Advertisement

ಸೋಲಾರ್‌ ವಿದ್ಯುತ್‌ ಉತ್ಪಾದನೆ: MRPL ಪ್ರಥಮ

09:40 AM Apr 17, 2018 | Karthik A |

ಸುರತ್ಕಲ್‌: ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋಕೆಮಿಕಲ್ಸ್‌ (MRPL) ಸಂಸ್ಥೆಯು ಪ್ರಸ್ತುತ ಸೋಲಾರ್‌ ವಿದ್ಯುತ್‌ ಉತ್ಪಾದನೆ ಮೂಲಕ ಮತ್ತೂಂದು ಹಿರಿಮೆಗೆ ಪಾತ್ರವಾಗಿದೆ. ವಾರ್ಷಿಕ 88 ಲಕ್ಷ ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವಿರುವ ಸೋಲಾರ್‌ ಘಟಕವನ್ನು MRPL ನಿರ್ಮಿಸಿದೆ. ಕುತ್ತೆತ್ತೂರಿನಲ್ಲಿರುವ ಸ್ಥಾವರದೊಳಗೆ ಇದನ್ನು ನಿರ್ಮಿಸಲಾಗಿದ್ದು, ವಾರ್ಷಿಕ ವಿದ್ಯುತ್‌ ಖರೀದಿಗೆ ಬಳಕೆಯಾಗುವ 6.50 ಕೋ.ರೂ. ಉಳಿಸುತ್ತ ಗಮನಾರ್ಹ ಹೆಜ್ಜೆ ಇರಿಸಿದೆ. ಪರಿಸರಸ್ನೇಹಿ ಕ್ರಮದ ಜತೆಗೆ ಮಾಲಿನ್ಯ ಕಡಿಮೆ ಮಾಡುವ ಉದ್ದೇಶವನ್ನೂ ಇದು ಹೊಂದಿದೆ.

Advertisement

ಎಲ್ಲಿ? ಹೇಗೆ?
27 ಕೋ.ರೂ. ವೆಚ್ಚದಲ್ಲಿ ಸ್ಥಾಪನೆಯಾಗಿರುವ 6.063 ಮೆ. ವ್ಯಾ. ಸಾಮರ್ಥ್ಯದ ಈ ಘಟಕ ಪ್ರತೀ ತಿಂಗಳು 24,000 ಯೂನಿಟ್‌ ವಿದ್ಯುತ್‌ ಉತ್ಪಾದಿಸಲಿದೆ. ಪ್ರತೀ ವರ್ಷ ಅಂದಾಜು 88 ಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆಯಾಗಲಿದೆ. ಈ ಮೂಲಕ MRPL ದೇಶದ ತೈಲ ಸಂಸ್ಥೆಗಳ ಪೈಕಿ ಅತೀ ದೊಡ್ಡ ಸೋಲಾರ್‌ ಘಟಕ ಹೊಂದಿರುವ ಕೀರ್ತಿಗೆ ಪಾತ್ರವಾಗಿದೆ.

ಮಾಲಿನ್ಯ ಪ್ರಮಾಣ ಇಳಿಕೆ
ಸೋಲಾರ್‌ ವಿದ್ಯುತ್‌ ಘಟಕ ಆರಂಭಿಸಿ MRPL ಸುಮಾರು 7,000 ಟನ್‌ ಇಂಗಾಲ ಉಗುಳುವಿಕೆ ಕಡಿತಗೊಳಿಸುವಲ್ಲಿ ಯಶಸ್ವಿಯಾಗಿದೆ. ಟಾಟಾ ಪವರ್‌ ಸೋಲಾರ್‌ ಸಿಸ್ಟಮ್ಸ್‌ ಈ ಘಟಕವನ್ನು ನಿರ್ವಹಿಸುತ್ತಿದೆ. ಎಂಆರ್‌ಪಿಎಲ್‌ ಸ್ಥಾವರ, ವಸತಿ ನಿಲಯ ಮತ್ತಿತರ ಪ್ರದೇಶಗಳಲ್ಲಿ ಸೋಲಾರ್‌ ಪ್ಯಾನಲ್‌ ಅಳವಡಿಸಲಾಗಿದೆ.

ರಾಜ್ಯ – ಕೇಂದ್ರ ಪ್ರೋತ್ಸಾಹ
MRPL ಸಂಸ್ಥೆಯು ಸರಕಾರಿ ಸ್ವಾಮ್ಯದ ಕಂಪೆನಿಯಾಗಿದ್ದು,  ಸ್ಥಾವರ ನಿರ್ಮಾಣಕ್ಕೆ ರಾಜ್ಯ ಮತ್ತು ಕೇಂದ್ರಗಳೆರಡೂ ಪ್ರೋತ್ಸಾಹ ನೀಡಿವೆ. ಇತ್ತೀಚಿನ ದಿನಗಳಲ್ಲಿ ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಬ್ಸಿಡಿ ಸಹಿತ ವಿವಿಧ ಸೌಲಭ್ಯ ಘೋಷಿಸಿವೆ. ಜಲ ವಿದ್ಯುತ್‌, ಶಾಖೋತ್ಪನ್ನ ವಿದ್ಯುತ್‌ ಯೋಜನೆಗಳ ಮೇಲಿನ ಪೂರ್ಣ ಅವಲಂಬನೆ ಕಡಿಮೆಯಾಗುತ್ತ ಅದಕ್ಕೆ ಪರ್ಯಾಯವಾಗಿ ಸೋಲಾರ್‌ ವಿದ್ಯುತ್‌ ಉತ್ಪಾದನೆಯತ್ತ ಲಕ್ಷ್ಯ ಹರಿಸಲಾಗುತ್ತಿದೆ. ಸೋಲಾರ್‌ ವಿದ್ಯುತ್‌ಗೆ ಪ್ರವೇಶ ತೆರಿಗೆ, ಸ್ಟ್ಯಾಪ್‌ ಡ್ಯೂಟಿಗಳ ವಿನಾಯಿತಿಯಿದ್ದು, ಸಾವಿರಾರು ರೂ. ಉಳಿತಾಯವಾಗುತ್ತಿದೆ. ಪ್ರತೀ ವರ್ಷ ವಿದ್ಯುತ್‌ ಬೇಡಿಕೆ ಶೇ. 15ರಿಂದ 20ರಷ್ಟು ಹೆಚ್ಚುತ್ತಲೇ ಇದ್ದು, ಉತ್ಪಾದನೆ ಮಾತ್ರ ಹೆಚ್ಚಳವಾಗುತ್ತಿಲ್ಲ. ಹೀಗಾಗಿ ಪರಿಷ್ಕೃತ ಸೌರ ವಿದ್ಯುತ್‌ ನೀತಿ ರೂಪಿಸಿ ಸೂರ್ಯ ರಶ್ಮಿ ತೀವ್ರವಾಗಿರುವ ಕಡೆಗಳಲ್ಲಿ ಸೌರ ವಿದ್ಯುತ್‌ ಉತ್ಪಾದನೆಗೆ ಗಮನ ನೀಡಲಾಗಿದೆ. 2022ರ ವೇಳೆಗೆ ಸರಿ ಸುಮಾರು 34,152 ಮೆ. ವ್ಯಾ. ಉತ್ಪಾದನೆಯ ಗುರಿ ಇದೆ ಎನ್ನುತ್ತಾರೆ ರಾಷ್ಟ್ರೀಯ ಸೋಲಾರ್‌ ಮಿಷನ್‌ ಅಧಿಕಾರಿಗಳು.

MRPL ದೇಶದ ತೈಲ ಸಂಸ್ಥೆಗಳಲ್ಲೇ ಅತೀ ದೊಡ್ಡ ಸೋಲಾರ್‌ ವಿದ್ಯುತ್‌ ಉತ್ಪಾದನೆ ಯೋಜನೆ ಜಾರಿಗೊಳಿಸಿದೆ. ಪರಿಸರ ಸಹ್ಯ ವಿದ್ಯುತ್‌ ಉತ್ಪಾದನೆಗಾಗಿ ಸಂಸ್ಥೆಯ ಅ ಧೀನದಲ್ಲಿರುವ ಭೂಮಿ, ವಸತಿ ಪ್ರದೇಶ, ಮೇಲ್ಛಾವಣಿಗಳಲ್ಲಿ ಸೋಲಾರ್‌ ಪ್ಯಾನಲ್‌ ಅಳವಡಿಸಲಾಗಿದೆ. ವಾರ್ಷಿಕ 88 ಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿವೆ. ಇದರಿಂದ 7,000 ಟನ್‌ ಕಾರ್ಬನ್‌ ಹೊರಸೂಸುವಿಕೆ ಕಡಿಮೆಯಾಗಲಿದೆ. ಇದೊಂದು ಯಶಸ್ವೀ ಯೋಜನೆ.
– ಪ್ರಶಾಂತ್‌ ಬಾಳಿಗಾ, ಜಿ.ಎಂ., ಕಾರ್ಪೊರೇಟ್‌ ಕಮ್ಯುನಿಕೇಷನ್‌, MRPL

Advertisement
Advertisement

Udayavani is now on Telegram. Click here to join our channel and stay updated with the latest news.

Next