ಸವಣೂರು: ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ನಾಡೋಳಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡ ಕಾಮಗಾರಿ ಪೂರ್ತಿಯಾಗಿದ್ದು, ಯಂತ್ರೋಪಕರಣ ಬಂದಿಲ್ಲ. ಹಾಗೂ ಸಂಗ್ರಹಿತವಾದ ತ್ಯಾಜ್ಯವನ್ನು ಘಟಕದ ಆವರಣದಲ್ಲೇ ರಾಶಿ ಹಾಕಲಾಗಿದೆ. ಈ ಘನತ್ಯಾಜ್ಯ ಘಟಕದ ಕಾಮಗಾರಿ ಆರಂಭವಾಗಿ ಮೂರು ವರ್ಷ ಸಂದರೂ ಈವರೆಗೆ ಕಾಮಗಾರಿ ಪೂರ್ಣವಾಗಿಲ್ಲ. 2015 ಮೇ ತಿಂಗಳಲ್ಲಿ ಇದರ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಸ್ವಚ್ಛ ಭಾರತ ಪರಿಕಲ್ಪನೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳು ಅತ್ಯವಶ್ಯಕ. ಆದರೆ ನಿಧಾನಗತಿಯ ಕಾಮಗಾರಿಯಿಂದಾಗಿ ಉತ್ತಮ ಉದ್ದೇಶದ ಯೋಜನೆಯೊಂದು ಕುಂಟುತ್ತಾ ಸಾಗುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಘಟಕ ನಿರ್ಮಾಣಕ್ಕೆ ಜಿ.ಪಂ.ನಿಂದ 13.7ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿತ್ತು. ಘಟಕದ ನಿರ್ಮಾಣ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಕೊನೆಗೂ ಕುಂಟುತ್ತಾ ತೆವಲುತ್ತಾ ಘಟಕದ ಕಟ್ಟಡ ಕಾಮಗಾರಿ ಬಹುತೇಕ ಆಗಿದೆ.
Advertisement
ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ 1 ಎಕ್ರೆ ನೀಡಲಾಗಿದೆ. ಜತೆಗೆ ಸವಣೂರು ಗ್ರಾ.ಪಂ.ನಿಂದ ಜಾಗ ಸಮತಟ್ಟುಗೊಳಿಸಲು 3 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿ ಕೆಲಸ ಪೂರ್ಣ ಗೊಳಿಸಲಾಗಿದೆ. ಗ್ರಾ.ಪಂ.ಗೆ ಜಿ.ಪಂ. ನಿಂದ ಕಸ ಸಾಗಾಟ ಮಾಡಲು ವಾಹನ ಖರೀದಿಗೆ 3.25ಲಕ್ಷ ರೂ. ಹಾಗೂ ಕಸವಿಲೇವಾರಿ ಯಂತ್ರ ಖರೀದಿಗೆ 1.75 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕಸ ಸಾಗಾಟದ ವಾಹನ ಖರೀದಿ ಮಾಡಲಾಗಿದೆ.
ಈಗಾಗಲೇ ಗ್ರಾ.ಪಂ. ನಿಂದ ಅಂಗಡಿಗಳಿಂದ ಕಸ ಸಂಗ್ರಹ ಮಾಡಲಾಗುತ್ತಿದೆ. ಹಾಗಾಗಿ ಘನತ್ಯಾಜ್ಯ ಘಟಕ ಕಾರ್ಯರಂಭ ಮಾಡದೇ ಏನು ಮಾಡುವಂತಿಲ್ಲ. ಆದರೆ ಘಟಕ ಪಕ್ಕದಲ್ಲಿ ದೊಡ್ಡ ಹೊಂಡವೊಂದನ್ನು ತೋಡಲಾಗಿದ್ದು, ಅದರಲ್ಲಿ ಸಂಗ್ರಹವಾದ ಕಸವನ್ನು ಪಕ್ಕದಲ್ಲೇ ರಾಶಿ ಹಾಕಾಲಾಗುತ್ತಿದೆ. ಇದರಿಂದ ಕೃತಕ ಸಮಸ್ಯೆ ತಲೆದೊರಿದೆ. ಘನತ್ಯಾಜ್ಯ ಘಟಕ ಕಾರ್ಯಾರಂಭದ ಬಳಿಕ ಒಣ ಕಸ, ಹಸಿ ಕಸವನ್ನು ಪ್ರತ್ಯೇಕಿಸಿ ವಿಲೇವಾರಿ ಮಾಡಲಾಗುತ್ತದೆ. ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಯೋಜನೆಯು ಗ್ರಾಮ ಪಂಚಾಯತ್‌ನ ಮಂದಿದ್ದು, ಇನ್ನೂ ಕಾರ್ಯಗತವಾಗಿಲ್ಲ. ಘಟಕದ ಸಮತಟ್ಟಾದ ಜಾಗದಲ್ಲಿ ನಿರಂತರ ಮಳೆಯಿಂದಾಗಿ ಮಣ್ಣು ಕೊಚ್ಚಿಹೋಗುತ್ತಿದ್ದು ತಡೆಗೋಡೆ ನಿರ್ಮಾಣವಾಗಬೇಕಿದೆ. ಘಟಕದ ಹೆಸರಿನಲ್ಲಿರುವ 1 ಎಕ್ರೆ ಜಾಗಕ್ಕೆ ಬೇಲಿ ನಿರ್ಮಾಣವಾದರೆ ಸುಭದ್ರ ಸ್ಥಿತಿಯಲ್ಲಿರಲಿದೆ. ಆವರಣ ಗೋಡೆ, ನೀರಿನ ಪೂರೈಕೆಗೆ ಬೋರ್‌ವೆಲ್, ವಿದ್ಯುತ್ ಪೂರೈಕೆ ಶೀಘ್ರದಲ್ಲಿ ಆಗಬೇಕಿದೆ.
ಇಚ್ಚಾಶಕ್ತಿಯ ಕೊರತೆ
ಘಟಕದ ಕಾಮಗಾರಿ ಪೂರ್ಣಗೊಂಡರು ಆಡಳಿತದ ಇಚ್ಚಾಶಕ್ತಿ ಕೊರತೆಯಿಂದ ಉತ್ತಮ ಯೋಜನೆಯೊಂದು ಹಳ್ಳ ಹಿಡಿದಂತಾಗಿದೆ. ಸ್ವತ್ಛ ಭಾರತಕ್ಕಾಗಿ ಪ್ರಧಾನಿಯವರೇ ಗಮನ ಹರಿಸುತ್ತಿರುವಾಗ ನಮ್ಮ ಆಡಳಿತ ವರ್ಗ ಕೂಡ ಈ ಘಟಕ ಕಾರ್ಯಾರಂಭ ನಿಟ್ಟಿನಲ್ಲಿ ಗಮನಹರಿಸಬೇಕಿದೆ.
– ದಯಾನಂದ ಮೆದು, ಗ್ರಾಮಸ್ಥರು
Related Articles
ಘಟಕದ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಈವರೆಗೂ ಗ್ರಾ.ಪಂ.ಗೆ ಹಸ್ತಾಂತರ ಮಾಡಿಲ್ಲ. ಹೀಗಾಗಿ ಗ್ರಾ.ಪಂ.ನಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಆಗುತ್ತಿಲ್ಲ. ಈ ಕುರಿತು ಸಂಬಂಧಪಟ್ಟವರ ಗಮನಕ್ಕೆ ತಂದು ಯೋಜನೆಯ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು. ಎಂದು ಇಂದಿರಾ ಬಿ.ಕೆ. ತಿಳಿಸಿದ್ದಾರೆ.
– ಇಂದಿರಾ ಬಿ.ಕೆ., ಸವಣೂರು ಗ್ರಾ.ಪಂ.ಅಧ್ಯಕ್ಷೆ
Advertisement