Advertisement

Agricultural damage; ಇನ್ನೂ ತೆರೆಯದ ಪರಿಹಾರ ತಂತ್ರಾಂಶ ಪೋರ್ಟಲ್‌

11:22 PM Aug 07, 2024 | Team Udayavani |

ಕುಂದಾಪುರ: ರಾಜ್ಯಾದ್ಯಂತ ಒಂದು ತಿಂಗಳಿನಿಂದ ವ್ಯಾಪಕ ಮಳೆಯಾಗಿದ್ದರಿಂದ ಕರಾವಳಿ ಸಹಿತ ಹಲವು ಜಿಲ್ಲೆಗಳಲ್ಲಿ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ ರಾಜ್ಯ ಸರಕಾರವು ಈ ಆರ್ಥಿಕ ವರ್ಷದ ಪರಿಹಾರ ತಂತ್ರಾಂಶ ಪೋರ್ಟಲ್‌ ಅನ್ನು ಇನ್ನೂ ತೆರೆಯದ ಕಾರಣ ಹಾನಿಯಾದ ವರದಿಗಳನ್ನು ದಾಖಲು ಮಾಡಲು ಆಗುತ್ತಿಲ್ಲ. ಇದರಿಂದ ರೈತರಿಗೆ ಪರಿಹಾರ ಪಾವತಿ ಮತ್ತಷ್ಟು ವಿಳಂಬ ಆಗುವ ಸಾಧ್ಯತೆಗಳಿವೆ.

Advertisement

ಕೃಷಿ ಹಾನಿ ವಿವರ ಹಾಗೂ ಅದಕ್ಕೆ ಪರಿಹಾರ ಕೋರಿ ಅರ್ಜಿ ಸಲ್ಲಿಸಲು 2022ರಿಂದ ಆನ್‌ಲೈನ್‌ ಮೂಲಕವೇ ಅವಕಾಶ ಕಲ್ಪಿಸಲಾಗಿದೆ. ಕಳೆದ ಮಾರ್ಚ್‌ವರೆಗೆ ಈ ಪೋರ್ಟಲನ್ನು ತೆರೆಯಲಾಗಿತ್ತು. ಆ ಬಳಿಕ ಅದನ್ನು ಸ್ಥಗಿತಗೊಳಿಸಲಾಗಿದೆ.

ಯಾಕೆ ತಂತ್ರಾಂಶದಲ್ಲಿ ದಾಖಲು?
ಭತ್ತದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಹಾನಿಯಾದರೆ ಕಂದಾಯ ಹಾಗೂ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ವರದಿ ಕೊಡುತ್ತಾರೆ. ಆಯಾಯ ಗ್ರಾಮದ ವಿಎಗಳುಈ ಪರಿಹಾರ ತಂತ್ರಾಂಶ ಪೋರ್ಟಲ್‌ನಲ್ಲಿ ದಾಖಲಿಸಬೇಕು. ಬಳಿಕ ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗಳು ಅನುಮೋದಿಸಬೇಕು. ಹಿಂದೆ ಕೃಷಿ ನಷ್ಟ ಆದಾಗ ಪರಿಹಾರವನ್ನು ಚೆಕ್‌ ಮೂಲಕ ಕೊಡಲಾಗುತ್ತಿತ್ತು. ಆದರೆ ಈಗ ಡಿಬಿಟಿ (ಡೈರೆಕ್ಟ್ ಬೆನಿಫಿಟ್‌ ಟ್ರಾನ್ಸ್‌ಫರ್‌) ಮೂಲಕ ನೇರವಾಗಿ ರೈತರ ಖಾತೆಗೆ ಸಂದಾಯವಾಗುತ್ತದೆ. ಅದಕ್ಕಾಗಿಯೇ ಈ ಪರಿಹಾರ ಪೋರ್ಟಲ್‌ನಲ್ಲಿ ದಾಖಲಿಸುವುದು ಅಗತ್ಯ. ಎಷ್ಟು ಪರಿಹಾರ ಬಂದಿದೆ ಎಂಬುದನ್ನು ರೈತರು ಈ ಪೋರ್ಟಲ್‌ ಮೂಲಕ ತಮ್ಮ ಆಧಾರ್‌ ನಂಬರ್‌ ಸಹಾಯದಿಂದ ತಿಳಿದುಕೊಳ್ಳಬಹುದು.

ಎಷ್ಟು ಹಾನಿ?
ಉಡುಪಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಮೇ ತಿಂಗಳಲ್ಲಿ 28 ಹೆಕ್ಟೇರ್‌, ಜೂನ್‌ನಲ್ಲಿ 21 ಹೆಕ್ಟೇರ್‌, ಜುಲೈಯಲ್ಲಿ 49 ಹೆಕ್ಟೇರ್‌ ಸಹಿತ ಒಟ್ಟಾರೆ ಈವರೆಗೆ 324 ರೈತರ 99.88 ಹೆಕ್ಟೇರ್‌ ಅಡಿಕೆ ತೋಟಗಳಿಗೆ ಹಾಗೂ 140 ಹೆಕ್ಟೇರ್‌ ಭತ್ತದ ಕೃಷಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 57 ರೈತರ ಒಟ್ಟು 7.76 ಹೆಕ್ಟೇರ್‌ ಪ್ರದೇಶದ ಅಡಿಕೆ ತೋಟ, 6.52 ಹೆಕ್ಟೇರ್‌ ಪ್ರದೇಶದ ತೆಂಗಿನ ಮರಗಳಿಗೆ ಹಾನಿಯಾಗಿದೆ. ಈ ಬಾರಿಯ ಮಳೆಗೆ ಭತ್ತದ ಕೃಷಿಗೆ ಗರಿಷ್ಠ ಹಾನಿಯಾಗಿದ್ದು, ಬಹುತೇಕ ಕಡೆಗಳಲ್ಲಿ ಮರು ಬಿತ್ತನೆಗೆ ರೈತರು ಮುಂದಾಗಿದ್ದಾರೆ. ಅದರ ಸಮೀಕ್ಷೆ ನಡೆಯುತ್ತಿದ್ದು, ಇನ್ನೂ ಅಂತಿಮಗೊಂಡಿಲ್ಲ.

ತೆರವಿಗೆ ಕ್ರಮ
ಪರಿಹಾರ ತಂತ್ರಾಂಶ ಪೋರ್ಟಲ್‌ ತೆರವು ಮಾಡಿದ್ದು, ಈವರೆಗೆ 89 ತಾಲೂಕುಗಳ ಬೆಳೆ ಹಾನಿ ನಷ್ಟದ ದಾಖಲಾತಿಗಳನ್ನು ಮಾಡಲಾಗಿದೆ. ಇನ್ನೂ ಕೆಲವು ಜಿಲ್ಲೆಗಳ ಪೋರ್ಟಲ್‌ನಲ್ಲಿ ದಾಖಲು ಮಾಡಲು ಆಗದಿರುವ ಬಗ್ಗೆ ಈಗ ತಾನೇ ಗಮನಕ್ಕೆ ಬಂದಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
– ರಶ್ಮಿ ಮಹೇಶ್‌,
ಪ್ರಧಾನ ಕಾರ್ಯದರ್ಶಿ,
ಕಂದಾಯ ಇಲಾಖೆ ಬೆಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next