Advertisement

ಸೋಮಶೇಖರ ರೆಡ್ಡಿ ಹೇಳಿಕೆ ಹಿಂದೆ ಪ್ರಚೋದನೆಯಿದೆ: ಜನಾರ್ದನ ರೆಡ್ಡಿ

09:58 PM Oct 30, 2022 | Team Udayavani |

ಬಳ್ಳಾರಿ: ನನ್ನ ಸಹೋದರ ಶಾಸಕ ಜಿ.ಸೋಮಶೇಖರ ರೆಡ್ಡಿ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಯಲ್ಲಿ ಕೆಲವರ ಪ್ರಚೋದನೆಯಿದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳುವ ಮೂಲಕ ಚುನಾವಣೆಗೂ ಮುನ್ನ ಸಹೋದರನ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.

Advertisement

ನಗರದ ಈದ್ಗಾ ಮೈದಾನದಲ್ಲಿ ಆಪ್ತ ಅಲಿಖಾನ್ ನೇತೃತ್ವದಲ್ಲಿ ಮ್ಯಾಕ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಮುಸ್ಲಿಂ ಯುವಕರಿಗಾಗಿ ಆಯೋಜಿಸಲಾಗಿದ್ದ ‘ಮಿಲಾದ್’ ಸೀಮಿತ ಓವರ್ ಗಳ ಕ್ರಿಕೇಟ್ ಪಂದ್ಯಾವಳಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಬಳ್ಳಾರಿಯಲ್ಲಿ ಹಿಂದು-ಮುಸ್ಲಲ್ಮಾನರು ಅಣ್ಣ ತಮ್ಮಂದಿರಿದ್ದಂತೆ. ಅವರು ಯಾವಾಗಲೂ ನಮ್ಮ ಜೊತೆ ಇರಬೇಕು ಎಂದ ಜನಾರ್ದನ ರೆಡ್ಡಿ, ನನ್ನ ಸಹೋದರ ಶಾಸಕ ಜಿ.ಸೋಮಶೇಖರ ರೆಡ್ಡಿ, ಹಿಂದೆ ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿದ್ದಾರೆ. ಆದರೆ, ಯಾರೋ ಪ್ರಚೋದನೆ ನೀಡಿ ಅವರಿಂದ ಆ ಹೇಳಿಕೆ ನೋಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಅದು ಯಾರೆಂಬುದು ಗೊತ್ತಾಗಲಿದೆ. ಈಗಾಗಲೇ ಸೋಮಶೇಖರ ರೆಡ್ಡಿ ಹೇಳಿಕೆ ಕುರಿತು ಕ್ಷಮೆ ಕೇಳಿದ್ದಾರೆ. ಮುಸಲ್ಮಾನರೆಲ್ಲರೂ ಯಾವಾಗಲೂ ನಮ್ಮ ಜತೆ ಇರಬೇಕು ಎಂದು ಮುಸಲ್ಮಾನರ ಮನವೊಲಿಕೆಗೆ ಮುಂದಾದರು.

ರಾಜ್ಯ ಸೇರಿ ದೇಶದ ಹಲವೆಡೆ ಪಿಎಫ್ ಐ, ಎಸ್ ಡಿಪಿಐ ಪದಾಧಿಕಾರಿಗಳ ಮೇಲೆ ದಾಳಿ ಮಾಡಿ ಅನೇಕರನ್ನು ಬಂಧಿಸಲಾಗಿದೆ. ಆದರೆ, ಬಳ್ಳಾರಿಯಲ್ಲಿ ಮಾತ್ರ ಅಂಥ ಘಟನೆಗಳು ನಡೆದಿಲ್ಲ. ಇಲ್ಲಿನ‌ ಮುಸ್ಲಿಂಮರು ಪ್ರೀತಿ ಹಾಗೂ ಪ್ರಾಮಾಣಿಕತೆಯಿಂದ ಇದ್ದಾರೆ. ಮುಂದಿನ ದಿನಗಳಲ್ಲಿ ನೀವೆಲ್ಲರೂ ನಮ್ಮ ಜೊತೆಗಿರಬೇಕು ಎಂದು ಮತ್ತೊಮ್ಮೆ ಮನವಿ ಮಾಡಿದರು.

ಅಸಮಾಧಾನ
ಬಹಿರಂಗ ಅಸಮಾಧಾನ ಹೊರಹಾಕಿದ ಮಾಜಿ ಸಚಿವ ಜನಾರ್ದನ ರೆಡ್ಡಿ, ನನಗೆ ನಮ್ಮವರೇ ತೊಂದರೆ ಕೊಡುವ ಪರಿಸ್ಥಿತಿಯಲ್ಲಿದ್ದಾರೆ. ರಾಜ್ಯದಲ್ಲಿ ಯಾವ ಪಕ್ಷವನ್ನು ನಾನು ಬೆಳೆಸಿದ್ದೇನೋ ಅದೇ ಪಕ್ಷದವರು ನನಗೆ ತೊಂದರೆ ನೀಡುತ್ತಿದ್ದಾರೆ.

Advertisement

ನನಗೆ ಕಾಂಗ್ರೆಸ್ ಶತ್ರುವಾಗಿರಬಹುದು, ಅವರ ರಾಜಕೀಯ ಧರ್ಮ ನನಗೆ ತೊಂದರೆ ಕೊಟ್ಟಿರಬಹುದು. ಈಗ ನಮ್ಮವರೇ ನನಗೆ ತೊಂದರೆ ಕೊಡುವ ಸ್ಥಿತಿಯಲ್ಲಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ರಾಜಕೀಯ ತೀರ್ಮಾನಕ್ಕೆ ಕೆಲ ದಿನಗಳು ಬಾಕಿಯಿವೆ. ನಾನು ಸಾರ್ವಜನಿಕ ಜೀವನದಲ್ಲಿರುತ್ತೇನೆ.ಮುಂದಿನ ದಿನಗಳಲ್ಲಿ ಬಳ್ಳಾರಿಯ ಮುಸ್ಲಿಂಮರು ನನ್ನ ಜೊತೆಗಿರಬೇಕು ಎಂದು ಕೋರಿದರು.

ಇದೇ ವೇಳೆ ಆಪ್ತ ಮೆಹಫೂಜ್ ಅಲಿಖಾನ್ ರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಜಿ.ಸೋಮಶೇಖ ರೆಡ್ಡಿ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಗುಜರಿ ಅಜೀಜ್, ಪಾಲಿಕೆ ಸದಸ್ಯ ಇಬ್ರಾಹಿಂ ಬಾಬು, ಮುಖಂಡ ಅಯಾಜ್ ಅಹ್ಮದ್ ಸೇರಿದಂತೆ ಹಲವಾರು ಮುಸ್ಲಿಂ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next