ಬಾಗಲಕೋಟೆ: ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಮಹತ್ವದ ಘಟ್ಟ ಎಂದೇ ಕರೆಯುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಸೋಮವಾರದಿಂದ ಆರಂಭಗೊಂಡಿದ್ದು, ಹಿಜಾಬ್ ಹಾಕಿಕೊಂಡು ಬರುವ ಕುರಿತ ವಾದ-ವಿವಾದದ ಮಧ್ಯೆ ಹಲವಾರು ಮಕ್ಕಳು ಹಿಜಾಬ್ ಧರಿಸಿ, ಪರೀಕ್ಷೆ ಕೊಠಡಿವರೆಗೆ ಆಗಮಿಸಿ, ಮರಳಿ ಅದನ್ನು ತೆಗೆದಿಟ್ಟು ಪರೀಕ್ಷೆ ಬರೆದರು.
ನಗರದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಪರೀಕ್ಷೆ ಕೇಂದ್ರದ ಎದುರು ನೂರಾರು ವಿದ್ಯಾರ್ಥಿಗಳು, ಹಿಜಾಬ್ ಧರಿಸಿಯೇ ಆಗಮಿಸಿದ್ದರು. ಈ ವೇಳೆ ಶಿಕ್ಷಕರು, ಹಿಜಾಬ್ ಧರಿಸಿ, ಪರೀಕ್ಷೆ ಕೊಠಡಿಗೆ ತೆರಳುವಂತೆ ಸೂಚಿಸಿದರು. ಇದಕ್ಕೆ ವಿದ್ಯಾರ್ಥಿಗಳು, ಪಾಲಕರೂ ಒಪ್ಪಿಗೆ ನೀಡಿ, ಹಿಜಾಬ್ ತೆಗೆದು ಪರೀಕ್ಷೆ ಕೊಠಡಿಗೆ ತೆರಳಿದರು.
ಇನ್ನೂ ಕೆಲ ಮಕ್ಕಳು, ಶಾಲಾ ಆವರಣದ ಹೊರಗೆ ಇದ್ದ ಪಾಲಕರ ಬಳಿಯೇ ಹಿಜಾಬ್ ಕೊಟ್ಟು ತೆರಳಿದರು. ಇಳಕಲ್ಲ ನಗರದ ಪರೀಕ್ಷೆ ಕೇಂದ್ರದ ಎದುರು ಪಾಲಕರೊಂದಿಗೆ ಬೈಕ್‌ನಲ್ಲಿ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರೊಬ್ಬರು, ಪರೀಕ್ಷೆ ಬರೆಯದೇ ಮರಳಿದರು. ಬುರ್ಖಾ ಮತ್ತು ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಸೂಚಿಸಿದ್ದಕ್ಕೆ ಆ ವಿದ್ಯಾರ್ಥಿನಿ ಮರಳಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ರೆಗ್ಯೂಲರ್, ರಿಪಿಟರ್ ಸೇರಿದಂತೆ ಒಟ್ಟು 30,575 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಿದ್ದು, ಆದರೆ, 30,361 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ರೆಗ್ಯುಲರ್ 30,266 ಹಾಗೂ 95 ಜನ ರಿಪಿಟರ್ ವಿದ್ಯಾರ್ಥಿಗಳು ಹಾಜರಾಗಿದ್ದರು. 21 ಜನ ರಿಪಿಟರ್ ಮತ್ತು 209 ಜನ ರೆಗ್ಯೂಲರ್ ಸಹಿತ ಒಟ್ಟು 330 ವಿದ್ಯಾರ್ಥಿಗಳು ಗೈರು ಉಳಿದಿದ್ದರು ಎಂದು ಡಿಡಿಪಿಐ ಶ್ರೀಶೈಲ ಎಸ್. ಬಿರಾದಾರ ತಿಳಿಸಿದ್ದಾರೆ.
ಮೊದಲ ದಿನದ ಪರೀಕ್ಷೆಗೆ 42 ಮಕ್ಕಳು ಗೈರು ಬಾದಾಮಿ: ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನ ಸೋಮವಾರ ಕನ್ನಡ ಭಾಷೆಯ ಪರೀಕ್ಷೆ ಶಾಂತಿ ಸುವ್ಯವಸ್ಥಿತವಾಗಿ ನಡೆಯತು. ತಾಲೂಕಿನಾದ್ಯಂತ 23 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 5108 ಮಕ್ಕಳಲ್ಲಿ 42 ಮಕ್ಕಳು ಮೊದಲ ದಿನದ ಪರೀಕ್ಷೆಗೆ ಗೈರಾಗಿದ್ದರು. ಉಳಿದಂತೆ 5066 ಮಕ್ಕಳು ಪರೀಕ್ಷೆ ಬರೆದರು. ನಗರದಲ್ಲಿನ ಶ್ರೀ ಕಾಳಿದಾಸ, ವೀರಪುಲಿಕೇಶಿ ಸಂಸ್ಥೆಯ ಎಸ್‌ಬಿಸಿ ಬಾಲಕಿಯರ ಕೇಂದ್ರ, ಜಿಎಂಕೆ ಪರೀಕ್ಷಾ ಕೇಂದ್ರ ಮತ್ತು ಬಸವೇಶ್ವರ ಪರೀಕ್ಷಾ ಕೇಂದ್ರದಲ್ಲಿಯೂ ನಾಲ್ಕು ಕೇಂದ್ರಗಳಲ್ಲಿ ಸಹ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆದವು. ಯಾವುದೇ ಮಕ್ಕಳು ಡಿಬಾರ್ ಆಗಿಲ್ಲ. ಸುಗಮವಾಗಿ ಪರೀಕ್ಷೆ ನಡೆದವು. ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಬಿಇಒ ಆರೀಫ್ ಬಿರಾದಾರ ತಿಳಿಸಿದ್ದಾರೆ.