಬಂದವು. ಪ್ರಧಾನ ರಾಗ ಭೈರವಿ, (ಬಾಲಗೋಪಾಲ), ಸವಿಸ್ತಾರವಾದ ರಾಗಪೋಷಣೆ, ಪ್ರಬುದ್ಧವಾದ ಚಿಟ್ಟೆ ತಾನಂ, ನೆರವಲ್ ಮತ್ತು ಕ್ಲಿಷ್ಟ ಗಣಿತದ ಮುಕ್ತಾಯಗಳಿಂದ ಅಲಂಕೃತವಾಗಿದ್ದು ಇಡೀ ಪ್ರಸ್ತುತಿಗೆ ನ್ಯಾಯ ಒದಗಿಸಿತು. ಸಹವಾದನ ಮತ್ತು ತನಿಯಲ್ಲಿ ಮಿಂಚಿದ ಸುನಾದ ಕೃಷ್ಣ ಅಭಿನಂದನಾರ್ಹರು.ರಂಜನಿ ರಾಗಗಳ ಮಾಲಿಕೆ, ಆಹಿರ್ ಭೈರವ್‌ನಲ್ಲಿ ದೇವರ ನಾಮ ಮತ್ತು ಮಧುವಂತಿಯ ತಿಲ್ಲಾನಾದೊಂದಿಗೆ ಈ ಕಛೇರಿ ಕೊನೆಗೊಂಡಿತು.
Advertisement
ಸೆ.6ರಂದು ಒಂದು ಸುಶ್ರಾವ್ಯವಾದ ಹಿಂದುಸ್ತಾನಿ ಸಂಗೀತವನ್ನು ನೀಡಿದವರು ಶ್ರೀಮತಿ ದೇವಿ. ಸೂರ ಮಲ್ಹಾರ್ ಮತ್ತು ಜೋಗ್ ಪ್ರಧಾನ ರಾಗಗಳಾಗಿದ್ದವು. ಈ “ಬಂದಿಷ್’ಗಳನ್ನು ಅನುಕ್ರಮವಾಗಿ ಮೂರು ಕಾಲಗಳಲ್ಲಿ ವಿಸ್ತರಿಸುತ್ತಾ ಸ್ಪಷ್ಟವಾದ “ಅ’ ಕಾರಗಳು ನುಡಿಯುವ “ತಾನ್’ಗಳು ಮತ್ತು ಬೋಲ್ “ತಾನ್’ಗಳನ್ನು ಅಂದವಾಗಿ ನಿರ್ವಹಿಸಿದ ಪರಿ ರಸಿಕರಿಗೆ ಮುದ ನೀಡಿತು. ಮಧ್ಯ ಲಯದಲ್ಲಿ “ಕೇದಾರ’ ರಾಗದ ಹಿತವಾದ ಪ್ರಸ್ತುತಿಯ ನಂತರ, ಉತ್ತರಾದಿ ಛಾಯೆಯಲ್ಲಿ ಮಾರು ಚಹಾಗ್‌ನಲ್ಲಿ ಹಾಡಲಾದ ವಚನ (ನುಡಿದರೆ ಮರಾಠಿ ಅಭಂಗ್, ಕಬೀರರ ತತ್ವಗೀತೆ ಹೀರನಾ) ಮತ್ತು ಭೈರವಿಯಲ್ಲಿ ಒಂದು ಭಜನ್ ಹಾಡಿ ಕಛೇರಿಯನ್ನು ಸಂಪನ್ನಗೊಳಿಸಿದರು. ಭೀಮಾ ಶಂಕರ ತಬಲಾದಲ್ಲಿ ಸತೀಶ್ ಭಟ್ ಹಾರ್ಮೋನಿಯಂನಲ್ಲೂ ಸಾಥ್ ನೀಡಿದ್ದಾರೆ.
Related Articles
Advertisement
ಕಛೇರಿಯ ಉತ್ತರಾರ್ಧದಲ್ಲಿ ಭಾವಪೂರ್ಣವಾಗಿ ಮೂಡಿಬಂದ ಗ್ರಾಮ್ಯ ಸೊಗಡನ್ನು ನೆನಪಿಸುವ ಪಹಾಡಿ (ಆಕ್ಕ ಕೇಳವ್ವ) ವಚನ ಚಾರುಕೇಶಿ ರಾಗಾಧಾರಿತ ಲಘು ಪ್ರಸ್ತುತಿ ಮತ್ತು ಕಲ್ಯಾಣಿಯ ಗ್ರಹಭೇದ ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು.
ಸೆ.11ರಂದು ಉಡುಪಿಯ “ರಾಗಧನ’ ಸಂಸ್ಥೆ ರಂಜನಿಯ ಸಂಸ್ಮರಣಾರ್ಥವಾಗಿ ನೂತನ ರವೀಂದ್ರ ಮಂಟಪದಲ್ಲಿ ಸಂಗೀತ ಕಛೇರಿಯನ್ನು ಆಯೋಜಿಸಿತ್ತು. ಚೆನ್ನೈನ ಕು| ಅರ್ಚನಾ ಮತ್ತು ಕು| ಆರತಿ ಸೋದರಿಯರು ಇದನ್ನು ನಡೆಸಿಕೊಟ್ಟರು. ಇವರಿಗೆ ಚೆನ್ನೈನ ಅರ್ಜುನ್ ದಿನಕರ್ ಪಿಟೀಲಿನಲ್ಲಿ ಬಿ.ಎಸ್. ಪ್ರಶಾಂತ್ ಮೃದಂಗದಲ್ಲಿ ಮತ್ತು ಅನಿಲ್ ಪರಾಶರ್ ಖಂಜೀರದಲ್ಲಿ ಸಹಕರಿಸಿದ್ದಾರೆ.
ನಾಟರಾಗದ (ಜಯ ಜಾನಕೀ) ಪುರಂದರದಾಸರ ರಚನೆಯೊಂದಿಗೆ ಉತ್ಸಾಹಪೂರ್ಣ ಪ್ರಾರಂಭ. ಮುಂದೆ ರಾಗ, ಸ್ವರ ವಿಸ್ತಾರಗಳಿಂದ ಕೂಡಿದ್ದು ಹರಿಕಾಂಭೋಜ (ಉಂಡೇದಿರಾಮುಡು) ಸೌಖ್ಯವಾದ ಆಲಾಪನೆಯನ್ನನುಸರಿಸಿದ ರೀತಿ ಗೌಳ (ಜನನೀ) ವಿಳಂಬ ಕಾಲದಲ್ಲಿ ದ್ವಿಜಾವಂತಿ (ಚೇತಶ್ರೀ) ಮತ್ತು ತ್ವರಿತಗತಿಯಲ್ಲಿ ಕೇದಾರಗೌಳ (ಪರಾಕೇಲ) ಕೃತಿಗಳು ಮೂಡಿಬಂದವು.
ಪ್ರಧಾನರಾಗ ತೋಡಿಯಲ್ಲಿ (ಕೊಲುವ ಮರೆಗದ) ಸಾಂಪ್ರದಾಯಿಕ ಶೈಲಿಯಲ್ಲಿ ಬೆಳೆಸಲಾದ ರಾಗಾಲಾಪನೆ ಮತ್ತು ಸ್ವರ ಪ್ರಸ್ತಾರಗಳು ಉತ್ತಮವಾಗಿದ್ದು (ಈ ಎಲ್ಲಾ ರಾಗವಿಸ್ತಾರಗಳಲ್ಲೂ ಷಡ್ಜ , ಪಂಚಮಗಳಲ್ಲಿ ಯಾ ನ್ಯಾಸ ಸ್ವರಗಳು ಆಗಾಗ ಸುದೀರ್ಘವಾದ ನಿಲುಗಡೆ ಅಥವಾ ವಿಶ್ರಾಂತಿಯ ಅಗತ್ಯವಿತ್ತು ಎನಿಸಿತು. ಪೂರ್ವಿ ಕಲ್ಯಾಣಿಯನ್ನು ರಾಗಂ, ತಾನಂ ಪಲ್ಲವಿಗಾಗಿ ಆಯ್ದುಕೊಂಡ ಗಾಯಕಿಯರು ಅತ್ಯಂತ ಕ್ಷಿಪ್ರಗತಿಯಲ್ಲಿ – ರಾಗ, ತಾನಂ, ಪಲ್ಲವಿ, ರಾಗಮಾಲಿಕಾ ಸ್ವರ ಕಲ್ಪನೆಗಳು ಎಲ್ಲವನ್ನೂ 15 ನಿಮಿಷಗಳ ಒಳಗೆ ಪೂರೈಸಿದರು. ಬೆಹಾಗ್ ದೇವರನಾಮ (ಕಂಡು ಧನ್ಯನಾದೆ) ಕಛೇರಿಯ ಕೊನೆಯ ಪ್ರಸ್ತುತಿಯಾಗಿತ್ತು.
ಸರೋಜಾ ಆರ್. ಆಚಾರ್ಯ