Advertisement

2021ರಲ್ಲಿ ನಾಲ್ಕು ಗ್ರಹಣಗಳು! ಆದರೆ ನಮಗೆ ಒಂದು ಗ್ರಹಣವೂ ಕಾಣಿಸದ ವರ್ಷ

02:16 AM Dec 28, 2020 | sudhir |

ಉಡುಪಿ: ಕರಾವಳಿಗರ ಸಹಿತ ದ. ಭಾರತೀಯರಿಗೆ ಒಂದು ಗ್ರಹಣವೂ ಗೋಚರಿಸದ ವರ್ಷವಾಗಿ 2021 ದಾಖಲಾಗಲಿದೆ.
ಹೊಸ ವರ್ಷದಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲಿ ಎರಡು ಚಂದ್ರ ಗ್ರಹಣಗಳು, ಇನ್ನೆರಡು ಸೂರ್ಯಗ್ರಹಣಗಳು. ಮೇ 26ರಂದು ಖಗ್ರಾಸ ಚಂದ್ರಗ್ರಹಣ, ನ. 19ರಂದು ಪಾರ್ಶ್ವ ಚಂದ್ರಗ್ರಹಣ, ಜೂ. 10ರಂದು ಕಂಕಣ ಸೂರ್ಯ ಗ್ರಹಣ ಮತ್ತು ಡಿ. 4ರಂದು ಖಗ್ರಾಸ ಸೂರ್ಯ ಗ್ರಹಣಗಳು ಸಂಭವಿಸಲಿವೆ. ಆದರೆ ಇವ್ಯಾವುವೂ ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಹಾಗೂ ದಕ್ಷಿಣ ಭಾರತೀಯರಿಗೆ ಗೋಚರಿಸುವುದಿಲ್ಲ.

Advertisement

ಮೇ 26ರ ಖಗ್ರಾಸ ಚಂದ್ರಗ್ರಹಣ ವನ್ನು ನೋಡುವ ಅವಕಾಶ ಪಶ್ಚಿಮ ಬಂಗಾಲ, ಒಡಿಶಾ ಮತ್ತಿತರ ಈಶಾನ್ಯ ಭಾರತದ ರಾಜ್ಯಗಳ ಖಗೋಳಾಸಕ್ತರಿಗೆ ಸಿಗಲಿದೆ. ನ. 19ರ ಪಾರ್ಶ್ವ ಚಂದ್ರಗ್ರಹಣವು ಅಸ್ಸಾಂ, ಅರುಣಾಚಲ ಪ್ರದೇಶದವರಿಗೆ ಸ್ವಲ್ಪ ಕಾಲ ಮಾತ್ರ ಕಾಣಿಸಲಿದೆ.

ಬುಧ ಗ್ರಹ ವೀಕ್ಷಣೆ ಬಲು ಕಷ್ಟ
ವರ್ಷದಲ್ಲಿ ಹೆಚ್ಚೆಂದರೆ ಬರೇ ಆರು ಬಾರಿ, ಒಂದು ವಾರ ಕಾಲ ಕಾಣಿಸುವ ಬುಧ ಗ್ರಹ ಈ ವರ್ಷ ಜ. 24, ಮೇ 17, ಸೆ. 14ರಂದು ಸಂಜೆ ಸೂರ್ಯಾಸ್ತವಾದ ಕೆಲವೇ ನಿಮಿಷಗಳ ಕಾಲ ಪಶ್ಚಿಮ ಆಕಾಶದಲ್ಲಿ ಕಂಡರೆ, ಮಾ. 6, ಜು. 4, ಅ. 25ರ ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಕಾಣಿಸಲಿದೆ.

ಗುರು, ಶನಿ ದರ್ಶನ
ಪ್ರತೀ ವರ್ಷ ತಲಾ ಒಮ್ಮೆ ಗುರು ಮತ್ತು ಶನಿಗ್ರಹ ಗಳು ಚೆಂದವಾಗಿ ದೊಡ್ಡದಾಗಿ ಕಾಣಿಸುತ್ತವೆ. 2021ರ ಆ. 2ರಂದು ಶನಿ ಗ್ರಹ (Saturn opposition) ಮತ್ತು ಆ. 20ಂದು ಗುರುಗ್ರಹ (Jupiter opposition) ರಾತ್ರಿಯಿಡೀ ಕಾಣಲಿವೆ. ಆಗಸ್ಟ್‌ ತಿಂಗಳಲ್ಲಿ ಈ ಎರಡೂ ಗ್ರಹಗಳು ಅದ್ಭುತವಾಗಿ ಕಾಣಿಸಲಿವೆ.

ಎ. 27ರಂದು ಮಂಗಳ ಗ್ರಹಕ್ಕೆ ಚಂದ್ರನು ಅಡ್ಡಲಾಗಿ ಬಂದು ಮರೆಮಾಚುವ ಕೌತುಕ (lunar occultation of Mars) ನಡೆಯಲಿದೆ.

Advertisement

ಫೆಬ್ರವರಿ ಮೊದಲ ವಾರದ ವರೆಗೆ ಬೆಳಗಿನ ಜಾವ ಕಾಣುವ ಶುಕ್ರ ಗ್ರಹ ಅನಂತರ ಎ. 21ರಿಂದ ಇಡೀ ವರ್ಷ ಪಶ್ಚಿಮ ಆಕಾಶದಲ್ಲಿ ಸಂಜೆ ಗೋಚರಿಸಲಿದೆ.

ಸುಮಾರು 584 ದಿನಗಳಿಗೊಮ್ಮೆ ಸಂಜೆಯ ಆಕಾಶದಲ್ಲಿ ಚೆಂದವಾಗಿ ದೊಡ್ಡದಾಗಿ ಕಾಣಿಸುವ ಶುಕ್ರ ಗ್ರಹವು ಅ. 29ರಂದು 47 ಡಿಗ್ರಿ ಕೋನದಲ್ಲಿ ಪಶ್ಚಿಮ ಆಕಾಶದಲ್ಲಿ ಕಾಣಿಸಲಿದೆ.

ಸೂರ್ಯನಿಗೆ ಹತ್ತಿರ, ದೂರ
ಭೂಮಿಯು ಸೂರ್ಯನ ಸುತ್ತ ದೀರ್ಘ‌ ವೃತ್ತದಲ್ಲಿ ಸುತ್ತುತ್ತದೆ. ಹೀಗಾಗಿ ವರ್ಷಕ್ಕೆ ತಲಾ ಒಂದು ಬಾರಿ ಸೂರ್ಯನಿಗೆ ಅತೀ ಹತ್ತಿರ ಮತ್ತು ಅತೀ ದೂರದಲ್ಲಿ ಇರುತ್ತದೆ. 2012ರಲ್ಲಿ ಜ.2ರಂದು ಸೂರ್ಯನಿಗೆ ಅತೀ ಸಮೀಪ (ಪೆರಿಜಿ)ದಲ್ಲಿದ್ದರೆ, ಜು. 6ರಂದು ಅತೀ ದೂರ(ಅಪೊಜಿ) ದಲ್ಲಿರುತ್ತದೆ ಎನ್ನುತ್ತಾರೆ ಉಡುಪಿಯ ಖಗೋಳಾಸಕ್ತ, ಪಿಪಿಸಿ ಕಾಲೇಜಿನ ನಿವೃತ್ತ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎ.ಪಿ. ಭಟ್‌.

15 ಬಾರಿ ಉಲ್ಕಾಪಾತ
ಪ್ರಮುಖ
ಎ. 4: ಕ್ವಾಡ್ರಂಟಿಡ್‌ ಉಲ್ಕಾಪಾತ ತಾಸಿಗೆ ಸರಿಸುಮಾರು 120 ಉಲ್ಕೆ ಪತನ
ಆ. 12: ಪರ್ಸಿಡ್‌ ಉಲ್ಕಾಪಾತ ತಾಸಿಗೆ 150ರಷ್ಟು ಉಲ್ಕೆ ಪತನ
ಡಿ. 14: ಜೆಮಿನಿಡ್‌ ಉಲ್ಕಾಪಾತ ತಾಸಿಗೆ 50ರಷ್ಟು ಉಲ್ಕೆ ಪತನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next