Advertisement
ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಬುಧವಾರ ನಡೆದ ದೂರು ಸ್ವೀಕಾರ ಮತ್ತು ವಿಚಾರಣೆ ವೇಳೆ ಸಾರ್ವಜನಿಕರು ಇಲ್ಲಿನ ನಗರಸಭೆ ವಿರುದ್ಧ ದೂರುಗಳ ಸುರಿಮಳೆಗೈದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಮಾದಯ್ಯ, ಆಯಾ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಮಾಹಿತಿ ಪಡೆದು ಕಾಲಮಿತಿಯೊಳಗೆ ಸಮಸ್ಯೆ ಬಗೆಹರಿಸುವಂತೆ ನಗರಸಭೆ ಆಯುಕ್ತರಿಗೆ ತಾಕೀತು ಮಾಡಿದರು.
Related Articles
Advertisement
ಉದಯ ನಗರದ ವೆರೋನಿಕಾ ನಿರ್ಮಲಾ, ನಿವೇಶನಕ್ಕಾಗಿ ನಗರಸಭೆಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರೂ ಈವರೆವಿಗೂ ಮಂಜೂರಾಗಿಲ್ಲ ಎಂದು ಅಳಲು ತೋಡಿಕೊಂಡರು. ನಗರದ ರಾಜಲಕ್ಷ್ಮೀ ವುಡ್ ಇಂಡಸ್ಟ್ರೀಸ್ ಸ್ಥಳಾಂತರಕ್ಕೆ ಅರಣ್ಯಇಲಾಖೆ ಅನುಮತಿ ನೀಡದೆ ಸತಾಯಿಸುತ್ತಿದೆ ಎಂದು ಧನರಾಜ್ ದೂರಿದರೆ, ಹೈರಿಗೆಯ ಮಹೇಶ್, ಮೀನುಗಾರಿಕೆ ಸಹಕಾರ ಸಂಘದಲ್ಲಿ ಸದಸ್ಯತ್ವ ನೀಡುತ್ತಿಲ್ಲ ಎಂದರು.
ತಾಲೂಕು ಬಿಜೆಪಿ ಎಸ್‌ಸಿ ಘಟಕದ ಅಧ್ಯಕ್ಷ ಅಪ್ಪಣ್ಣ ಮಾತನಾಡಿ, ರಜಾ ದಿನಗಳಲ್ಲಿ ಗ್ರಾಮಾಂತರ ಪ್ರದೇಶದ ಬಸ್ ಮಾರ್ಗಗಳನ್ನು ದಿಢೀರ್ ರದ್ದುಗೊಳಿಸುತ್ತಾರೆ. ಮುಂಜಾನೆ ಮತ್ತು ಸಂಜೆ ಮೈಸೂರಿಗೆ ಬಸ್‌ಇಲ್ಲದೇ ಪರದಾಡುತ್ತಿದ್ದರೂ ಡಿಪೋ ಮ್ಯಾನೇಜರ್ ಕ್ರಮವಹಿಸುತ್ತಿಲ್ಲ ಎಂದು ದೂರು ನೀಡಿದರು.
ತಡೆಗೋಡೆ ನಿರ್ಮಿಸಿ: ಸತ್ಯ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ದೊಂಬರ ಕಾಲೋನಿಯ ಬಡ ಕುಟುಂಬಗಳಿಗೆ ಮನೆ ವಿತರಿಸುತ್ತಿಲ್ಲ. ಮೋದೂರು ಕೆರೆ ಏರಿಯ ಎರಡು ಬದಿತಡೆಗೋಡೆ ನಿರ್ಮಿಸುತ್ತಿಲ್ಲ. ಚಿಲ್ಕುಂದ ಏತ ನೀರಾವರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ. ರಾಚಯ್ಯ ತಮ್ಮ ಜಮೀನಿನ ದುರಸ್ತು ಕಾರ್ಯ 2016ರಿಂದಲೂ ಆಗಿಲ್ಲ ಎಂದು ದೂರು ಸಲ್ಲಿಸಿದರು.
ಪೊಲೀಸರೇ ಬೈಕ್ ದಾಖಲೆ ನೀಡುತ್ತಿಲ್ಲ: ಐದು ವರ್ಷಗಳ ಹಿಂದೆ ಪೊಲೀಸರು ನಡೆಸಿದ ಹರಾಜಿನಲ್ಲಿ ಬೈಕ್ ಖರೀದಿಸಿದ್ದೆ. ಆದರೆ ರಿ.ನಂ. ಅವಾಂತರದಿಂದ ತಮ್ಮ ಹೆಸರಿಗಿನ್ನು ವರ್ಗಾಯಿಸಿಕೊಳ್ಳಲು ಸತಾಯಿಸುತ್ತಿದ್ದಾರೆಂದು ನಗರದ ಸ್ಟುಡಿಯೋ ಮಾಲೀಕ ರಾಮಸ್ವಾಮಿ ದೂರಿದರು. ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಎಆರ್‌ಟಿಒ ಅನ್ನದಾನಯ್ಯರಿಗೆ ಎಸ್‌ಪಿ. ಆದೇಶಿಸಿದರು. ತಹಸೀಲ್ದಾರ್ ಬಸವರಾಜು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಪೌರಾಯುಕ್ತರಿಗೆ ಎಸ್ಪಿ ತರಾಟೆ: ನಗರಸಭೆ ವಿರುದ್ಧವೇ ಹೆಚ್ಚು ದೂರುಗಳು ಬಂದಿವೆ. ಹಲವಾರು ಬಾರಿ ಸೂಚನೆ ನೀಡಿದ್ದರೂ ಅಕ್ರಮವಾಗಿ ನಿರ್ಮಿಸಿರುವ ಮನೆ, ರಸ್ತೆ ಒತ್ತುವರಿ ತೆರವುಗೊಳಿಸಿಲ್ಲ. ಅಕ್ರಮ ಖಾತೆಗಳನ್ನು ಏಕೆ ರದ್ದುಗೊಳಿಸಿಲ್ಲಂ?, ಯಾವ ಕಾರಣಕ್ಕಾಗಿ ಕ್ರಮವಹಿಸುತ್ತಿಲ್ಲ?, ನಿಮ್ಮನ್ನು ಲೋಕಾಯುಕ್ತ ನ್ಯಾಯಾಲಯಕ್ಕೆ ಕಳುಹಿಸುವುದೇ ಸರಿಯಾದ ಕ್ರಮವೆಂದು ನಗರಸಭೆ ಆಯುಕ್ತ ಶಿವಪ್ಪನಾಯ್ಕ ಅವರನ್ನು ಎಸ್ಪಿ ಮಾದಯ್ಯ ಹಾಗೂ ವೃತ್ತ ನಿರೀಕ್ಷಕಿ ರೂಪಶ್ರೀ ತರಾಟೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಇನ್ನು ಮೂರು ದಿನದೊಳಗೆ ಅನಧಿಕೃತ ಮೊಬೈಲ್ ಟವರ್ ತೆರವುಗೊಳಿಸುವುದಾಗಿ ತಿಳಿಸಿದರು.