ಸೈದಾಪುರ: ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ ಜನರ ಹತ್ತು ಹಲವಾರು ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹಾರ ನೀಡಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ಹೇಳಿದರು. ನೀಲಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಪರಿಹಾರ ಮಾಡಲು ಅಧಿಕಾರಿಗಳ ತಂಡವೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ಅದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು. ನಂತರ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿ, 40 ಜನ ಅರ್ಹ ಫಲಾನುಭವಿಗಳಿಗೆ ಮಾಸಾಶನ ಮಂಜೂರಾತಿ ಪತ್ರಗಳನ್ನು ನೀಡಿದರು.
ಈ ವೇಳೆ ರೈತರು, ಗ್ರಾಮದ ಕೆರೆ ತುಂಬಿದರೆ ರೈತರು ಜಮೀನುಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಿ ಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿ ಕೆರೆಯ ಸ್ಥಳವನ್ನು ಪರಿಶೀಲಿಸಿ ಇದಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಗ್ರಾಮಸ್ಥರಿಂದ ಅರ್ಜಿ ಸಲ್ಲಿಕೆ: ಕಂದಾಯ ಇಲಾಖೆಗೆ-63, ಜಮೀನು ಸರ್ವೇ, ಟಿಪ್ಪಣಿ, ಪಹಣಿ ತಿದ್ದುಪಡಿಗೆ ಸಂಬಂಧಿಸಿದ 04, ರಸ್ತೆ, ಚರಂಡಿ, ಮನೆ ಮಂಜೂರಾತಿ ಮೂಲ ಸೌಲಭ್ಯಗಳಿಗಾಗಿ-12, ವಿದ್ಯುತ್ ಸಮಸ್ಯೆ-03 ಹಾಗೂ ಸಾರಿಗೆ ಶಿಕ್ಷಣ ಸೇರಿ ಒಟ್ಟು 124 ಅರ್ಜಿಗಳು ಬಂದಿದ್ದು, ಅರ್ಜಿಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಾರ್ವಜನಿಕ ಸ್ಮಶಾನ ಮಂಜೂರು: ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಸರ್ವೇ ನಂಬರ್ 164ರಲ್ಲಿ 1 ಎಕರೆ 25 ಗುಂಟೆ ಪ್ರದೇಶದ ಸ್ಮಶಾನದ ಅಭಿವೃದ್ಧಿಗಾಗಿ 5 ಲಕ್ಷ ರೂ. ಮಂಜೂರು ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಇದರ ಜೊತೆಗೆ ಪಕ್ಕದ ಗ್ರಾಮದ ಗೌಡಗೇರಾ ಮತ್ತು ಕೂಡೂರು ಜನರು ಸ್ಮಶಾನಕ್ಕೆ ಜಾಗ ಮಂಜೂರು ಮಾಡಲು ಅರ್ಜಿ ಸಲ್ಲಿಸಿದಾಗ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಸಹಾಯಕ ಆಯುಕ್ತರಿಗೆ ಮತ್ತು ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮಚಂದ್ರಗೊಳಾ, ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಕಿಲ್ಲನಕೇರಾ ಪಿಡಿಒ ರಾಜು ಮೇಟಿ, ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಅರುಣ್ ಕುಮಾರ್, ಸೈದಾಪುರ ಪೊಲೀಸ್ ಠಾಣೆ ಪಿಐ ವಿಜಯಕುಮಾರ, ಪಿಎಸ್‌ಐ ಭೀಮರಾಯ ಬಂಕ್ಲಿ ಇದ್ದರು.