Advertisement

ಸೌರ ಮೇಲ್ಛಾವಣಿ ಘಟಕ: ವೆಚ್ಚ ಹೊರೆ ಅನುಷ್ಠಾನಕ್ಕೆ ಅಡ್ಡಿ..!

10:56 AM Feb 12, 2018 | Team Udayavani |

ಸುಳ್ಯ : ನೀವೇ ವಿದ್ಯುತ್‌ ಉತ್ಪಾದಿಸಿ, ಹೆಚ್ಚುವರಿಯಾದುದನ್ನು ಮಾರಿ ಆದಾಯ ಗಳಿಸಿ ಎನ್ನುವ ಸೌರಶಕ್ತಿ ಮೇಲ್ಛಾವಣಿ ಘಟಕ ಯೋಜನೆಗೆ ಹೂಡಿಕೆಯೇ ಗ್ರಾಹಕರಿಗೆ ಹೊರೆ ಎನಿಸಿದೆ.

Advertisement

ಸೌರಶಕ್ತಿ ಮೇಲ್ಛಾವಣಿ ಘಟಕ ರಾಜ್ಯ ಸೌರ ನೀತಿ ಅನ್ವಯ ವಸತಿ, ವಾಣಿಜ್ಯ, ಶಿಕ್ಷಣ, ಕೈಗಾರಿಕಾ ಸಂಸ್ಥೆಗಳು ತಮ್ಮ ಸ್ಥಾವರದ ಮೇಲ್ಛಾವಣಿ ಮೇಲೆ ಗ್ರಿಡ್‌ ಸಂಪರ್ಕ ಹೊಂದಿದ ಸೌರಶಕ್ತಿ ಘಟಕ ನಿರ್ಮಿಸಿ, ವಿದ್ಯುತ್‌ ಉತ್ಪಾದಿಸುವ ಯೋಜನೆ ಎರಡು ವರ್ಷದಿಂದ ಜಾರಿಯಲ್ಲಿದೆ.

ಅನುಷ್ಠಾನಕ್ಕೆ ಹಿಂದೇಟು
ಸುಳ್ಯ ಮತ್ತು ಪುತ್ತೂರು ತಾಲೂಕಿನಲ್ಲಿ ಘಟಕ ಅಳವಡಿಕೆಗೆ ಜನರು ತಳೆದಿರುವ ಆಸಕ್ತಿ ಕಡಿಮೆ. ಮೆಸ್ಕಾಂ ತನ್ನ ಕಚೇರಿಗಳಲ್ಲಿ ಹಾಗೂ ಕೆಲ ಖಾಸಗಿ ಮಳಿಗೆಗಳಲ್ಲಿ ಇದನ್ನು ಜಾರಿಗೊಳಿಸಿದ್ದರೂ, ಗೃಹ ಬಳಕೆಯ ಉದಾಹರಣೆ ಇಲ್ಲ. ಪುತ್ತೂರಿನಲ್ಲಿ 15 ಘಟಕ ನಿರ್ಮಾಣ ಆಗಿದ್ದರೆ, ಸುಳ್ಯದಲ್ಲಿ ಈ ಯೋಜನೆಗೆ ಇನ್ನೂ ಅರ್ಜಿ ಸಲ್ಲಿಕೆ ಆಗಿಲ್ಲ.

ಮೆಸ್ಕಾಂ ನ ಮಾಹಿತಿ ಅನ್ವಯ ಈ ತನಕ ಮನೆ ಬಳಕೆಗೆಂದು ಘಟಕ ನಿರ್ಮಾಣಕ್ಕೆ ಬೇಡಿಕೆ ಬಂದಿಲ್ಲ. ವಿಚಾರಿಸುವವರ ಸಂಖ್ಯೆ ಅಧಿಕ ಇದ್ದರೂ, ದುಬಾರಿ ಮೊತ್ತದ ಹೂಡಿಕೆಯ ಹಿನ್ನೆಲೆಯಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಆಸಕ್ತಿ ಇದ್ದರೂ ಅನುಷ್ಠಾನಕ್ಕೆ ಅಡ್ಡಿ ಆಗುತ್ತಿದೆ. ಸರಕಾರ ಶೇ.15 ರಷ್ಟು ಸಬ್ಸಿಡಿ ಪ್ರಮಾಣವನ್ನು ಶೇ.60 ಕ್ಕೆ ಏರಿಸಿದರೆ ಯೋಜನೆಗೆ ಬೇಡಿಕೆ ಬರಬಹುದೆಂಬ ಅಭಿಪ್ರಾಯವಿದೆ.

ಸ್ಥಾಪನೆ ಹೇಗೆ
ಆಸಕ್ತ ಗ್ರಾಹಕರು ಮೆಸ್ಕಾಂ ಅಂತರ್‌ ಜಾಲದಿಂದ ಅಥವಾ ಮೆಸ್ಕಾಂ ಕಚೇರಿಯಿಂದ ಅರ್ಜಿ ಪಡೆದು ಸಲ್ಲಿಸಬೇಕು. 5 ಕಿ.ವ್ಯಾ ಸಾಮರ್ಥ್ಯದ ತನಕ ಸೌರಶಕ್ತಿ ಘಟಕ ನಿರ್ಮಾಣಕ್ಕೆ 1,500 ಸಾವಿರ ಶುಲ್ಕ, 5 ಕಿ.ವ್ಯಾ ಕ್ಕಿಂತ ಹೆಚ್ಚು, 50 ಕಿ.ವ್ಯಾ ಕ್ಕಿಂತ ಕಡಿಮೆ ಆಗಿದ್ದರೆ 3000 ರೂ, 50 ಕಿ.ವ್ಯಾ ಕ್ಕಿಂತ ಹೆಚ್ಚು, 500 ಕಿ.ವ್ಯಾ ಕ್ಕಿಂತ ಕಡಿಮೆ ಆಗಿದ್ದರೆ 7000 ರೂ. ನೋಂದಣಿ ಮತ್ತು ಮೂಲ ಸೌಕರ್ಯ ಶುಲ್ಕ ಪಾವತಿಸಬೇಕಿದೆ.

Advertisement

ಏನಿದು ಸೌರ ಘಟಕ
ಇಲ್ಲಿ ಸೌರ ಫಲಕ ಸೂರ್ಯನ ಕಿರಣಗಳನ್ನು ಹೀರಿ ತನ್ನಲ್ಲಿದ್ದ ಸೌರ ಸೆಲ್‌ಗ‌ಳ ಮೂಲಕ ವಿದ್ಯುತ್‌ ಶಕ್ತಿಯನ್ನು ಉತ್ಪಾದಿಸಲಿದೆ. ಸೌರ ಫಲಕದಿಂದ ಉತ್ಪಾದನೆಗೊಂಡ ಡಿಸಿ(ಡೈರೆಕ್ಟ್ ಕರೆಂಟ್‌) ವಿದ್ಯುತ್‌ ಶಕ್ತಿಯನ್ನು ಎಸಿ (ಅಲ್ವ್ ರ್ ನೇಟಿಂಗ್ ) ಆಗಿ ಬದಲಾಯಿಸಿ, ಬಳಕೆಗೆ ಸಹಕರಿಸುತ್ತದೆ.

ಸಹಾಯಧನ ಪಡೆಯದೇ ನಿರ್ಮಿಸಿದ ಘಟಕದಿಂದ ಪೂರೈಸಿದ ವಿದ್ಯುತ್‌ ನ ಪ್ರತಿ ಯೂನಿಟ್‌ಗೆ 9.56 ರೂ, ಸಹಾಯಧನ ಪಡೆದವರ ಘಟಕಕ್ಕೆ 7.20 ರೂ. ಪಾವತಿಸಲಾಗುತ್ತದೆ. ವಿದ್ಯುತ್‌ ಪೂರೈಕೆ ಯ ನಿವ್ವಳ ಮಾಪಕವಾದ ಬಳಿಕ 30 ದಿನದೊಳಗೆ ಗ್ರಾಹಕರ ಖಾತೆಗೆ ಹಣ ಜಮೆಯಾಗಲಿದೆ.

ಖರ್ಚು ವೆಚ್ಚ
1 ಕಿ.ವ್ಯಾ ಸಾಮರ್ಥ್ಯದ ಸೌರಶಕ್ತಿ ಮೇಲ್ಛಾವಣಿ ಘಟಕಕ್ಕೆ ಅಂದಾಜು 70 ರಿಂದ 1 ಲಕ್ಷ ರೂ. ಖರ್ಚು ತಗಲುತ್ತದೆ. ಇದಕ್ಕೆ ಶೇ.15 ರಷ್ಟು ಸಹಾಯಧನ ದೊರೆಯುತ್ತದೆ. 1.ಕಿ.ವ್ಯಾ ಸಾಮರ್ಥ್ಯದ ಘಟಕ ಅಳವಡಿಸಲು 100 ಚ.ಅ
ವಿಸ್ತೀರ್ಣದ ನೆರಳು ರಹಿತ ಮೇಲ್ಛಾವಣಿಯು ಅವಶ್ಯ. ಇದರಿಂದ ದಿನವೊಂದಕ್ಕೆ ಸರಾಸರಿ 4 ಯೂನಿಟ್‌ ವಿದ್ಯುತ್‌ ಉತ್ಪಾದನೆಗೊಳ್ಳುವ ಸಾಧ್ಯತೆ ಇದೆ.

ಬಂಡವಾಳ ಬೇಕು
ನನ್ನ ಕಚೇರಿಯ ಮೇಲ್ಛಾವಣಿಯಲ್ಲಿ 3 ಕಿ.ವ್ಯಾ ಸಾಮರ್ಥ್ಯದ ಘಟಕ ಅಳವಡಿಸಿದ್ದೇನೆ. ಮೊದಲು ವಿದ್ಯುತ್‌ ಬಿಲ್‌ 2,500 ರೂ. ಬರುತಿತ್ತು. ಈಗ 500 ರೂ.ಬಿಲ್‌ ಬರುತ್ತಿದೆ. 2000 ರೂ. ಘಟಕದಿಂದ ಉತ್ಪಾದನೆ ಆಗುವ ವಿದ್ಯುತ್‌ನಿಂದ ಜಮೆ ಆಗುತ್ತದೆ. ಆದಾಯ, ಬಂಡವಾಳದ ನೆಲೆಯಲ್ಲಿ ಯೋಜನೆ ಬಹಳ ಲಾಭದಾಯಕ ಎನಿಸದಿದ್ದರೂ, ಪರಿಸರಕ್ಕೆ ಕೊಡುಗೆ ಸಲ್ಲಿಸಿದಂತಾಗುತ್ತದೆ.
– ಡಾ| ಗಣೇಶ್‌ ಪ್ರಸಾದ್‌
ಮುದ್ರಾಜೆ
ಘಟಕ ಅಳವಡಿಸಿದವರು

ಬೇಡಿಕೆ ಇದೆ
ಈಗಾಗಲೇ ಹದಿನೈದಕ್ಕೂ ಅಧಿಕ ಕಡೆ ಸೌರ ಮೇಲ್ಛಾವಣಿ ಘಟಕವನ್ನು ನಿರ್ಮಿಸಲಾಗಿದೆ. ಮೆಸ್ಕಾಂ ತನ್ನ ಸಬ್‌ ಸ್ಟೇಷನ್‌ ವ್ಯಾಪ್ತಿಯ ಕಚೇರಿಗಳಲ್ಲಿಯೂ ಅಳವಡಿಸಿದೆ. ಮೆಸ್ಕಾಂ ಗ್ರಿಡ್‌ನಿಂದ ಪಡೆದ ವಿದ್ಯುತ್‌ಗಿಂತ ಹೆಚ್ಚುವರಿಯಾಗಿ ಮೆಸ್ಕಾಂ ಗ್ರಿಡ್‌ಗೆ ಪೂರೈಸಿದ ಸೌರ ವಿದ್ಯುತ್‌ಗೆ ಹಣ ಪಾವತಿಸಲಾಗುತ್ತದೆ.
– ನಾರಾಯಣ ಪೂಜಾರಿ
ಸಹಾಯಕ ಕಾರ್ಯನಿರ್ವಾಹಕ
ಮೆಸ್ಕಾಂ ಕಚೇರಿ, ಪುತ್ತೂರು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next