ನವದೆಹಲಿ : 2070ರ ಒಳಗಾಗಿ ದೇಶ ಶೂನ್ಯ ಪ್ರಮಾಣದ ಇಂಗಾಲ ಹೊರಸೂಸುವಿಕೆ ಹೊಂದಲು ಭಾರತ ಗುರಿ ಹೊಂದಿದೆ ಎಂದು ಸೋಮವಾರ ಗ್ಲ್ಯಾಸ್ಕೊದ ಹವಾಮಾನ ಸಮ್ಮೇಳನದಲ್ಲಿ ಘೋಷಿಸಿದ್ದರು. ಸದ್ಯ ದೇಶದ ವಿದ್ಯುತ್ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಆಧಾರಿತವೇ ಆಗಿದೆ. ಪ್ರಧಾನಿಯವರ ಹೇಳಿಕೆ ಗಮನಿಸಿದರೆ ಕಲ್ಲಿದ್ದಲು ಅವಲಂಬನೆಯನ್ನು 2060ರ ವೇಳೆಗೆ ಶೇ.99ರಷ್ಟು ತಗ್ಗಿಸಬೇಕು. ಜತೆಗೆ ಆ ಅವಧಿಯ ವೇಳೆಗೆ 5,600 ಗಿಗಾ ವ್ಯಾಟ್ ಸೌರ ವಿದ್ಯುತ್ ಅನ್ನು ಉತ್ಪಾದಿಸಬೇಕಾಗುತ್ತದೆ ಎಂದು ನವದೆಹಲಿಯ ಇಂಧನ, ಪರಿಸರ ಮತ್ತು ನೀರು ಮಂಡಳಿ (ಸಿಇಇಡಬ್ಲ್ಯೂ) ಎಂಬ ಖಾಸಗಿ ಸಂಸ್ಥೆ ಮಂಗಳವಾರ ಅಭಿಪ್ರಾಯಪಟ್ಟಿದೆ.
2030 ಮತ್ತು 2100ರ ನಡುವೆ ಶೂನ್ಯ ಇಂಗಾಲ ಹೊರಸೂಸುವಿಕೆಗೆ 13 ಸಾವಿರ ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಬೇಕಾಗುತ್ತದೆ ಎಂದು ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ ಎಂದು ಸಿಇಇಡಬ್ಲ್ಯೂ ತಿಳಿಸಿದೆ.
ಇದರ ಜತೆಗೆ ತೈಲೋತ್ಪನ್ನಗಳ ಬಳಕೆಯೂ 2050ರ ವೇಳೆಗೆ ಗರಿಷ್ಠ ಮಟ್ಟ ತಲುಪಿ 2050ರಿಂದ 2070ರ ವೇಳೆಶೇ.90ರಷ್ಟು ಇಳಿಕೆಯಾಗಬೇಕು. ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಕೂಡ 2040ರ ವೇಳೆಗೆ ಗರಿಷ್ಠ ಪ್ರಮಾಣ ತಲುಪಬೇಕು ಮತ್ತು 2060ರ ಒಳಗಾಗಿ ಶೇ. 99ರಷ್ಟು ಕಡಿಮೆಯಾಗಬೇಕಾಗಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. 2070ರ ಒಳಗಾಗಿ ಇಂಗಾಲದ ಬಳಕೆ ತಗ್ಗಿಸುವ ನಿಟ್ಟಿನಲ್ಲಿ ಇನ್ನೂ 40 ವರ್ಷಗಳಿವೆ. ಅದಕ್ಕಾಗಿ ದೇಶ ಸಮಗ್ರ ಯೋಜನೆ ಹೊಂದಬೇಕಾಗಿದೆ ಎಂದು ಹೇಳಿದೆ.
ಇದನ್ನೂ ಓದಿ : ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಹಜ್ ಯಾತ್ರೆಗೆ ಮತ್ತೆ ಚಾಲನೆ : ನೋಂದಣಿ ಪ್ರಕ್ರಿಯೆ ಆರಂಭ