ಮುಂಡರಗಿ: ಜನರ ಸಮಸ್ಯೆಗಳನ್ನು ಪ್ರಾಮಾಣಿಕತೆಯಿಂದ ಬಗೆಹರಿಸಲಾಗುವುದು. ಈ ಬಗ್ಗೆ ಯಾವುದೇ ಸಂದೇಹ ಬೇಡ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು. ತಾಲೂಕಿನ ಡಂಬಳ ಗ್ರಾಮದಲ್ಲಿ ಬುಧವಾರ ಹೋಬಳಿ ಮಟ್ಟದ ಅಹವಾಲು ಸ್ವೀಕಾರ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಂದಿರುವ ಅಹವಾಲುಗಳಿಗೆ ಪರಿಹಾರ ಸೂಚಿಸಿ ಬಗೆಹರಿಸಲಾಗುವುದು. ಅಲ್ಲದೇ ಉಳಿದ ಅಹವಾಲು ವಿಂಗಡಿಸಿ ಕಂಪ್ಯೂಟರ್ ನಲ್ಲಿ ದಾಖಲೀಕರಣಗೊಳಿಸಲಾಗುತ್ತದೆ. ಪ್ರತಿ ತಿಂಗಳು ಹೋಬಳಿ ಮಟ್ಟದಲ್ಲಿ ಅಹವಾಲು ಸ್ವೀಕಾರ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು. ಜಿಪಂ ಸಿಎಸ್ ಮಂಜುನಾಥ ಚವ್ಹಾಣ ಮಾತನಾಡಿ, ಪ್ರತಿ ತಿಂಗಳು ಗ್ರಾಮ ವಾಸ್ತವ್ಯದಲ್ಲಿ ಬರುವ ಅರ್ಜಿಗಳನ್ನು ಸ್ಥಳೀಯ, ತಾಲೂಕು ಮತ್ತು ಜಿಲ್ಲಾ ಮಟ್ಟದ ಹಂತದಲ್ಲಿ ಪರಿಹರಿಸಲಾಗುತ್ತದೆ. ರಾಜ್ಯದ ಮಟ್ಟದ ಸಮಸ್ಯೆಗಳಿದ್ದರೆ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು ಎಂದರು.
ಸಭೆಯಲ್ಲಿ ಫಸಲ್ ಬೀಮಾ ಯೋಜನೆ ಸರಿಯಾಗಿ ಅನುಷ್ಠಾನಗೊಳಿಸಿ ಬೆಳೆಯನ್ನು ಜಿಪಿಎಸ್ ಮೂಲಕ ಕಟಾವು ಮಾಡಬೇಕು. ಅಲ್ಲದೇ ಮಳೆ ಕೊರತೆಯಿಂದ ಬಿತ್ತನೆಯಾದ ಬೆಳೆಗಳು ಒಣಗುತ್ತಿವೆ ಇದರಿಂದ ತಾಲೂಕನ್ನು ಬರಗಾಲ ಘೋಷಿತ ತಾಲೂಕು ಮಾಡಬೇಕೆಂದು ಹಳ್ಳಿಗುಡಿ ರೈತ ಹನುಮಂತಪ್ಪ ಗಡ್ಡದ, ವೈ.ಎನ್. ಗೌಡರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಬೆಳೆಯ ಬಗ್ಗೆ ಕಂದಾಯ, ಕೃಷಿ ಇಲಾಖೆಯ ಜಂಟಿ ಸಮೀಕ್ಷೆ ನಡೆಸಿ ಸರಕಾರಕ್ಕೆ ಬರಗಾಲದ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು. ತಾಪಂ ಅಧ್ಯಕ್ಷೆ ರೇಣುಕಾ ಕೋರ್ಲಹಳ್ಳಿ ಡಂಬಳ ಗ್ರಾಮ ಪ್ರವಾಸಿ ಕೇಂದ್ರವಾಗಿದ್ದು ಕೆರೆ ಸುತ್ತಲೂ ಸಸಿ ನೆಟ್ಟು ಬೃಂದಾವನ ನಿರ್ಮಿಸಬೇಕು. ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವಸತಿ ನಿಲಯದ ಕಟ್ಟಡ ನಿರ್ಮಿಸಬೇಕೆಂಬ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ನಾರಾಯಣಪುರ ಗ್ರಾಮವನ್ನು ಕಂದಾಯ ಗ್ರಾಮವಾಗಿ ಮಾಡುವಂತೆ ಎಂ.ಕೆ. ಗುಂಡಿಕೇರಿ ಒತ್ತಾಯಿಸಿದಾಗ ಜಿಲ್ಲಾಧಿಕಾರಿಗಳು ಒಂದು ತಿಂಗಳೊಳಗೆ ಕಂದಾಯ ಗ್ರಾಮವಾಗಿ ಘೋಷಿಸಲಾಗುವುದು ಎಂದು ಭರವಸೆ ನೀಡಿದರು. ತಾಮ್ರಗುಂಡಿ ರೈತ ಯಲ್ಲಪ್ಪ ಹೂಲಗೇರಿ ಜಮೀನು ಸ್ವಾಧೀನಗೊಂಡಿದ್ದು ಉಳಿಸಿಕೊಡಬೇಕು. ಜಂತ್ಲಿ-ಶಿರೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಪಡಿಸಬೇಕು. ಕೆರೆಯಿಂದ ಪೈಪ್‌ಲೈನ್ ಮಾಡಿ ಗ್ರಾಮಕ್ಕೆ ನೀರು ಪೂರೈಸಬೇಕೆಂದು ಗಣೇಶ ಜಕ್ಕಲಿ ಮನವಿ ಮಾಡಿದಾಗ ಹದಿನೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಗ್ರಾಮೀಣ ನೀರು ಸರಬರಾಜು ಇಲಾಖೆಯ ಆಕಾಶ ವಂದೇ ನೀಡಿದರು. ಹೆಸ್ಕಾಂ ವಿದ್ಯುತ್ ತಂತಿಯಿಂದ ಎಮ್ಮೆ ಸಾವನ್ನಪ್ಪಿದ್ದು, ಅದಕ್ಕೆ ಸೂಕ್ತ ಪರಿಹಾರ ನೀಡುವಂತೆ ತಿಪ್ಪಣ್ಣ ಮೇಗೂರು ಆಗ್ರಹಿಸಿದರು.
ಶಿಂಗಟಾಲೂರು ಏತ ನೀರಾವರಿ ಕಾಲುವೆಗೆ ಸ್ವಾಧೀನದ ಭೂಮಿಗೆ ಪರಿಹಾರ, ಜಮೀನಿಗೆ ಹೋಗಲು ರಸ್ತೆ ಸೇರಿದಂತೆ 42 ಅರ್ಜಿಗಳು ಸಲ್ಲಿಕೆಯಾದವು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ತಾಪಂ ಅಧ್ಯಕ್ಷೆ ರೇಣುಕಾ ಕೋರ್ಲಹಳ್ಳಿ, ಗ್ರಾಪಂ ಅಧ್ಯಕ್ಷ ಬಸವರಾಜ ಗಂಗಾವತಿ, ಸಿ.ಬಿ.ಬಾಲರೆಡ್ಡಿ, ಎಸ್.ಸಿ. ಮಹೇಶ, ಸಿ.ಆರ್. ಮುಂಡರಗಿ, ಎಸ್. ಎಸ್. ಕಲ್ಮನಿ ಇದ್ದರು. ತಹಶೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿ ಸ್ವಾಗತಿಸಿದರು.