ಆಳಂದ: ಗ್ರಾಮೀಣ ಜನರಿಗೆ ಕೈಗೆಟ್ಟುಕುವ ದರದಲ್ಲಿ ತರಕಾರಿ, ದವಸ, ಧಾನ್ಯಗಳ ಮಾರಾಟ ಹಾಗೂ ಖರೀದಿಗೆ ಸ್ಥಳೀಯವಾಗಿ ಅನುಕೂಲ ಕಲ್ಪಿಸುವ ಉದ್ದೇಶದಿಂದ ತಾಲೂಕಿನ ಗಡಿ ಗ್ರಾಮ ತಡೋಳಾ ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ಸೋಮವಾರ ಗ್ರಾಮದಲ್ಲಿ ವಾರದ ಸಂತೆ ಆರಂಭವಾಗಿದೆ. ಗ್ರಾಪಂ ಹತ್ತಿರದ ಆವರಣದಲ್ಲಿ ಸಂತೆಗೆ ಸ್ಥಳ ಒದಗಿಸಲಾಗಿದೆ.
ತಡೋಳಾ, ಖಂಡಾಳ, ಜಮಗಾ, ಮಟಕಿ, ತಾಂಡಾ, ಆಳಂಗಾ ಸೇರಿದಂತೆ ನೆರೆಹೊರೆ ಗ್ರಾಮಗಳ ಮಾರಾಟಗಾರರಿಗೆ ಮತ್ತು ಖರೀದಿಗೆ ಇದು ವರವಾಗಿದೆ. ಸಂತೆಯಲ್ಲಿ ಖಜೂರಿ, ಆಳಂದ, ಮಹಾರಾಷ್ಟ್ರದ ಖಸಗಿ ಸೇರಿದಂತೆ ಮತ್ತಿತರ ಭಾಗದ ವ್ಯಾಪಾರಿಗಳು ಭಾಗವಹಿಸುತ್ತಾರೆ. ಗ್ರಾಪಂನಿಂದ ಸಂತೆ ಕಟ್ಟೆ ವ್ಯವಸ್ಥೆ ಕಲ್ಪಿಸಿದ್ದು, ನೀರು ಸೇರಿದಂತೆ ಮೂಲಸೌಲಭ್ಯ ಒದಗಿಸಲು ಗ್ರಾಪಂ ಮುಂದಾಗಿದೆ.
ಆರಂಭದ ಸಂತೆಯಲ್ಲಿ ಬಟ್ಟೆ ವ್ಯಾಪಾರ ಸೇರಿದಂತೆ ತರಕಾರಿ ಮಾರಾಟಕ್ಕೆ ಹೊರಗಿನಿಂದ 15ಕ್ಕೂ ಹೆಚ್ಚು ವ್ಯಾಪಾರಿಗಳು ಭಾಗವಹಿಸಿದ್ದರು. ಇದಕ್ಕೂ ಮುನ್ನ ಗ್ರಾಪಂನಲ್ಲಿ ಆಯೋಜಿಸಿದ್ದ ಸಂತೆ ಆರಂಭದ ಸಮಾರಂಭವನ್ನು ತಾಪಂ ಇಒ ಡಾ| ಸಂಜಯ ರೆಡ್ಡಿ ಉದ್ಘಾಟಿಸಿ, ಮಾತನಾಡಿದರು.
ಮುಖಂಡ ಕಮಲೇಶ ಅವುಟೆ ಉದ್ಯೋಗ ಖಾತ್ರಿ ಅಡಿಯಲ್ಲಿ ನಮ್ಮ ಹೊಲ ನಮ್ಮ ರಸ್ತೆ ಕಾಮಗಾರಿ, ದನದ ಕೊಟ್ಟಿಗೆ, ರಾಶಿ ಕಟ್ಟೆ, ಕುರಿದೊಡ್ಡಿ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಶೀಘ್ರವೇ ಪ್ರಾರಂಭಿಸಬೇಕು ಎಂದು ತಾಪಂ ಇಒಗೆ ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷ ಮೈಲಾರಿ ಜೋಗೆ, ಉಪಾಧ್ಯಕ್ಷೆ ಪೂಜಾ ಪ್ರವೀಣ ಕಾಂಬಳೆ, ಸದಸ್ಯ ಬಾಬುರಾವ್ ಮೂಲಗೆ, ರಾಮ ಜಮಾದಾರ, ಮಾವೀರ ಕಾಂಬಳೆ, ಸಿದ್ಧಪ್ಪ ಬೆಲ್ಲೆ, ಆನಂದರಾವ್ ಪಾಟೀಲ, ಕೆತಕಿ ಕಮಲೇಶ ಅವುಟೆ, ಮಹಾದೇವ ಸಿಂಧೆ, ಕಾಂತಪ್ಪ ರಾಠೊಡ ಮುಖಂಡ ರಂಜೀತ ಕಾಂಬಳೆ, ರಮೇಶ ಪೂಜಾರಿ, ತುಕಾರಾಮ ನಕಾತೆ, ಆಶಾ ಕ್ ಮುಲ್ಲಾ, ಗಜಾನಂದ ಅವುಟೆ ಹಾಗೂ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ, ಗ್ರಾಮಸ್ಥರು ಇದ್ದರು.