Advertisement

ಸೋಲಾರ್‌ ಪಾರ್ಕ್‌: ಬರದ ನಾಡು ಪಾವಗಡ ಭೂಮಿಗೆ ಬಂಗಾರದ ಬೆಲೆ 

03:45 AM Mar 06, 2017 | |

ಬೆಂಗಳೂರು:ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶ ಹಾಗೂ ಬರದ ನಾಡು ಪಾವಗಡದ ನೆಲಕ್ಕೆ ಈಗ ಬಂಗಾರದ ಬೆಲೆ ಬಂದಿದ್ದು, ಕೇವಲ ಒಂದೇ ವರ್ಷದಲ್ಲಿ ಭೂಮಿಯ ಬೆಲೆ ಹತ್ತುಪಟ್ಟು ಹೆಚ್ಚಳವಾಗಿದೆ.

Advertisement

ಇದಕ್ಕೆ ಕಾರಣ ಪಾವಗಡದಲ್ಲಿ ತಲೆಯೆತ್ತುತ್ತಿರುವ ದೇಶದ ಅತಿದೊಡ್ಡ ಸೋಲಾರ್‌ ಪಾರ್ಕ್‌.ಹೌದು, ಪಾವಗಡದಲ್ಲಿ ಸೋಲಾರ್‌ ಪಾರ್ಕ್‌ ಸ್ಥಾಪನೆ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಆ ಪ್ರದೇಶದ ಭೂಮಿಗೆ ಏಕಾಏಕಿ ಬೇಡಿಕೆ ಬಂದಿದೆ. ಇದರ ಪರಿಣಾಮ ಪಾರ್ಕ್‌ ಉದ್ಘಾಟನೆಗೊಳ್ಳುವ ಮೊದಲೇ ಅಲ್ಲಿನ ಸುತ್ತಮುತ್ತಲಿನ ಭೂಮಿಯ ಬೆಲೆ ಹತ್ತುಪಟ್ಟು ಏರಿಕೆಯಾಗಿದೆ.

ಪಾವಗಡ ಕಳೆದ ಅರ್ಧ ದಶಕದಲ್ಲಿ ಅತಿ ಹೆಚ್ಚು ಬಾರಿ ಬರಕ್ಕೆ ತುತ್ತಾದ ತಾಲ್ಲೂಕು. ಹೀಗಾಗಿ, ಇಲ್ಲಿನ ಭೂಮಿಯನ್ನು ಕೇಳ್ಳೋರು ಇರಲಿಲ್ಲ. ಪಾರ್ಕ್‌ ಸ್ಥಾಪನೆಗೊಳ್ಳುತ್ತಿರುವ ಪಾವಗಡ ತಾಲ್ಲೂಕಿನ ತಿರುಮಣಿಯಲ್ಲಿ ಈ ಮೊದಲು ಭೂಮಿಯ ಬೆಲೆ ಎಕರೆಗೆ ಒಂದೂವರೆ ಲಕ್ಷ ರೂ. ಇತ್ತು. ಈಗ 10ರಿಂದ 15 ಲಕ್ಷ ರೂ. ಇದೆ.  ಇನ್ನೂ ಪಾವಗಡ ಪಟ್ಟಣಕ್ಕೆ ಸಮೀಪದಲ್ಲಿ ನಾಲ್ಕು ವರ್ಷಗಳ ಹಿಂದೆ 9 ಲಕ್ಷ ರೂ. ಇದ್ದು. ಈಗ 50ರಿಂದ 60 ಲಕ್ಷ ರೂ. ಆಗಿದೆ ಎಂದು ತಿರುಮಣಿ ರೈತ ಮಲ್ಲಿಕಾರ್ಜುನ ತಿಳಿಸುತ್ತಾರೆ.

ತಿಂಗಳಿಂದ 24 ಗಂಟೆ ವಿದ್ಯುತ್‌
ಪಾವಗಡ ಸುತ್ತಲಿನ ಹಳ್ಳಿಗಳಲ್ಲಿ ಅಸಮರ್ಪಕ ವಿದ್ಯುತ್‌ ಪೂರೈಕೆ ಆಗುತ್ತಿತ್ತು. ಕಳೆದ ಒಂದು ತಿಂಗಳಿಂದ ತಿರುಮಣಿಯಲ್ಲೇ ದಿನದ 24 ಗಂಟೆ ವಿದ್ಯುತ್‌ ಪೂರೈಕೆಯಾಗುತ್ತಿದೆ. ಪಾರ್ಕ್‌ಗೆ ಕೂಡುವ ಹಲವು ಮಾರ್ಗಗಳಲ್ಲಿ ನೂರಾರು ಕಿ.ಮೀ. ರಸ್ತೆ ನಿರ್ಮಾಣ ಅಗುತ್ತಿದೆ. ಹೀಗೆ ಮೂಲಸೌಕರ್ಯಗಳು ಇಲ್ಲಿ ಬರುತ್ತಿರುವುದರಿಂದ ನೆರೆಯ ಆಂಧ್ರಪ್ರದೇಶ ಸೇರಿದಂತೆ ಸ್ಥಳೀಯ ಪ್ರಭಾವಿಗಳು  ಇಲ್ಲಿನ ಭೂಮಿ ಖರೀದಿಸಲು ಮುಗಿ ಬೀಳುತ್ತಿದ್ದು ಲಕ್ಷಾಂತರ ರೂಪಾಯಿ ಸುರಿಯುತ್ತಿದ್ದಾರೆ.

ತಿರುಮಣಿಯಲ್ಲಿ ಈಚೆಗಷ್ಟೇ ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರು ಪೆಟ್ರೋಲ್‌ ಬಂಕ್‌ ಸ್ಥಾಪನೆಗಾಗಿ ಜಾಗ ಖರೀದಿಸಿದ್ದಾರೆ. ಅದೇ ರೀತಿ, ಶಿಕ್ಷಣ ಸಂಸ್ಥೆ ಮತ್ತಿತರ ಉದ್ದೇಶಗಳಿಗೆ ಇಲ್ಲಿ ಭೂಮಿ ಖರೀದಿಸಲಾಗುತ್ತಿದೆ. ಇದಲ್ಲದೆ, ನಾಗಲಮಡಿಕೆ, ಪಳವಳ್ಳಿಯಲ್ಲೂ ಭೂಮಿಗೆ ಬೇಡಿಕೆ ಬಂದಿದೆ.

Advertisement

ಸರ್ಕಾರಕ್ಕೆ ಕೊಡಲು ಹಿಂದೇಟು
ಭೂಮಿ ಬೆಲೆ ಹೆಚ್ಚಳ ಆಗುತ್ತಿದ್ದಂತೆ ಕೆಲ ರೈತರು ಸೋಲಾರ್‌ ಪಾರ್ಕ್‌ಗೆ ಇನ್ನೂ ಅಗತ್ಯ ಇರುವ ನೂರಾರು ಎಕರೆ ಭೂಮಿಯನ್ನು ಸರ್ಕಾರಕ್ಕೆ ಲೀಸ್‌ ರೂಪದಲ್ಲಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದು ಸರ್ಕಾರಕ್ಕೆ ಮತ್ತೂಂದು ರೀತಿಯ ತಲೆನೋವಾಗಿ ಪರಿಣಮಿಸಿದೆ.

“ಸರ್ಕಾರ ನಿರ್ಮಿಸುತ್ತಿರುವ ಸೋಲಾರ್‌ ಪಾರ್ಕ್‌ಗೆ ಈಗಾಗಲೇ 90 ಎಕರೆ ಕೊಟ್ಟಿದ್ದೇನೆ. ಉಳಿದಿದ್ದು 10 ಎಕರೆ ಮಾತ್ರ. ಅಲ್ಲಿ ನನ್ನ ತಂದೆ-ತಾಯಿ ಸಮಾಧಿ ಇದೆ. ಹಾಗಾಗಿ, ನನಗೆ ಕೊಡಲು ಇಷ್ಟವಿಲ್ಲ. ಯಾವುದೇ ಕಾರಣಕ್ಕೂ ಕೊಡುವುದಿಲ್ಲ. ಇದನ್ನು ಇಂಧನ ಸಚಿವರಿಗೂ ಈಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ’ ಎಂದು ತಿರುಮಣಿಯ ರಮೇಶ್‌ ತಿಳಿಸುತ್ತಾರೆ.

ಇತ್ತೀಚೆಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ರೈತರ ಜತೆ ಸಂವಾದ ನಡೆಸಿದ ಸಂದರ್ಭದಲ್ಲಿಯೂ ಜಲಸಮುದ್ರದ ಒಬ್ಬ ರೈತ, ನಮ್ಮ ಕುಟುಂಬದ್ದು 25 ಎಕರೆ ಜಮೀನು ಇದೆ. ಈಗಾಗಲೇ 15 ಎಕರೆ ನೀಡಿದ್ದೇವೆ. ಉಳಿದ 10 ಎಕರೆಯಲ್ಲಿ ಕೊಳವೆಬಾವಿ ಕೊರೆದಾಗ, ನಾಲ್ಕು ಇಂಚು ನೀರು ಬಂದಿದೆ. ಹಾಗಾಗಿ, ಕೊಡಲು ಮನಸ್ಸಿಲ್ಲ ಎಂದು ನೇರವಾಗಿಯೇ ಹೇಳಿದ್ದರು.

ಲೆಕ್ಕಾಚಾರ
ಸರ್ಕಾರ ಸೋಲಾರ್‌ ಪಾರ್ಕ್‌ ನಿರ್ಮಾಣಕ್ಕಾಗಿ ಪಡೆಯುವ ಭೂಮಿಗೆ ಪ್ರತಿಯಾಗಿ ಎಕರೆಗೆ ಒಂದು ವರ್ಷಕ್ಕೆ 21 ಸಾವಿರ ರೂ. ರೈತರಿಗೆ ಕೊಡುತ್ತದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಈ ಮೂಲದರದಲ್ಲಿ ಶೇ. 5ರಷ್ಟು ಹೆಚ್ಚಳ ಆಗುತ್ತದೆ. 28 ವರ್ಷ ಈ ಭೂಮಿ ಸರ್ಕಾರದ ಬಳಿ ಇರುತ್ತದೆ. ಅಂದರೆ ಎಕರೆಗೆ ಅಬ್ಬಬ್ಟಾ ಎಂದರೆ ಫ‌ಲಾನುಭವಿಗೆ ಆರು ಲಕ್ಷ ರೂ. ಸಿಗುತ್ತದೆ. ಆದರೆ, ಈಗಲೇ ಈ ಭೂಮಿಯನ್ನು 10ರಿಂದ 15 ಲಕ್ಷ ರೂ.ಗೆ ಖರೀದಿಸಲು ಮುಂದೆಬರುತ್ತಿದ್ದಾರೆ. ಅಷ್ಟೇ ಯಾಕೆ, ಯೋಜನೆಯ ಸರ್ಕಾರವೇ ರಸ್ತೆ ನಿರ್ಮಾಣಕ್ಕಾಗಿ ಇಲ್ಲಿ 6.75 ಲಕ್ಷ ರೂ.ಗಳಿಗೆ ಭೂಮಿ ಖರೀದಿಸಿದೆ. ಹೀಗಿರುವಾಗ, 28 ವರ್ಷ ಗುತ್ತಿಗೆ ಕೊಡುವುದು ಲಾಭದಾಯಕ ಅಲ್ಲ ಎಂಬ ಲೆಕ್ಕಾಚಾರ ಶುರುವಾಗಿದೆ. ಹೀಗಾಗಿ, ಭೂಮಿಯನ್ನು ಸರ್ಕಾರಕ್ಕೆ ಗುತ್ತಿಗೆ ಆಧಾರದಲ್ಲಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸುತ್ತಾರೆ.

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next