ಬೆಂಗಳೂರು: ಅನಾರೋಗ್ಯದ ಕಾರಣ ನೀಡಿ ಚಾಮರಾಜನಗರದಲ್ಲಿ ಭಾನುವಾರ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಅವರು ಗೈರು ಹಾಜರಾಗಿರುವುದು ನಾನಾ ಉಹಾಪೋಹಕ್ಕೆ ಕಾರಣವಾಗಿದೆ. ಹನೂರು ಬಿಟ್ಟು ಮತ್ತೆ ತಮ್ಮ ಹಳೆಯ ಕ್ಷೇತ್ರ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದತ್ತ ವಾಪಸ್ಸಾಗಲು ಅವರು ನಿರ್ಧರಿಸಿದ್ದಾರೆಯೇ ಎಂಬ ಮಾತು ಕೇಳಿ ಬಂದಿದೆ.
ಚಾಮರಾಜನಗರ, ಅದರಲ್ಲೂ ವಿಶೇಷವಾಗಿ ಹನೂರು ಕ್ಷೇತ್ರದಲ್ಲಿ ಸೋಮಣ್ಣ ಸ್ವಲ್ಪ ಪ್ರಭಾವಿ ನಾಯಕ. ಹೀಗಾಗಿ, ಅವರು ಹನೂರು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಲು ನಿರ್ಧರಿಸಿದ್ದರು.ಇದಕ್ಕೆ ಅನುಕೂಲವಾಗುವಂತೆ ಸೋಮಣ್ಣ ಅವರನ್ನು ಚಾಮರಾಜನಗರ ಜಿಲ್ಲಾ ಬಿಜೆಪಿ ಉಸ್ತುವಾರಿಯಾಗಿ ಯಡಿಯೂರಪ್ಪ ನೇಮಕ ಮಾಡಿದ್ದರು. ಇದರಿಂದಾಗಿ ಅವರು ಹನೂರು ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು.
ಹನೂರು ಕ್ಷೇತ್ರದಿಂದ ಮಾಜಿ ಸಚಿವ ನಾಗಪ್ಪ ಅವರ ಪತ್ನಿ ಪರಿಮಳಾ ನಾಗಪ್ಪ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಸೋಮಣ್ಣ ಸಹಕಾರವಿದ್ದರೆ ಗೆಲ್ಲುವ ಸಾಧ್ಯತೆಯೂ ಇದೆ. ಹೀಗಾಗಿ ಸೋಮಣ್ಣ ಅವರನ್ನು ಬೇರೆ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಯಡಿಯೂರಪ್ಪ ಯೋಚಿಸಿದ್ದರು. ಕಣ್ಣು ನೋವು ಇದ್ದುದರಿಂದ ಅವರು, ಚಾಮರಾಜನಗರ ಜಿಲ್ಲೆಯ ಪರಿವರ್ತನಾ ರ್ಯಾಲಿಯಲ್ಲಿ ಪಾಲ್ಗೊಂಡಿರಲಿಲ್ಲ.
ಈ ಮಧ್ಯೆ, ಭಾನುವಾರ ಕೇಂದ್ರ ಸಚಿವ ಅನಂತ್‌ಕುಮಾರ್ ಅವರನ್ನು ಭೇಟಿ ಮಾಡಿದ್ದ ಸೋಮಣ್ಣ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಗೋವಿಂದರಾಜನಗರ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವಂತೆ ಅನಂತ್‌ಕುಮಾರ್ ಸಲಹೆ ನೀಡಿದ್ದಾರೆ. ಇದರಿಂದ ನಗರದಲ್ಲಿ ಪಕ್ಷ ಬೆಳೆಸಲು ಮತ್ತು ಮುಂದಿನ ಲೋಕಸಭೆ ಚುನಾವಣೆ ವೇಳೆ ಅನುಕೂಲವಾಗುತ್ತದೆ ಎಂದು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಫೆ. 4ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪರಿವರ್ತನಾ ರ್ಯಾಲಿ ಸಮಾರೋಪ ಸಮಾರಂಭದ ಬಗ್ಗೆ ಚರ್ಚಿಸುವ ನೆಪದಲ್ಲಿ ಗೋವಿಂದರಾಜನಗರ ಕ್ಷೇತ್ರದ ಬಿಜೆಪಿ ಮುಖಂಡರು ಸೇರಿದಂತೆ ತಮ್ಮ ಬೆಂಬಲಿಗರನ್ನು ಆಹ್ವಾನಿಸಿದ್ದ ಸೋಮಣ್ಣ ಅವರೊಂದಿಗೆ ಮತ್ತೆ ಗೋವಿಂದರಾಜನಗರ ಕ್ಷೇತ್ರಕ್ಕೆ ಬರುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಆ ಮೂಲಕ ಮತ್ತೆ ತಮ್ಮ ಹಳೆಯ ಕ್ಷೇತ್ರದಲ್ಲಿ ಸಕ್ರಿಯರಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.