ಬೇಲೂರು: ತಾಲೂಕಿನ ಹಗರೆ ಗ್ರಾಮಸ್ಥರ ಬಹು ವರ್ಷದ ಬೇಡಿಕೆಯಾಗಿದ್ದ ಘನ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಪೂರ್ಣಗೊಂಡು ಸೇವೆಗೆ ಸಿದ್ಧವಾಗಿದ್ದು ಬಹು ದಿನಗಳಿಂದ ಕಾಡಿದ್ದ ಕಸದ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ.
ತಾಲೂಕಿನ ಮಾದೀಹಳ್ಳಿ ಹೋಬಳಿಯ ಹಗರೆ ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹೋಬಳಿ ಕೇಂದ್ರವಾಗಿದ್ದು ಸುತ್ತಮುತ್ತಲಿನ ಗ್ರಾಮಗಳಿಂದ ವ್ಯಾಪಾರ ವಹಿವಾಟಿಗೆ ಹೆಚ್ಚು ಜನ ಆಗಮಿಸುತ್ತಾರೆ. ಅಂಗಡಿ ಮುಂಗಟ್ಟು, ಸಸ್ಯಹಾರಿ ಮತ್ತು ಮಾಂಸಹಾರಿ ಹೋಟೆಲ್, ಕುರಿ, ಕೋಳಿ, ಹಂದಿ ಮಾಂಸದ ಅಂಗಡಿಗಳ ತ್ಯಾಜ್ಯ ವಸ್ತುಗಳು ವಿಲೇವಾರಿ ಮಾಡುವುದು ಗ್ರಾಪಂಗೆ ದೊಡ್ಡ ಸಮಸ್ಯೆಯಾಗಿತ್ತು. ಅಲ್ಲದೇ, ಮನೆಯಲ್ಲಿನ ಕಸವನ್ನು ಕೆಲವರು ತಿಪ್ಪೆಗುಂಡಿ, ಚರಂಡಿ, ಕೆರೆ ಕೋಡಿಗಳಿಗೆ ಹಾಕಿ ಕೈ ತೊಳೆದುಕೊಳ್ಳುತ್ತಿದ್ದರು. ಹೀಗಾಗಿ ಜನತೆಯನ್ನು ಬಹುದಿನಗಳಿಂದ ಕಾಡಿದ್ದ ಕಸದ ಸಮಸ್ಯೆಗೆ ಪರಿಹಾರ ದೊರಕುವ ನಿಟ್ಟಿನಲ್ಲಿ ಹಗರೆಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸಿದ್ಧಗೊಂಡಿದೆ ಗ್ರಾಪಂ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದೆ. ಗುಡ್ಡದಿಂದ ಹರಿದು ಬರುವ ನೀರನ್ನು ತಡೆಗಟ್ಟಿ ಹೊಂಡ ನಿರ್ಮಿಸಿ ನೀರನ್ನು ಸಂಗ್ರಹಿಸಿಕೊಳ್ಳಲಾಗುತ್ತಿದೆ ಎಂದು ಶಾಸಕ ಕೆ.ಎಸ್. ಲಿಂಗೇಶ್ ಮಾಹಿತಿ ನೀಡಿದ್ದಾರೆ.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನ ತ್ಯಾಜ್ಯ ಸಂಪನ್ಮೂಲ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಜನರಿಗೆ ಸ್ವಚ್ಛ ಸಂಕೀರ್ಣ ಘನತ್ಯಾಜ್ಯ ನಿರ್ವಹಣೆ ಘಟಕಗಳನ್ನು ನಿರ್ಮಿಸಿದರೆ, ತಿಪ್ಪೆಗುಂಡಿ ನಿರ್ವಹಣೆ, ಹಸಿ ಮತ್ತು ಒಣ ಕಸ ಬೇರ್ಪಡಿಸುವುದು ಮತ್ತು ಗೊಬ್ಬರವಾಗಿ ಮಾರ್ಪಡಿಸಿ ಉಪಯೋಗಿಸುವ ಮಾಹಿತಿ ನೀಡುವುದರ ಜತೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದರು. ಸ್ವತ್ಛ ಸಂಕೀರ್ಣದಡಿ ಘನ ತ್ಯಾಜ್ಯ ವಿಲೇವಾರಿ ಘಟಕ ಸಿದ್ಧಗೊಂಡಿದ್ದು ಗ್ರಾಮಸ್ಥರ ಬಹುದಿನದ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ ಎಂದು ಪಿಡಿಒ ಅಶ್ವತ್ಥಕುಮಾರ್ ಮಾಹಿತಿ ನೀಡಿದ್ದಾರೆ.
10 ಲಕ್ಷರೂ.ವೆಚ್ಚ : ಹಗರೆ ಗ್ರಾಪಂ ವ್ಯಾಪ್ತಿಯ ಹೊಲಬಗೆರೆ ಗ್ರಾಮದ ಸರ್ವೆ ನಂ.2ರ ಎರಡು ಎಕರೆ ಪ್ರದೇಶದಲ್ಲಿ ಘನ ತ್ಯಾಜ್ಯ ವಿಲೇ ವಾರಿ ಘಟಕವನ್ನು ಸುಮಾರು 10 ಲಕ್ಷ ರೂ.ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ. ಸ್ವತ್ಛ ಭಾರತ್ ಮಿಷನ್ ಯೋಜನೆಯಡಿ ಘಟಕ ನಿರ್ಮಾಣವಾಗಿದ್ದು ಗ್ರಾಪಂ ಹಣದಲ್ಲೇ ಒಂದು ಮಿನಿ ವಾಹನ ಖರೀದಿಸಿ ಕಾರ್ಯಾರಂಭ ಮಾಡಲಾಗುತ್ತಿದೆ. ಅಲ್ಲದೇ, ಪ್ರತಿ ಹೋಬಳಿ ಕೇಂದ್ರದಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು.
ನಾಲ್ಕು ಭಾಗಗಳಾಗಿ ವಿಂಗಡಣೆ : ಕಸ ಸಂಗ್ರಹ, ಸಾಗಣೆ, ಸಂಸ್ಕರಣೆ, ಮರುಬಳಕೆ ಅಥವಾ ವಿಲೇವಾರಿ ಹಾಗೂ ತ್ಯಾಜ್ಯಗಳ ನಿರ್ವಹಣೆ ಒಟ್ಟುಗೂಡಿಸಿ ಘನ ತ್ಯಾಜ್ಯ ನಿರ್ವಹಣೆ ಘಟಕ ಮಾಡಲಾಗಿದ್ದು ಕಸವನ್ನೇ ಉತ್ಪನ್ನವನ್ನಾಗಿ ಮಾಡುವುದರಿಂದ ಇದು ಸಂಪನ್ಮೂಲ ಘಟಕವೂ ಆಗಿದೆ. ಘಟಕ ಕಟ್ಟಡದ ಒಳಗೆ 4 ವಿಭಾಗಗಳಾಗಿ ವಿಂಗಡಿಸಲಾಗಿದ್ದು ಅಲ್ಲಿ ಹಸಿ ಕಸ ಬಿಟ್ಟು ಪ್ಲಾಸ್ಟಿಕ್, ಫೈಬರ್, ಕಾಗದ ಸೇರಿದಂತೆ ಉಳಿದ 24 ವಿಧದ ಕಸ ಬೇರ್ಪಡಿಸಿ ತುಂಬಿಸಲಾಗುತ್ತದೆ. ನಂತರ ಆ ಕಸವನ್ನು ಸಂಸ್ಕರಿಸಿ ತ್ಯಾಜ್ಯ ವಸ್ತುಗಳ ಪ್ರಮಾಣವನ್ನು ಅತ್ಯಂತ ಕಡಿಮೆ ಮಟ್ಟಕ್ಕೆ ತರಲಾಗುತ್ತದೆ. ಉಳಿದ ಹಸಿ ತ್ಯಾಜ್ಯವನ್ನು ಘಟಕದ ಹಿಂದೆ ಇಂಗು ಗುಂಡಿಯಲ್ಲಿ ಸಂಗ್ರಹಿಸಿ ಸಂಸ್ಕರಿಸಿ ಗೊಬ್ಬರವನ್ನಾಗಿ ಮಾರ್ಪಡಿಸುವ ಯೋಜನೆಯನ್ನೂ ರೂಪಿಸಲಾಗಿದೆ.
ಸ್ವಚ್ಛ ವಾಹಿನಿ, ಸ್ವಚ್ಛ ಕಾರ್ಮಿಕ, ಸ್ವಚ್ಛ ಸಂಗ್ರಹ ಅಭಿಯಾನದ ಘೋಷವಾಕ್ಯ ದೊಂದಿಗೆ ಕೆಲಸ ಪ್ರಾರಂಭಿಸಲಾಗಿದ್ದು ಈ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಗ್ರಾಪಂ ಸಂಪನ್ಮೂಲ ಘಟಕವನ್ನಾಗಿ ಮಾಡುವ ಉದ್ದೇಶ ಹೊಂದಿದೆ. ಘನ ತ್ಯಾಜ್ಯ, ಇ-ತ್ಯಾಜ್ಯ, ಜೈವಿಕ ತ್ಯಾಜ್ಯ ಸಂಸ್ಕರಿಸಿ ಉತ್ತಮ ಪರಿಸರ ಕಾಪಾಡಲು ಮುಂದಾಗುತ್ತೇವೆ.
– ಅಶ್ವತ್ಥಕುಮಾರ್, ಪಿಡಿಒ
-ಡಿ.ಬಿ.ಮೋಹನ್ ಕುಮಾರ್