ಕಡಬ: ತಾಲೂಕು ಕೇಂದ್ರ ವಾಗಿರುವ ಕಡಬ ಪೇಟೆಯ ಸಾರ್ವಜನಿಕ ರುದ್ರಭೂಮಿಯನ್ನು ಮೂಲ ಸೌಕರ್ಯ ಒದಗಿಸಿ ಅಭಿವೃದ್ಧಿಗೊಳಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.
ರುದ್ರಭೂಮಿಗೆ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕದಲ್ಲಿ ಕಡಬ-ಪಂಜ ರಸ್ತೆಯ ಪಕ್ಕದಲ್ಲಿ ಸ.ನಂ. 306/1ಎ1 ಯಲ್ಲಿ 1.03 ಎಕರೆ ಭೂಮಿ ಕಾದಿರಿಸಲಾಗಿದೆ. ಕಡಬ ಆಸುಪಾಸಿನ ಗ್ರಾಮಗಳಲ್ಲಿಯೂ ಸಾರ್ವಜನಿಕ ರುದ್ರಭೂಮಿಗಳು ಇಲ್ಲದೇ ಇರುವುದರಿಂದ ಜನರು ಅಂತ್ಯಸಂಸ್ಕಾರಕ್ಕಾಗಿ ಕಡಬದ ರುದ್ರಭೂಮಿಯನ್ನು ಅವಲಂಭಿ ಸಿದ್ದಾರೆ.
ರುದ್ರಭೂಮಿಯ ಸಮಗ್ರ ಅಭಿವೃದ್ಧಿಯ ಜತೆಗೆ ಮುಂದಿನ ದಿನಗಳಲ್ಲಿ ವಿದ್ಯುತ್ ಚಿತಾಗಾರವನ್ನು ಅಳವಡಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಅನುದಾನ ಬಿಡುಗಡೆ ಪ್ರಸ್ತುತ ಕಡಬ ಪಟ್ಟಣ ಪಂಚಾಯತ್‌ನ ಸುಪರ್ದಿಯಲ್ಲಿರುವ ಕಡಬ ಹಿಂದೂ ರುದ್ರಭೂಮಿಯ ಅಭಿವೃದ್ಧಿಗಾಗಿ ಒಟ್ಟು 22.40 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.
ಆ ಪೈಕಿ ಸುಮಾರು 10 ಲಕ್ಷ ರೂ. ಅನುದಾನ ಈ ಹಿಂದೆ ಗ್ರಾ.ಪಂ. ಆಡಳಿತದ ಅವಧಿಯಲ್ಲಿ ಬಳಕೆಯಾಗಿದ್ದು, ಚಿತಾಗಾರದ ಛಾವಣಿಗೆ ಲೋಹದ ಶೀಟ್ ಅಳವಡಿಕೆ (2 ಲಕ್ಷ ರೂ.), ಶವ ದಹನ ನಡೆಸುವ ಲೋಹದ ಕ್ರಿಮೆಟೋರಿಯಂ ಅಳವಡಿಕೆ, ಚಿತಾಗಾರದ ಸುತ್ತ ಲೋಹದ ತಡೆಬೇಲಿ ಹಾಗೂ ನೆಲಹಾಸು ಕಾಮಗಾರಿ (4 ಲಕ್ಷ ರೂ.), ಶ್ಮಶಾನವನ್ನು ಸಂಪರ್ಕಿಸುವ ರಸ್ತೆಯನ್ನು ಕಾಂಕ್ರೀಟ್ ಹಾಕಿ ಅಭಿವೃದ್ಧಿಪಡಿಸುವ ಕಾಮಗಾರಿ (4 ಲಕ್ಷ ರೂ.) ಈಗಾಗಲೇ ಪೂರ್ಣಗೊಂಡಿದೆ.
ಇನ್ನುಳಿದಂತೆ ಶ್ಮಶಾನಕ್ಕೆ ಹೈಮಾಸ್ಟ್ ದೀಪ ಅಳವಡಿಕೆ (1 ಲಕ್ಷ ರೂ.), ಉದ್ಯಾನವನ ನಿರ್ಮಾಣ (3.40 ಲಕ್ಷ ರೂ.), ಚಿತಾಗಾರ ಅಭಿವೃದ್ಧಿ (4 ಲಕ್ಷ ರೂ.) ಹಾಗೂ ಚಿತಾಗಾರಕ್ಕೆ ಇಂಟರ್‌ಲಾಕ್ ಅಳವಡಿಕೆ (4 ಲಕ್ಷ ರೂ.) ಕಾರ್ಯ ಶೀಘ್ರ ನಡೆಯಲಿದೆ ಎಂದು ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಕೀರ ಮೂಲ್ಯ ಅವರು ತಿಳಿಸಿದ್ದಾರೆ.
ಹೆಚ್ಚಿನ ಅನುದಾನ: ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಸುಸಜ್ಜಿತ ರುದ್ರಭೂಮಿ ರಚನೆ ಯಾಗಬೇಕೆಂಬ ಉದ್ದೇಶದಿಂದ ಅಗತ್ಯ ಅನುದಾನಗಳನ್ನು ನೀಡಲಾಗಿದೆ. ಈಗಾಗಲೇ ಕಡಬದಲ್ಲಿ ವಿವಿಧ ಇಲಾಖೆಗಳ ತಾಲೂಕುಮಟ್ಟದ ಕಚೇರಿಗಳು ಆರಂಭಗೊಂಡಿದೆ. ಕಡಬ ಗ್ರಾ.ಪಂ. ಪ್ರಸ್ತುತ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿರುವುದರಿಂದ ಮೂಲ ಸೌಕರ್ಯಗಳ ಅನುಷ್ಠಾನಕ್ಕಾಗಿ ಹೆಚ್ಚಿನ ಅನುದಾನಗಳು ಲಭ್ಯವಾಗಲಿದೆ. –
ಎಸ್.ಅಂಗಾರ, ಸಚಿವರು