Advertisement

ಕೃಷಿ, ತೋಟಗಾರಿಕಾ ಬೆಳೆ ಬೆಳೆದು ಮಾದರಿ ರೈತನಾದ ಸೈನಿಕ

10:30 PM Oct 22, 2019 | mahesh |

ಆಲಂಕಾರು: ದ.ಕ. ಜಿಲ್ಲೆಯಲ್ಲಿ ರೈತರು ಅಡಿಕೆ, ರಬ್ಬರ್‌ ಕರಿಮೆಣಸು, ಕೊಕ್ಕೋ ಬೆಳೆಯುವುದು ಸಾಮಾನ್ಯ. ಆದರೆ, ಸೈನಿಕರಾಗಿ ದೇಶದ ವಿವಿಧೆಡೆ ಸೇವೆ ಸಲ್ಲಿಸಿ, ಬಳಿಕ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವ್ಯಕ್ತಿಯೊಬ್ಬರು ಉತ್ತರ ಕರ್ನಾಟಕದ ಬೆಳೆಗಳನ್ನು ಇಲ್ಲಿ ಪ್ರಯೋಗ ಮಾಡಿ, ಮಾದರಿ ಎನಿಸಿಕೊಂಡಿದ್ದಾರೆ.

Advertisement

ಕಡಬ ತಾಲೂಕು ಪೆರಾಬೆ ಗ್ರಾಮದ ಪರಿಯಾರದಲ್ಲಿ ವಾಸಿಸುತ್ತಿರುವ ಮ್ಯಥ್ಯೂ ಟಿ.ಜಿ. ಮತ್ತು ಕೇಂದ್ರಿಯ ವಿದ್ಯಾಲಯದಿಂದ ಶಿಕ್ಷಕಿ ವೃತ್ತಿಯಿಂದ ನಿವೃತ್ತಿ ಪಡೆದ ಅವರ ಪತ್ನಿ ಫಿಲೋಮಿನಾ ತಮ್ಮ ಜಮೀನಿನಲ್ಲಿ ಸ್ವಯಂ ಶ್ರಮದಿಂದಲೇ ಉತ್ತರ ಕರ್ನಾಟಕದ ರಾಗಿ, ಜೋಳ, ತೊಗರಿ, ಕಡಲೆಕಾಯಿ ಬೆಳೆದು ಹಿರಿಯ ರೈತ ದಂಪತಿಗಳಾಗಿದ್ದಾರೆ.

ಸೇನೆಯಿಂದ ನಿವೃತ್ತರಾದ ಬಳಿಕ ಮ್ಯಾಥ್ಯೂ ಅವರು ಕಡಬ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕನಾಗಿ, ಪಂಜ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ರಕ್ಷಣಾ ಇಲಾಖೆಯಿಂದ ಸಿಕ್ಕಿದ 10 ಎಕ್ರೆ ಭೂಮಿಯಲ್ಲಿ ಒಂದಿಂಚೂ ಬಿಡದೆ ವಿವಿಧ ರೀತಿಯ ಕೃಷಿ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಸುಮಾರು ಅರ್ಧ ಎಕ್ರೆಯಲ್ಲಿ ಸೋನಾ ಮಸೂರಿ ತಳಿಯ ಭತ್ತ ಬೇಸಾಯ ಮಾಡುತ್ತಿದ್ದಾರೆ. ಸುಮಾರು 2.500 ರಬ್ಬರ್‌, 100 ತೆಂಗಿನ ಗಿಡಗಳು, 500 ಅಡಿಕೆ ಗಿಡಗಳು, 30 ಜಾಯಿಕಾಯಿ ಗಿಡ, 500 ಅಗರ್‌ವುಡ್‌ ಬೆಳೆಯುತ್ತಿದ್ದಾರೆ. ಕರಿಮೆಣಸು, ವಿವಿಧ ಜಾತಿಯ ಕೆಸು, ನಿಂಬೆ, ಸೇಬು, ದಾಳಿಂಬೆ, ಮೂಸಂಬಿ, ಕಪ್ಪು ನೆಕ್ಕಿ, ಲಕ್ಷ್ಮಣ ಫ‌ಲ, ಪಿಸ್ತಾ ಗಿಡ, ತರಕಾರಿಗಳು, ಹೂವಿನ ಗಿಡಗಳು, ಔಷಧೀಯ ಗಿಡಗಳು ಕೃಷಿ ತೋಟದಲ್ಲಿ ಕಂಗೊಳಿಸುತ್ತಿವೆ.

ಸಾವಯವ ಗೊಬ್ಬರ ಬಳಕೆ
ಹತ್ತು ಎಕ್ರೆ ಜಮೀನಿಗೂ ಸಾವಯವ ಗೊಬ್ಬರವನ್ನೇ ಬಳಸುತ್ತಾರೆ. ಸಾಕಿರುವ ಒಟ್ಟು 13 ದನಗಳ ಸೆಗಣಿಯನ್ನು ಗೋಬರ್‌ ಗ್ಯಾಸ್‌ಗೆ ಬಳಸಿ, ಸ್ಲರಿಯನ್ನು ಸ್ಲರಿಯನ್ನು ಪೈಪ್‌ ಮೂಲಕ ಕೃಷಿ ತೋಟಗಳಿಗೆ ಹಾಯಿಸುತ್ತಾರೆ. ತಾವು ಬೆಳೆದ ರಬ್ಬರ್‌, ಅಡಿಕೆ ದನಗಳಿಗೆ ಬೇಕಾದ ಹುಲ್ಲಿಗೆ ಹಾಗೂ ಇತರ ಎಲ್ಲ ಬೆಳೆಗಳಿಗೂ ಈ ಸ್ಲರಿಯನ್ನೇ ಹಾಕಲಾಗುತ್ತದೆ. ಕೃಷಿಗೆ ಬರುವ ರೋಗಗಳಿಗೆ ಗೋಮೂತ್ರ ಮತ್ತು ಸಾಬೂನು ಮಿಶ್ರಣವನ್ನು ಸಿಂಪಡಿಸುತ್ತಾರೆ. ದಿನವೊಂದಕ್ಕೆ 80 ಲೀಟರ್‌ನಷ್ಟು ಹಾಲು ಡೈರಿಗೆ ಹಾಕುತ್ತಿದ್ದಾರೆ. ಓರ್ವ ಕೆಲಸದಾಳು ದುಡಿಯುತ್ತಿದ್ದರೂ ಬಹುತೇಕ ಕೆಲಸದಲ್ಲಿ ದಂಪತಿಯದೇ ಸಿಂಹಪಾಲು. ಹಿರಿತನದಲ್ಲೂ ಕೃಷಿ ವೃತ್ತಿಯನ್ನು ನೆಚ್ಚಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ತಾತ್ಸಾರ ಮಾಡಿದವರೇ ಭೇಷ್‌ ಎಂದರು!
ಹಲವು ವರ್ಷಗಳ ಹಿಂದೆ ರಕ್ಷಣಾ ಇಲಾಖೆಯಿಂದ 10 ಎಕ್ರೆ ಭೂಮಿ ಸಿಕ್ಕಿದೆ. ಆ ಸಂದರ್ಭ ಉಪನ್ಯಾಸಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರಿಂದ ಅಲ್ಪ ಪ್ರಮಾಣದಲ್ಲಿ ರಬ್ಬರ್‌ ಬೆಳೆಯಲಾಗಿತ್ತು. ನಿವೃತ್ತಿ ಬಳಿಕ ನಾಲ್ಕು ವರ್ಷಗಳಿಂದ ನಾವಿಬ್ಬರೂ ಕೃಷಿಯಲ್ಲಿ ತೊಡಗಿಸಿಕೊಂಡೆವು. ಉತ್ತರ ಕರ್ನಾಟಕದ ಕೃಷಿಯನ್ನು ಆರಂಭಿಸುವಾಗ ತಾತ್ಸರ ಮಾಡಿದ್ದವರು ಇದೀಗ ಶಹಬ್ಟಾಸ್‌ ಎನ್ನುತ್ತಿದ್ದಾರೆ. ಪತ್ನಿ ವಿಜ್ಞಾನ ಶಿಕ್ಷಕಿಯಾಗಿದ್ದ ಕಾರಣ ಕೃಷಿಯ ವಿಚಾರದಲ್ಲಿ ಹೆಚ್ಚು ಅಧ್ಯಯನ ಮಾಡಿದ್ದಾಳೆ. ಇದರಿಂದ ಕೃಷಿಯಲ್ಲಿ ವಿಭಿನ್ನ ಪ್ರಯೋಗ ಮಾಡಲು ಸಾಧ್ಯವಾಗಿದೆ. ನಾನು ಶಿಕ್ಷಕ, ಸೈನಿಕ, ಕೃಷಿಕರ ಬಗ್ಗೆ ಹೆಚ್ಚಿನ ಗೌರವ ಹೊಂದಿದ್ದೇನೆ. ಈ ಮೂರು ವೃತ್ತಿಯಲ್ಲೂ ತೊಡಗಿಕೊಳ್ಳಲು ಸಾಧ್ಯವಾಗಿರುವುದು ನನಗೆ ಹೆಮ್ಮೆ ಎನಿಸಿದೆ. ತಾಂತ್ರಿಕತೆಯನ್ನು ಬಳಸಿಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡಾಗ ಯಶಸ್ಸು ಖಂಡಿತ ಸಾಧ್ಯ. ಯುವ ಜನತೆ ಹೆಚ್ಚಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮ್ಯಾಥ್ಯೂ ಟಿ.ಜಿ. ಹೇಳಿದ್ದಾರೆ.

Advertisement

ದನ, ಕರುಗಳಿಗೂ ಆಹಾರ
ತಮ್ಮ ಜಮೀನಿನಲ್ಲಿ ಕೂಲಿ ಕೆಲಸಕ್ಕೆಂದು ಬಂದಂತಹ ಬಾಗಲ ಕೋಟೆಯ ದಂಪತಿ ಯಿಂದ ಅಲ್ಲಿನ ಕೃಷಿಯ ಬಗ್ಗೆ ತಿಳಿದುಕೊಂಡು ನಾಲ್ಕು ವರ್ಷಗಳಿಂದ ಕಾಲಕ್ಕೆ ಅನುಗುಣವಾಗಿ ರಾಗಿ, ಜೋಳ, ತೊಗರಿ, ನೆಲಗಡಲೆ ಇತ್ಯಾದಿಗಳನ್ನು ಸಾವಯವ ಗೊಬ್ಬರ ಬಳಸಿಯೇ ಬೆಳೆದಿದ್ದಾರೆ. ನಿರೀಕ್ಷೆಗೂ ಮೀರಿದ ಬೆಳೆ ಬಂದಿದ್ದು, ಅದನ್ನು ಸಂರಕ್ಷಿಸಿ ಇಟ್ಟುಕೊಂಡು ತಾವು ಸಾಕಿದ ದನ- ಕರುಗಳಿಗೆ ಆಹಾರವಾಗಿ ನೀಡುತ್ತಾರೆ. ಆಪ್ತರ ಕುಟುಂಬಗಳಿಗೂ ಹಂಚುತ್ತಿದ್ದಾರೆ. ಅಡುಗೆಗೆ ಬೇಕಾದ ನೀರುಳ್ಳಿ ಮತ್ತು ಬೆಳ್ಳುಳ್ಳಿ ಮಾತ್ರ ಅಂಗಡಿಯಿಂದ ಖರೀದಿಸುತ್ತೇವೆ. ಮಿಕ್ಕಿದ್ದೆಲ್ಲವನ್ನು ನಾವೇ ಬೆಳೆಯುತ್ತೇವೆ ಎನ್ನುತ್ತಾರೆ ಈ ದಂಪತಿ. ಈ ದಂಪತಿಯ ಪುತ್ರ ಹಾಗೂ ಸೊಸೆ ವಾಯುಸೇನೆಯಲ್ಲಿ ಉನ್ನತ ಅಧಿಕಾರಿಗಳಾಗಿದ್ದಾರೆ. ಪುತ್ರಿ ಮತ್ತು ಅವರ ಪತಿ ಕೇರಳದಲ್ಲಿ ಬ್ಯಾಂಕ್‌ ಉದ್ಯೋಗಿಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next