Advertisement

ಸೌರ ವಿದ್ಯುತ್‌ ಅವ್ಯವಹಾರದಲ್ಲಿ ಹೆಬ್ಟಾಳ್ಕರ್‌ ಕುಟುಂಬ

10:52 AM Mar 03, 2017 | Team Udayavani |

ಬೆಂಗಳೂರು: ರೈತರಿಗಾಗಿ ರೂಪಿಸಿದ್ದ ಸೌರ ವಿದ್ಯುತ್‌ ಉತ್ಪಾದನೆ ಯೋಜನೆ ಹೆಸರಿನಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌ ಕುಟುಂಬದವರು ಅಕ್ರಮ ಎಸಗಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಕ್ಷ್ಮೀ ಹೆಬ್ಟಾಳ್ಕರ್‌ ಅವರ ಕುಟುಂಬ ಸರ್ಕಾರದ ಪ್ರಭಾವ ಬಳಸಿ ಸೌರ ವಿದ್ಯುತ್‌ ಉತ್ಪಾದನೆಯ 10 ಯೋಜನೆ ಪಡೆದಿದೆ.

ಸೌರ ವಿದ್ಯುತ್‌ ಉತ್ಪಾದನೆ ಯೋಜನೆಯಡಿ ರೈತರಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಲಕ್ಷ್ಮೀ ಹೆಬ್ಟಾಳ್ಕರ್‌ ಅವರ ಸಹೋದರ ಕೇವಲ 59 ಸೆಕೆಂಡ್‌ ಗಳಲ್ಲಿ 10 ಅರ್ಜಿಗಳನ್ನು ಅಪ್‌ಲೋಡ್‌ ಮಾಡಿದ್ದರು.

ಆ ಹತ್ತೂ ಅರ್ಜಿಗಳನ್ನು ಮಾನ್ಯ ಮಾಡಿರುವ ಕ್ರೆಡಲ್‌, 15 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಅನುಮತಿ ನೀಡಿತ್ತು. ಅರ್ಜಿ ಸಲ್ಲಿಸುವಲ್ಲಿ ಎಷ್ಟೇ ನಿಪುಣನಿರಲಿ, ಸಾಮಾನ್ಯವಾಗಿ ಒಂದು ಅರ್ಜಿ ಸಲ್ಲಿಸಲು ಕನಿಷ್ಠ 2 ನಿಮಿಷ ಬೇಕಾಗುತ್ತದೆ. ಆದರೆ, 59 ಸೆಕೆಂಡ್‌ಗಳಲ್ಲಿ 10 ಅರ್ಜಿ ಸಲ್ಲಿಸಲು ಹೇಗೆ ಸಾಧ್ಯ? ಇದರಲ್ಲಿ ಸರ್ಕಾರ ಎನ್‌ ಐಸಿಯನ್ನು ದುರುಪಯೋಗ ಪಡಿಸಿಕೊಂಡು ತಮಗೆ ಬೇಕಾದವರಿಗೆ ಸೋಲಾರ್‌ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಮಂಜೂರು ಮಾಡಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.

ಈ ಎಲ್ಲಾ 10 ಅರ್ಜಿ ಸಲ್ಲಿಸಲು ಒಂದು ವಾರ ಮುಂಚೆಯಷ್ಟೇ ಸಂಬಂಧಿಸಿದ ಭೂಮಿ ಖರೀದಿಸಲಾಗಿತ್ತು. ಆದರೆ, ಆ ಭೂಮಿಯ ಖಾತೆ ಬದಲಾವಣೆಗೆ ಮುನ್ನವೇ ಮಾರಾಟ ಕ್ರಯಪತ್ರ ಆಧರಿಸಿ ಅರ್ಜಿ ಪರಿಗಣಿಸಲಾಗಿದೆ ಎಂದು ದೂರಿದರು.

Advertisement

ಇನ್ನೊಂದೆಡೆ ಲಕ್ಷ್ಮೀ ಹೆಬ್ಟಾಳ್ಕರ್‌ ಅವರ ಸಕ್ಕರೆ ಕಾರ್ಖಾನೆಗಾಗಿ ಕೇವಲ 1.69 ಕೋಟಿ ರೂ. ಮೊತ್ತದ ಭದ್ರತೆಗೆ ಅಪೆಕ್ಸ್‌ ಬ್ಯಾಂಕ್‌ನಿಂದ 215 ಕೋಟಿ ರೂ. ಸಾಲ ನೀಡಲಾಗಿದೆ. ಅವರು ಕೇವಲ 5 ಲಕ್ಷ ರೂ. ಆದಾಯ ಹೊಂದಿದ್ದು, ಅಂಥವರಿಗೆ ಇಷ್ಟು ಮೊತ್ತದ ಸಾಲ ನೀಡಲು ಹೇಗೆ ಸಾಧ್ಯ? ಅದೂ ನಬಾರ್ಡ್‌ ಅನುಮತಿ ಇಲ್ಲದೆ ಈ ಸಾಲ ನೀಡಲಾಗಿದೆ ಎಂದು ಆರೋಪಿಸಿದರು.

5 ಲಕ್ಷರೂ. ಆದಾಯ:ಇಂಡೋನೇಷಿಯಾದಲ್ಲಿ
ಗಣಿ ಪಾಲುದಾರ

ಕೇವಲ 5 ಲಕ್ಷ ರೂ. ಆದಾಯ ಹೊಂದಿರುವ ರಾಜ್ಯದ ಕುಟುಂಬವೊಂದು ಇಂಡೋನೇಷಿಯಾದಲ್ಲಿ 5000 ಕೋಟಿ ರೂ. ಮೌಲ್ಯದ ಕಲ್ಲಿದ್ದಲು ಗಣಿಯ ಪಾಲುದಾರರಾಗಿದ್ದು, ಇದರ ಹಿಂದೆ ಪ್ರಭಾವಿ ಸಚಿವರೊಬ್ಬರ ಕೈವಾಡ ಇದೆ. ಈ ಕಂಪನಿಯಿಂದ ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿ)ಗೆ ಕಲ್ಲಿದ್ದಲು
ಸರಬರಾಜು ಮಾಡಲಾಗಿದೆ ಎಂದೂ ಸಿ.ಟಿ.ರವಿ ಆರೋಪಿಸಿದ್ದಾರೆ.

ಬೇನಾಮಿ ವ್ಯವಹಾರದ ಹಿಂದೆ ಕಾಂಗ್ರೆಸ್‌ನ ಹೈಕಮಾಂಡ್‌ ಅಥವಾ ಕೈ ಕಮಾಂಡ್‌ ಇರುವ ಅನುಮಾನವಿದೆ. ಕೇವಲ 5 ಲಕ್ಷ ರೂ. ಆದಾಯ ಹೊಂದಿರುವವರು 5000 ಕೋಟಿ ರೂ. ಮೌಲ್ಯದ ಕಲ್ಲಿದ್ದಲು ಗಣಿಯ ಪಾಲುದಾರರಾಗಲು ಹೇಗೆ ಸಾಧ್ಯ? ಈ ಪಾಲುದಾರಿಕೆಯ ನಿಜವಾದ ಮಾಲೀಕರು ಯಾರು ಎಂಬ ಬಗ್ಗೆ ತನಿಖೆಯಾಗಬೇಕಿದೆ. ಈ ಕುರಿತು ತನಿಖೆಗೆ ಆಗ್ರಹಿಸಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯಲಾಗುವುದು. ಈ ಹಗರಣದ ಬಗ್ಗೆ ತಾವು ಮಾಹಿತಿ ಸಂಗ್ರಹಿಸುತ್ತಿದ್ದು, ಅದು ಸಿಕ್ಕಿದ ಬಳಿಕ ಸಚಿವರ ಹೆಸರನ್ನು ಬಹಿರಂಗಗೊಳಿಸುವುದಾಗಿ
ಹೇಳಿದರು.

ಕೆಪಿಎಸ್‌ಸಿ ಮಾಜಿ ಸದಸ್ಯರ ಕ್ಷಮೆಯಾಚಿಸಲಿ
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಪಿಎಸ್‌ಸಿಗೆ ನೇಮಕಗೊಂಡಿದ್ದ ಸದಸ್ಯರನ್ನು ಪದಚ್ಯುತಿಗೊಳಿಸಲು ಸರ್ಕಾರ 2011ರ 362 ಅಭ್ಯರ್ಥಿಗಳ ನೇಮಕಾತಿ ಆದೇಶ ರದ್ದುಗೊಳಿಸಿತ್ತು ಎಂದು ಸಿ.ಟಿ.ರವಿ ಆರೋಪಿಸಿದ್ದಾರೆ.

ಕೆಎಟಿ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದ ಕಾರಣ ಅಕ್ರಮ ನಡೆದಿಲ್ಲ ಎಂದು ಸರ್ಕಾರವೇ ಹೇಳಿದಂತಾಗಿದೆ. ಇದರಿಂದಾಗಿ ಈ ಹಿಂದೆ ಅಕ್ರಮ ನಡೆದಿದ್ದು, ಅದರಲ್ಲಿ ಕೆಪಿಎಸ್‌ಸಿ ಸದಸ್ಯರು ಶಾಮೀಲಾಗಿದ್ದಾರೆ ಎಂದು ಹೇಳಿ ಸದಸ್ಯರನ್ನು ಅಮಾನತುಗೊಳಿಸುವ ಮೂಲಕ ಅವರಿಗೆ ಅವಮಾನ ಮಾಡಿದಂತಾಗಿದೆ. ಆದ್ದರಿಂದ ಅಮಾನತುಗೊಳಿಸಿದ ಸದಸ್ಯರು ಮತ್ತು ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next