Advertisement

ಮಳೆ, ಮೋಡದ ನಡುವೆ ಸೂರ್ಯಗ್ರಹಣ ವೀಕ್ಷಣೆ

11:31 PM Jun 21, 2020 | Sriram |

ಮಹಾನಗರ: ರವಿವಾರ ನಡೆದ ಖಂಡಗ್ರಾಸ ಸೂರ್ಯಗ್ರಹಣ ವೀಕ್ಷಣೆಗೆ ಮಂಗಳೂರು ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮಳೆ, ಮೋಡ ಅಡ್ಡಿಯಾಯಿತು. ಆದರೂ ಮಳೆ ಬಿಟ್ಟ ವೇಳೆ ಕೆಲಹೊತ್ತು ಗ್ರಹಣ ವೀಕ್ಷಣೆ ಮಾಡುವ ಮೂಲಕ ಜನರು ಅಪರೂಪದ ಕೌತುಕಕ್ಕೆ ಸಾಕ್ಷಿಯಾದರು.

Advertisement

ಕೋವಿಡ್-19 ಹಿನ್ನೆಲೆಯಲ್ಲಿ ಪಿಲಿಕುಳ ಸಂಶೋಧನಾ ಕೇಂದ್ರ ಸಹಿತ ಎಲ್ಲಿಯೂ ಗುಂಪಾಗಿ ಸಾರ್ವಜನಿಕ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಿರಲಿಲ್ಲ. ಜನತೆ ಪಿನ್‌ಹೋಲ್‌ ಕೆಮರಾ, ಸೌರಕನ್ನಡಕಗಳ ಮೂಲಕ ತಮ್ಮ ಮನೆ ಪಕ್ಕದ ಪರಿಸರ, ಮೈದಾನಗಳಲ್ಲಿ ನಿಂತು ಗ್ರಹಣ ವೀಕ್ಷಿಸಿದರು.

ಆರಂಭ, ಅಂತ್ಯಕ್ಕೆ ಗೋಚರ
“ಗ್ರಹಣ ಆರಂಭವಾದ 10.20ರ ಹಾಗೂ ಅಂತ್ಯವಾಗುವ 12.45ರಿಂದ 1.21ರ ವರೆಗೆ ಕುಲಶೇಖರ ಭಾಗದಿಂದ ಗ್ರಹಣ ವೀಕ್ಷಿಸಲು ಸಾಧ್ಯವಾಗಿದೆ. ಆದರೆ ಗ್ರಹಣ ಗರಿಷ್ಠ ಪ್ರಮಾಣದಲ್ಲಿ ಸಂಭವಿಸಿದ 11.30ರ ವೇಳೆಗೆ ದಟ್ಟ ಮೋಡ, ಮಳೆಯಿಂದಾಗಿ ನೋಡುವುದೇ ಅಸಾಧ್ಯವಾಯಿತು’ ಎಂದು ಹವ್ಯಾಸಿ ಖಗೋಳ ಶಾಸ್ತ್ರಜ್ಞ ಸಂಘದ ಪ್ರೊ| ಜಯಂತ ಎಚ್‌. ತಿಳಿಸಿದ್ದಾರೆ.

ಪಿಲಿಕುಳದಲ್ಲಿಯೂ ಮೋಡ ಅಡ್ಡಿ
ಪಿಲಿಕುಳದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಲೈವ್‌ ಮೂಲಕ ವೀಕ್ಷಕರಿಗೆ ಗ್ರಹಣ ತೋರಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಮೋಡ ಅಡ್ಡಿಯಾಯಿತು. ಗ್ರಹಣ ಆರಂಭದ ಸ್ವಲ್ಪ ಹೊತ್ತು ಹೊರತುಪಡಿಸಿದರೆ ಅನಂತರ ಗ್ರಹಣ ಮೋಕ್ಷವಾಗುವವರೆಗೂ ಮೋಡ, ಮಳೆ ಅಡ್ಡಿಯಾಯಿತು ಎಂದು ಕೇಂದ್ರದ ನಿರ್ದೇಶಕ ಪ್ರೊ| ಕೆ.ವಿ.ರಾವ್‌ ತಿಳಿಸಿದ್ದಾರೆ.

ನಗರದಲ್ಲಿ ಜನಸಂಚಾರ ವಿರಳ
ಕೋವಿಡ್-19 ಹಿನ್ನೆಲೆ, ಸೂರ್ಯಗ್ರಹಣ, ಜತೆಗೆ ರಜಾದಿನ ಕಾರಣ ರವಿವಾರ ಮಂಗಳೂರು ನಗರದಲ್ಲಿ ಜನಸಂಚಾರ ಭಾರೀ ಕಡಿಮೆಯಾಗಿತ್ತು. ಅಪರಾಹ್ನ ದವರೆಗೆ ಬಹುತೇಕ ಸ್ತಬ್ಧವಾದಂತಿತ್ತು. ಕಳೆದ ಬಾರಿ ಡಿಸೆಂಬರ್‌ನಲ್ಲಿ ಸೂರ್ಯಗ್ರಹಣ ಸಂಭವಿಸಿದಾಗ ಜನತೆ ಹೆಚ್ಚು ಉತ್ಸಾಹದಿಂದ ಗ್ರಹಣ ವೀಕ್ಷಣೆ ಮಾಡಿದ್ದರು. ಆದರೆ ಕೋವಿಡ್-19 ಮತ್ತು ಮಳೆಯ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಆಸಕ್ತಿ ತೋರಿಸಲಿಲ್ಲ. ಹೆಚ್ಚಿನ ಮಂದಿ ದೂರದರ್ಶನ, ಸಾಮಾಜಿಕ ಜಾಲತಾಣಗಳ ಮೂಲಕ ವೀಕ್ಷಿಸಿದರು. ಹಲವಾರು ಮಂದಿ ಗ್ರಹಣ ಹಿನ್ನೆಲೆಯಲ್ಲಿ ಉಪವಾಸ ನಡೆಸಿದರು.

Advertisement

ವಿವಿಧೆಡೆ ಅಭಿಷೇಕ, ಪೂಜೆ
ಮಂಗಳಾದೇವಿ, ಕದ್ರಿ ಮಂಜುನಾಥ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಳ ಸೇರಿದಂತೆ ವಿವಿಧೆಡೆ ದೇವಸ್ಥಾನಗಳಲ್ಲಿ ಗ್ರಹಣ ಕಾಲದಲ್ಲಿ ಅಭಿಷೇಕ, ಅನಂತರ ಗ್ರಹಣ ದೋಷ ಪರಿಹಾರ ಪೂಜೆ, ಮಹಾಪೂಜೆ ಮೊದಲಾದವು ನೆರವೇರಿದವು. ಭಕ್ತರು ದೀಪಕ್ಕೆ ಎಣ್ಣೆ ಸಮರ್ಪಿಸಿದರು. ಮಂಗಳಾದೇವಿ ದೇವಸ್ಥಾನದಲ್ಲಿ ಕ್ಷೇತ್ರದ ಹಿರಿಯ ಅರ್ಚಕ ಶ್ರೀನಿವಾಸ ಐತಾಳ ಅವರು ಧ್ವಜಸ್ತಂಭದ ಬಳಿ ಅಖಂಡ ದೀಪ ಬೆಳಗಿಸಿದರು. ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಗ್ರಹಣ ಮೋಕ್ಷ ಅನಂತರ ಗ್ರಹಣ ಶಾಂತಿ ಹೋಮ ಜರಗಿತು.

ಸುರತ್ಕಲ್‌: ಗ್ರಹಣಶಾಂತಿ ಹೋಮ
ಸುರತ್ಕಲ್‌: ಕಾಟಿಪಳ್ಳ ದ ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸೂರ್ಯಗ್ರಹಣದ ಪ್ರಯುಕ್ತ ಗ್ರಹಣಶಾಂತಿ ಹೋಮ, ನವಗ್ರಹ ವಿಶೇಷ ಪೂಜೆ ಜರಗಿತು.ಹೊಸಬೆಟ್ಟು ರಾಘವೇಂದ್ರ ಮಠದಲ್ಲಿ ನವಗ್ರಹ ಹಾಗೂ ಪಂಚಮುಖೀ ಆಂಜನೇಯ ದೇವರಿಗೆ ಅಷ್ಟೋತ್ತರ ಅರ್ಚನೆ, ರಾಘವೇಂದ್ರ ಗುರುಗಳಿಗೆ ಸೂರ್ಯಗ್ರಹಣ ಶಾಂತಿ ಹೋಮ, ವಿಶೇಷ ಸೂರ್ಯ ಶಾಂತಿ ಹೋಮ ಹಾಗೂ ಪೂಜೆ ನೆರವೇರಿತು.

ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನ ಸಹಿತ ವಿವಿಧೆಡೆ ಧಾರ್ಮಿಕ ಕ್ರಿಯೆಗನುಸಾರವಾಗಿ ದೇವರ ಪೂಜೆ ನಡೆಸಿ ದೇವಾಲಯವನ್ನು ಮುಚ್ಚಲಾಯಿತು. ಹೆಚ್ಚಿನ ಕಡೆ ವಾಹನ ಸಂಚಾರ ಕಡಿಮೆಯಿತ್ತು. ಸಂಜೆಯ ವೇಳೆ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಕಿನ್ನಿಗೋಳಿಯ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಸೂರ್ಯಗ್ರಹದ ನಿಮಿತ್ತ ಗ್ರಹಣ ಕಾಲದಲ್ಲಿ ಭಜನೆ ನಡೆಯಿತು.

ಹಳೆಯಂಗಡಿ: ಜನಸಂಚಾರ ವಿರಳ
ಹಳೆಯಂಗಡಿ: ಸೂರ್ಯಗ್ರಹಣದ ಕಾರಣ ಹಳೆಯಂಗಡಿ ಮತ್ತು ಪಡುಪಣಂಬೂರು ಮುಖ್ಯ ಪೇಟೆ ಸಹಿತ ಗ್ರಾಮೀಣ ಭಾಗದಲ್ಲಿ ವಾಹನಗಳ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿತ್ತು.ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನಗಳ ಸಂಚಾರವು ಅಷ್ಟಾಗಿ ಕಾಣಸಿಗಲಿಲ್ಲ, ರಿಕ್ಷಾಗಳು ನಿಲ್ದಾಣದಲ್ಲಿದ್ದರೂ ಸಹ ಪ್ರಯಾಣಿಕರ ಕೊರತೆ ಇತ್ತು. ಹೆಚ್ಚಿನ ಅಂಗಡಿಗಳು ಮುಚ್ಚಿದ್ದವು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ವಿಧಿ ವಿಧಾನಗಳು ನಡೆದವು.

ಹಳೆಯಂಗಡಿ: ರವಿವಾರ ಸೂರ್ಯಗ್ರಹಣ ಇದ್ದುದರಿಂದ ಇಲ್ಲಿನ ಹಳೆಯಂಗಡಿ ಮತ್ತು ಪಡುಪಣಂಬೂರು ಮುಖ್ಯ ಪೇಟೆ ಸಹಿತ ಗ್ರಾಮೀಣ ಭಾಗವು ವಾಹನಗಳ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿತ್ತು.

ಮುಖ್ಯ ಜಂಕ್ಷನ್‌ನಲ್ಲಿ ಬೆಳಗ್ಗೆಯಿಂದಲೇ ಜನ ಸಂಚಾರ ವಿರಳವಾಗಿತ್ತು. 66ರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರವು ಅಷ್ಟಾಗಿ ಕಾಣಸಿಗಲಿಲ್ಲ, ರಿಕ್ಷಾಗಳು ನಿಲ್ದಾಣದಲ್ಲಿದ್ದರೂ ಸಹ ಪ್ರಯಾಣಿಕರ ಕೊರತೆ ಇತ್ತು.ಪೇಟೆಯಲ್ಲಿನ 90 ಶೇ. ಭಾಗ ಅಂಗಡಿಗಳು ಮುಚ್ಚಿದ್ದವು. ತೆರೆದಿದ್ದ ಅಂಗಡಿಗಳಲ್ಲಿ ಗ್ರಾಹಕರ ಪ್ರೋತ್ಸಾಹ ಸಿಗದಿದ್ದರಿಂದ ಮಧ್ಯಾಹ್ನದ ನಂತರ ಕೆಲವು ಅಂಗಡಿಗಳು ಬಾಗಿಲು ಹಾಕಿ ತೆರಳಿದರು. ಈ ಭಾಗದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ವಿಧಿ ವಿಧಾನಗಳು ನಡೆದವು.

ಮೂಡುಬಿದಿರೆಯಲ್ಲೂ ವಿರಳ ಜನ
ಮೂಡುಬಿದಿರೆ: ಸೂರ್ಯಗ್ರಹಣ ಸಂಭವಿಸಿದ ರವಿವಾರ ಮೂಡುಬಿದಿರೆಯಲ್ಲಿ ಅಂಗಡಿಗಳು ವಿರಳವಾಗಿ ತೆರೆದುಕೊಂಡಿದ್ದು ಜನರು, ವಿರಳವಾಗಿ ಕಂಡುಬಂದರು. ಗ್ರಹಣದ ಆರಂಭದಿಂದ ಮುಕ್ತಾಯದವರೆಗೆ ಪೇಟೆ ಬಹುತೇಕ ಖಾಲಿ ಖಾಲಿಯಾಗಿದ್ದಂತೆ ತೋರಿತು. ವಾಹನ ಸಂಚಾರವೂ ಇರಲಿಲ್ಲ.

ಸೂರ್ಯಗ್ರಹಣ ನಿಮಿತ್ತ ಅಲಂಗಾರು ಜಗದ್ಗುರು ಶ್ರೀ ಅಯ್ಯ (ನಾಗಲಿಂಗ)ಸ್ವಾಮಿ ಮಠದಲ್ಲಿ ಗ್ರಹಣ ಶಾಂತಿ ಹೋಮವು ಮಠದ ವ್ಯವಸ್ಥಾಪಕ ಬಿ. ವಿಶ್ವನಾಥ ಆಚಾರ್ಯರ ಪೌರೋಹಿತ್ಯದಲ್ಲಿ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next