Advertisement

Aditya-L1: ಸೋಜಿಗದ ಗೂಡು ನಮ್ಮ ಸೂರ್ಯ!

11:09 PM Sep 01, 2023 | Team Udayavani |

ನಮ್ಮ ಅನ್ನದಾತ ನಮ್ಮ ದಿನಪ. ಇವನ ಸನಿಹ ಸುಳಿದವರಿಲ್ಲ. ಸೂರ್ಯನ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಭೂಮಿಯ ಮೇಲಣ ಸಸ್ಯಗಳು, ಪ್ರಾಣಿಗಳು, ಇಡೀ ಮನು ಕುಲದ ಸೃಷ್ಟಿ, ಸ್ಥಿತಿ, ಲಯಕ್ಕೂ ಕಾರಣೀ ಕರ್ತ ಈ ಸೂರ್ಯ. ಸೌರವ್ಯೂಹದಲ್ಲಿನ ಗ್ರಹಗಳು, ಉಪಗ್ರಹಗಳು, ಲಕ್ಷ ಕೋಟಿ ಕಲ್ಲುಂಡೆಗಳು, ಲಕ್ಷ ಲಕ್ಷ ಧೂಮ ಕೇತುಗಳು ಎಲ್ಲವನ್ನೂ ಅವುಗಳದೇ ಅಕ್ಷಗಳಲ್ಲಿ ತಿರುತಿರುಗಿಸಿ ಕುಣಿಸುವವ ಸೂರ್ಯ. ಭೂಮಿ- ಸೂರ್ಯರ ದೂರ ಸುಮಾರು 15 ಕೋಟಿ ಕಿ.ಮೀ. ಆದರೆ ಸೂರ್ಯನ ಗುರುತ್ವ ಹಿಡಿತ ಸುಮಾರು ಇದರ ಲಕ್ಷ ಪಟ್ಟು ದೂರದ ವರೆಗೂ (ಒಂದು ಲಕ್ಷ ಎಯು) ವ್ಯಾಪಿಸಿದೆ.

Advertisement

ಸೂರ್ಯ, ಆಕಾಶಗಂಗೆಯ ಅಸಂಖ್ಯ ನಕ್ಷತ್ರಗಳಲ್ಲಿ ಒಂದು ಸಾಮಾನ್ಯ ನಕ್ಷತ್ರ. ಸುಮಾರು ಸಾವಿರ ಕೋಟಿ ವರ್ಷದ ತನ್ನ ಆಯುಷ್ಯದಲ್ಲಿ 460 ಕೋಟಿ ವರ್ಷ ಕ್ರಮಿಸಿ ಈಗ ಮಧ್ಯ ವಯಸ್ಕನಾಗಿದ್ದಾನೆ ಸೂರ್ಯ. ತನ್ನ ಅಂತಿಮ ಹಂತದಲ್ಲಿ ಬೃಹತ್‌ ನಕ್ಷತ್ರಗಳಂತೆ ಸೂಪರ್‌ ನೋವಾ ಆಗಲಾರ, ಕಪ್ಪುರಂಧ್ರ ಬ್ಲಾಕ್‌ಹೋಲ್‌ ಕೂಡ ಆಗಲಾರ. ಇನ್ನು 540 ಕೋಟಿ ವರ್ಷಗಳ ಅನಂತರ ಶ್ವೇತ ಕುಬjನಾಗಿ ನಂದಿ ಧೂಳಾಗುವನು. ಸುರುಳಿ ಗೆಲಾಕ್ಸಿ, ಆಕಾಶ ಗಂಗೆಯ ಸುಮಾರು 10 ಸಾವಿರ ಕೋಟಿ ನಕ್ಷತ್ರಗಳಂತೆ ತನ್ನ ಪಾಡಿಗೆ ತಾನು ಗೆಲಾಕ್ಸಿಯ ಕೇಂದ್ರದ ಸುತ್ತ ಸುಮಾರು 28 ಸಾವಿರ ಜ್ಯೋತಿರ್ವರ್ಷ ದೂರದಲ್ಲಿ ಸುತ್ತುತ್ತಿದ್ದಾನೆ.

ಆಶ್ಚರ್ಯವೆಂದರೆ ಸೌರವ್ಯೂಹದ ಒಟ್ಟು ದ್ರವ್ಯರಾಶಿಯ 99.86 ಅಂಶ ತನ್ನಲ್ಲೇ ಇರಿಸಿಕೊಂಡಿರುವ ಸೂರ್ಯನ ದ್ರವ್ಯ ರಾಶಿ ಭೂಮಿಯ ದ್ರವ್ಯರಾಶಿಗಿಂತ ಸುಮಾರು 3,33,333 ಪಟ್ಟು ಹೆಚ್ಚು. ನಮ್ಮ ಭೂಮಿಯ ಗಾತ್ರಕ್ಕಿಂತ 13 ಲಕ್ಷ ಪಟ್ಟು ದೊಡ್ಡದಿರುವ ಸೂರ್ಯನ ಹೊಟ್ಟೆಮೇಲೆ 108 ಭೂಮಿ ಮಣಿಗಳ ಸರವಿಡಬಹುದು. ಸಕಲ ವಿದ್ಯುತ್‌ ಕಾಂತೀಯ ಕಿರಣಗಳನ್ನೂ ದಶದಿಶೆಗೆ ಹೊರ ಸೂಸುತ್ತಿರುವ ಸೂರ್ಯ ಸೌರವ್ಯೂಹದ ಆಧಾರಸ್ತಂಭ.
ನ್ಯೂಕ್ಲಿಯರ್‌ ಸಮ್ಮಿಲನ ಕ್ರಿಯೆಯಿಂದ ಕೊತಕೊತ ಕುದಿ ಯುವ ಪ್ಲಾಸ್ಮಾದ ಸೂರ್ಯನಲ್ಲಿ ಪ್ರಮುಖವಾಗಿ ಮೂರು ಪದರಗಳು. ಕೇಂದ್ರದ ಕೋರ್‌, ರೇಡಿಯೇಟಿವ್‌ ಝೋನ್‌ ಹಾಗೂ ಕನ್ವಿಕ್ಟಿವ್‌ ಝೋನ್‌. ಸುಮಾರು 13 ಮಿಲಿಯನ್‌ ಡಿ.ಸೆ. ಉಷ್ಣತೆಯಲ್ಲಿರುವ ಕೇಂದ್ರ ಕೋರ್‌ ಅನಂತರ ತಣಿ ಯುತ್ತಿರುವ ಇತರ ಪದರಗಳು. ಇವುಗಳ ಅನಂತರ ಹೊರ ಭಾಗದ ವಾತಾವರಣದಲ್ಲಿ ಪುನಃ ಮೂರು ಕವಚಗಳು ಫೋ ಟೋಸ್ಪಿಯರ್‌, ಕ್ರೋಮೋಸ್ಪಿಯರ್‌ ಹಾಗೂ ಕರೊನಾ.

ಸೂರ್ಯನ ಹೊರ ಪದರಗಳ ಉಷ್ಣತೆ ತಣಿದ ಹೊರ ಕವಚ ಫೋಟೋಸ್ಪಿಯರ್‌ನದ್ದು ಸುಮಾರು 6 ಸಾವಿರ ಡಿಗ್ರಿ. ಆದರೆ ಅದರ ಕೊನೆಯ ಹೊರ ಕವಚ, ಕರೊನಾದಲ್ಲಿ 15 ಲಕ್ಷ ಡಿಗ್ರಿಗಿಂತಲೂ ಹೆಚ್ಚು. 62 ಮೂಲವಸ್ತುಗಳನ್ನು ಹೊಂದಿರುವ ಸೂರ್ಯನಲ್ಲಿ, ಸುಮಾರು 75 ಅಂಶ ಹೈಡ್ರೋಜನ್‌, ನಿರಂತರ ನ್ಯೂಕ್ಲಿಯರ್‌ ಸಮ್ಮಿಲನ ಕ್ರಿಯೆಗಳ ಹರಿಕಾರ, ಕೇಂದ್ರದಲ್ಲಿ ಹೈಡ್ರೋಜನ್‌ ಅನಂತರ ಹೀಲಿಯಂ, ಕಾರ್ಬನ್‌ ಹೀಗೆ ಹೊರಹೊರಗೆ ಈರುಳ್ಳಿ ಪದರದಲ್ಲಿರು ವಂತೆ ಪದರ ಪದರಗಳಲ್ಲಿ ನಡೆಯು ತ್ತಿರುತ್ತದೆ. ಸಹಸ್ರಾರು ವರ್ಷಗಳಿಂದ ಸೂರ್ಯನನ್ನು ಅರಿಯಲು ಪ್ರಯತ್ನ ನಡೆಯುತ್ತಲೇ ಇದೆಯಾದರೂ ಅಧ್ಯ ಯನ, ಚಿಂತನ- ಮಂಥನಗಳಾಗಿದ್ದರೂ ಸಮೀಪಿಸಲು ಆಗದ ಉರಿ ಗೋಲವಾ ದದರಿಂದ ಪ್ರಾಯೋಗಿಕವಾಗಿ ಅರಿ ಯಲು ಅಸಾಧ್ಯ.

ಹಾಗಾಗಿ ಸೋಹೋ, ಪಾರ್ಕರ್‌ ಮೊದಲಾದ ಕೃತಕ ಉಪಗ್ರಹಗಳು ದೂರದಲ್ಲಿ ನಿಂತು ಅಥವಾ ಸುತ್ತ ತಿರು ಗುತ್ತಾ ಅಧ್ಯಯನ ಮಾಡು ತ್ತಿವೆ. ಸೂರ್ಯ-ಭೂಮಿ ಜತೆ ಯಾಗಿ ಸೂರ್ಯನನ್ನು ನೆಮ್ಮದಿ ಯಿಂದ ಅಧ್ಯಯನ ಮಾಡಲು ಒಂದು ಒಳ್ಳೆಯ ಸ್ಥಳ ಮಾಡಿವೆ. ಅದೇ ಎಲ್‌1. ಭೂಮಿ ಸೂರ್ಯನ ಸರಾಸರಿ ದೂರ 15 ಕೋಟಿ ಕಿ.ಮೀ. ಈ ದೂರದ ನಡುವೆ ಭೂಮಿಗೆ ಸಮೀಪ, ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿ ಈ ಎರಡರ ಗುರುತ್ವ ನಮ್ಮ ಕೃತಕ ಉಪಗ್ರಹಕ್ಕೆ ಸಮಾನವಾಗುವುದರಿಂದ ಅಲ್ಲೇ ನಾವು ಹಾರಿಸಿದ ಉಪಗ್ರಹ ಆರಾಮವಾಗಿ ಆ ಜಾಗದಲ್ಲಿ ನೆಲೆಸುತ್ತದೆ.

Advertisement

ಭಾರತೀಯ ವಿಜ್ಞಾನಿಗಳು ಎಲ್‌1 ನಲ್ಲಿ ಕೃತಕ ಉಪಗ್ರಹ ಆದಿತ್ಯ-ಎಲ್‌1 ಇರಿಸಲು ಮುಂದಾಗಿದ್ದಾರೆ. ಸೂರ್ಯನ ಬಗ್ಗೆ ಅನೇಕ ಪ್ರಯೋಗಗಳನ್ನು ಮಾಡಿ ಸೂರ್ಯನನ್ನು ಅರಿಯಲು ಹೊರಟಿದ್ದಾರೆ.ಇದು ಭಾರತದ 140 ಕೋಟಿ ಜನರ ಹೆಮ್ಮೆ. ಸೋಜಿಗಗಳ ಗೂಡಾದ ಸೂರ್ಯನನ್ನು ಅರಿಯಲು 7 ವಿಭಾಗಗಳಲ್ಲಿ ಆದಿತ್ಯ-ಎಲ್‌1 ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಗೆಲೀಲಿಯೋ 1610ರಲ್ಲಿ ಕಂಡ ಸೂರ್ಯನ ಕಲೆಗಳು ಇವತ್ತಿಗೂ ವಿಸ್ಮಯ. ಜತೆಯಾಗಿರುವ ಇವುಗಳ ಸಂಖ್ಯೆ ಪ್ರತೀ ವರ್ಷ ಬೇರೆ ಬೇರೆ. 11 ವರ್ಷಕ್ಕೆ ಪುನರಾವರ್ತಿಸುವ ಇವು ಒಂದು ವರ್ಷ ಇರು ವುದೇ ಇಲ್ಲ. ಫೋಟೋಸ್ಪಿಯರ್‌ನಿಂದ ಚಿಮ್ಮುವ ಕಾಂತೀಯ ಸಮೂಹ ಬಹು ವಿಸ್ಮಯ ಇವುಗಳಿಗೆ ಕಾರಣವೆಂದು ಅಂದಾ ಜಿಸಲಾಗಿದೆ. ಸೂರ್ಯನ ಕಾಂತೀಯ ವಿಸ್ಮಯ, ಸೌರ ಕಲೆಗಳು, ಕರೊನಾ ವಿಚಿತ್ರಗಳು, ವಿದ್ಯುತ್ಕಾಂತೀಯ ಕಿರಣಗಳು ಮತ್ತು ಸೌರ ಮಾರುತಗಳ ವೈಭವ, ಕರೊನಲ್‌ ಮಾಸ್‌ ಇಜೆಕ್ಷನ್‌, ಶಕ್ತಿಯುತ ಕಣಗಳು, ಪ್ರವಾಹಗಳ ಮುನ್ಸೂ ಚನೆ ಹೀಗೆ ಅನೇಕ ಪ್ರಯೋಗಗಳನ್ನು ನಡೆಸಲು ಆದಿತ್ಯ ಎಲ್‌1 ಅಣಿಯಾಗಿದೆ.

ಸೂರ್ಯನಿಂದ ಬರುವ ಕಣ ಪ್ರವಾಹಗಳ ಮುನ್ನೆಚ್ಚರಿಕೆಯ ಕಾವಲುಗಾರ ಆದಿತ್ಯ-ಎಲ್‌1. ಈ ಶಕ್ತಿಯುತ ಕಣಗಳು ವಿದ್ಯುತ್‌ ವ್ಯವಸ್ಥೆಯನ್ನು ತಲ್ಲಣಗೊಳಿಸಿಯಾವು. ಹಾಗೆ ಆಕಾಶದಲ್ಲಿರುವ ಕೃತಕ ಉಪಗ್ರಹಗಳನ್ನೂ ಹಾಳು ಮಾಡಿ ಯಾವು. ಭೂ ವಾತಾವರಣದ ಕಣಗಳನ್ನೂ ತಲ್ಲಣಗೊಳಿಸಿ ಯಾವು. ವಿಶ್ವವೇ ಭಾರತದ ವಿಜ್ಞಾನಿಗಳ ಈ ಕುತೂಹಲ ಪ್ರಯೋಗವನ್ನು ನಿಬ್ಬೆರಗಾಗಿ ವೀಕ್ಷಿಸುತ್ತಿದೆ. ವಿಜ್ಞಾನಿಗಳ ಈ ಪ್ರಾಮಾಣಿಕ ಪ್ರಯತ್ನಕ್ಕೆ ಅನ್ನದಾತ, ಜ್ಞಾನದಾತ ಆದಿತ್ಯ ಶುಭ ಹೇಳಲಿ. ಎಲ್ಲರ ನೆಚ್ಚಿನ ಆದಿತ್ಯ-ಎಲ್‌1ಗೆ ಶುಭಾಶಯಗಳು.

-ಡಾ| ಎ.ಪಿ. ಭಟ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next