ರಾಯಚೂರು: ಬಿರು ಬಿಸಿಲಿಗೆ ಹೆಸರಾದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಲಭಕ್ಕೆ ಮಾಡಬಹುದಾದ ಕೃಷಿ ಎಂದರೆ ಅದು ಸೋಲಾರ್ ವಿದ್ಯುತ್ ಉತ್ಪಾದನೆ ಎನ್ನುವ ಮಾತು ಈಗ ನಿಜವಾಗುತ್ತಿದೆ. ಹಸಿರು ಇಂಧನ ಬಳಕೆಯಲ್ಲಿ ಜಿಲ್ಲೆ ಸದ್ದಿಲ್ಲದೇ ಸಣ್ಣ ಸಣ್ಣ ಹೆಜ್ಜೆಗಳನ್ನಿಡುತ್ತಿದ್ದು, ಮುಂಬರುವ ದಿನಗಳಲ್ಲಿ ಬೃಹತ್ ಶಾಖೋತ್ಪನ್ನ ಕೇಂದ್ರಗಳ ಅಸ್ತಿತ್ವ ಕಳೆಯುವ ಲಕ್ಷಣಗಳು ಗೋಚರಿಸುತ್ತಿವೆ.
ಜಿಲ್ಲೆಯಲ್ಲಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುವ ಆರ್‌ಟಿಪಿಎಸ್, ವೈಟಿಪಿಎಸ್ ಎನ್ನುವ ಬೃಹತ್ ಶಾಖೋತ್ಪನ್ನ ಕೇಂದ್ರಗಳಿದ್ದರೆ, ಪಕ್ಕದ ಬಳ್ಳಾರಿಯಲ್ಲಿ ಬಿಟಿಪಿಎಸ್ ಇದೆ. ಇಲ್ಲಿ ಉರಿಯುವ ಕಲ್ಲಿದ್ದಲು ವಾತಾನುಕೂಲಕ್ಕೆ ವಿರುದ್ಧವಾಗಿದ್ದರೂ ಅನಿವಾರ್ಯ ಕಾರಣಗಳಿಗೆ ಜನರೂ ಒಗ್ಗಿಕೊಂಡಿದ್ದರು. ಆದರೆ, ಇದಕ್ಕೆ ಪರ್ಯಾಯ ಎನ್ನುವ ಹಸಿರು ಇಂಧನ ಮೂಲವಾದ ಸೋಲಾರ್‌ಗೆ ಈಗ ಮನ್ನಣೆ ಸಿಗುತ್ತಿರುವುದು ವಿಶೇಷ.
ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಸುಮಾರು 300 ಮೆಗಾವ್ಯಾಟ್‌ಗೂ ಅಧಿಕ ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪಿಸಿದ್ದು, ಬೇಸಿಗೆಯಲ್ಲಿ ಇವುಗಳಿಂದ ಹೆಚ್ಚು ವಿದ್ಯುತ್ ಪಡೆಯಲಾಗುತ್ತಿದೆ. ಇವು ಖಾಸಗಿಯವರ ಒಡಂಬಡಿಕೆಯಡಿ ಅನುಷ್ಠಾನಗೊಂಡಿದ್ದರೂ ಪರೋಕ್ಷವಾಗಿ ಸರ್ಕಾರಕ್ಕೆ ವಿದ್ಯುತ್ ಉತ್ಪಾದನೆ ಹೊರೆ ತಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.
ರಾಯಚೂರು ಜೆಸ್ಕಾಂ ವಿಭಾಗದ ಜಿಲ್ಲೆಯ ಬ್ಯಾಗವಾಟ್ ಹತ್ತಿರ 40 ಮೆಗಾವ್ಯಾಟ್, ನೀರಮಾನ್ವಿ ಬಳಿ 50 ಮೆಗಾವ್ಯಾಟ್, ಮಲ್ಲಟದ ಹತ್ತಿರ 26 ಮೆಗಾವ್ಯಾಟ್, ಗಬ್ಬೂರು ಬಳಿ 20 ಮೆಗಾವ್ಯಾಟ್, ಶಕ್ತಿನಗರ ಹತ್ತಿರ 12 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಸಿಂಧನೂರು ಕೆಪಿಟಿಸಿಎಲ್ ವಿಭಾಗದ ಮಸ್ಕಿ, ತುರ್ವಿಹಾಳ, ಲಿಂಗಸೂಗುರು ಭಾಗದಲ್ಲಿ ಸುಮಾರು 90 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೋಲಾರ್ ಘಟಕಗಳನ್ನು ಅಳವಡಿಸಲಾಗಿದೆ. ಇದು ಕೇವಲ ರಾಯಚೂರಿನ ವಿಚಾರವಾದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿಯೂ ಹೆಚ್ಚು ಸೋಲಾರ್ ಕೃಷಿ ನಡೆಯುತ್ತಿದೆ. ಕಲಬುರಗಿ, ಯಾದಗಿರಿ, ಬಳ್ಳಾರಿ ಜಿಲ್ಲೆಗಳೂ ಇದಕ್ಕೆ ಹೊರತಾಗಿಲ್ಲ.
ಸರ್ಕಾರದ ಜತೆ ಒಡಂಬಡಿಕೆ: ಖಾಸಗಿ ಸಂಸ್ಥೆಗಳು ಸೋಲಾರ್ ಕೃಷಿಗೆ ಹೆಚ್ಚು ಒಲವು ತೋರುತ್ತಿದ್ದು, ಜಿಲ್ಲೆಯಲ್ಲಿ ಕೃಷಿ ಯೋಗ್ಯವಲ್ಲದ ಭೂಮಿಯನ್ನು ಆಯ್ಕೆ ಮಾಡಿಕೊಂಡು ಘಟಕ ಅಳವಡಿಸುತ್ತಿವೆ. ದೊಡ್ಡ ಕೈಗಾರಿಕೆಗಳು, ಸಂಸ್ಥೆಗಳು ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡು ತಮಗೆ ಬೇಕಾದ ವಿದ್ಯುತ್ ಉತ್ಪಾದನೆಗೆ ಒತ್ತು ನೀಡುತ್ತಿವೆ. ಕೆಪಿಟಿಸಿಎಲ್‌ಗೆ ತಮ್ಮ ವಿದ್ಯುತ್ ಪ್ರಸರಣಕ್ಕೆ ತಿಂಗಳಿಗೆ ಇಂತಿಷ್ಟು ಬಾಡಿಗೆ ಪಾವತಿಸುವ ಮೂಲಕ ತಮ್ಮ ವಿದ್ಯುತ್ ಪಡೆಯುತ್ತಿವೆ. ಅಲ್ಲದೇ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಹಸಿರು ವಿದ್ಯುತ್ ಉತ್ಪಾದನೆ ಕಡ್ಡಾಯಗೊಳಿಸಿರುವ ಕಾರಣ ಈ ಒಡಂಬಡಿಕೆಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
ಹಗಲಲ್ಲೇ ತ್ರಿಪೇಸ್ ವಿದ್ಯುತ್: ಕೃಷಿಗೆ ಬೇಕಾದ ತ್ರಿಪೇಸ್ ವಿದ್ಯುತ್ ಸರಬರಾಜು ಮಾಡಬೇಕಾದ ಸರ್ಕಾರಕ್ಕೆ ಈ ಹಿಂದೆ ಭಾರೀ ಹೊರೆಯಾಗುತ್ತಿತ್ತು. ಆದರೆ, ಈಗ ಸೋಲಾರ್ ಬಳಕೆ ಹೆಚ್ಚುತ್ತಿರುವ ಕಾರಣ ಹಗಲು ಬಿಸಿಲಿನ ಪ್ರಖರತೆ ಹೆಚ್ಚಾದಾಗ ಹೆಚ್ಚು ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹೀಗಾಗಿ ಸರ್ಕಾರ ರೈತರಿಗೆ ಹಗಲಲ್ಲೇ 7 ಗಂಟೆ ನಿರಂತರ ತ್ರಿಪೇಸ್ ವಿದ್ಯುತ್ ನೀಡುತ್ತಿದೆ. ಮರುಬಳಕೆಯ ಇಂಧನ ಮೂಲವಾದ್ದರಿಂದ ಸರ್ಕಾರಕ್ಕೆ ವಿದ್ಯುತ್ ಉತ್ಪಾದಿಸುವ ಖರ್ಚು ಕೂಡ ಕಡಿಮೆಯಾಗುತ್ತಿದೆ ಎನ್ನುತ್ತವೆ ಮೂಲಗಳು.
ಸೋಲಾರ್ ವಿದ್ಯುತ್ ಉತ್ಪಾದನೆ ಘಟಕಗಳ ಸ್ಥಾಪನೆ ಇತ್ತೀಚೆಗೆ ಹೆಚ್ಚಾಗಿದೆ. ಸಿಂಧನೂರು ವಿಭಾಗದ ಲಿಂಗಸೂಗೂರು, ಮಸ್ಕಿ ಭಾಗದಲ್ಲೇ 90 ಮೆಗಾವ್ಯಾಟ್ ಸಾಮರ್ಥ್ಯದ ಘಟಕಗಳಿದ್ದರೆ, ಇಡೀ ಜಿಲ್ಲಾದ್ಯಂತ ಸುಮಾರು 300 ಮೆ.ವ್ಯಾಟ್‌ಗೂ ಅಧಿಕ ಸಾಮರ್ಥ್ಯದ ಘಟಕಗಳನ್ನು ಅವಳಡಿಸಲಾಗಿದೆ. ಇನ್ನೂ ರೈಸ್‌ಮಿಲ್ ಗಳು, ಸಣ್ಣ ಕೈಗಾರಿಕೆಗಳು ಸೇರಿದಂತೆ ಸ್ವಂತ ಬಳಕೆಗೆ ಸಾಕಷ್ಟು ಜನ ಸೋಲಾರ್ ಬಳಕೆ ಆರಂಭಿಸಿದ್ದಾರೆ. –
ರಾಜೇಶ್, ಇಇ, ಕೆಪಿಟಿಸಿಎಲ್, ಸಿಂಧನೂರು ವಿಭಾಗ
-ಸಿದ್ಧಯ್ಯಸ್ವಾಮಿ ಕುಕನೂರು