Advertisement
ತಾಲೂಕಿನ ಬಹುತೇಕ ಕೆರೆಗಳು ಈ ಬಾರಿ ತುಂಬಿ ಕೋಡಿ ಹರಿದಿವೆ. ಹೀಗಾಗಿ, ಕೆರೆ ಅಂಗಳದಲ್ಲಿ ಮಣ್ಣು ದೊರೆಯುತ್ತಿಲ್ಲ. ಇದರಿಂದ ಈಗ ಮಣ್ಣು ಲೂಟಿಕೋರರ ಕಣ್ಣು ಬೆಟ್ಟದ ಸಾಲಿನ ಮಣ್ಣಿನ ದಿಬ್ಬಗಳತ್ತ ನೆಟ್ಟಿದೆ. ಸಂಜೆಯಾಗುತ್ತಲೇ ಬೃಹತ್ ಹಿಟಾಚಿಯೊಂದಿಗೆ ನೂರಾರು ಸಂಖ್ಯೆಯಲ್ಲಿ ಬರುವ 10 ಚಕ್ರದ ಲಾರಿಗಳು ಬೆಳಗಾಗುಷ್ಟರಲ್ಲಿ ಮಣ್ಣಿನ ದಿಬ್ಬಗಳನ್ನು ಕರಗಿಸಿ ಇಡೀ ಪ್ರದೇಶವನ್ನು ಬಯಲು ಪ್ರದೇಶವಾಗಿಸುತ್ತಿವೆ.
Related Articles
Advertisement
ಬೆಟ್ಟಗಳು ಕುಸಿಯುವ ಆತಂಕ: ಬೆಟ್ಟದ ತಪ್ಪಲಿನ ಮಣ್ಣನ್ನು ಸಾಗಾಣಿಕೆ ಮಾಡಿದ್ದರ ಪರಿಣಾಮವೇ ಇಂದು ನಂದಿ ಬೆಟ್ಟದಲ್ಲಿ ಬೆಟ್ಟ ಕುಸಿತಕ್ಕೆ ಕಾರಣವಾಗಿದೆ. ಇದೇ ರೀತಿ ಈಗ ಮಾಕಳಿ ಹಾಗೂ ಹುಲುಕುಡಿ ಬೆಟ್ಟದ ತಪ್ಪಲಿನಲ್ಲೂ ಪ್ರಕೃತಿದತ್ತವಾದ ಮಣ್ಣಿನ ದಿಬ್ಬಗಳನ್ನು ಖಾಲಿ ಮಾಡಿದರೆ ಈ ಬೆಟ್ಟಗಳಲ್ಲೂ ಕುಸಿತ ಪ್ರಾರಂಭವಾಗಲಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಅಕ್ರಮ ಮಣ್ಣು ಸಾಗಾಣಿಕೆಗೆ ಕಡಿವಾಣ ಹಾಕಬೇಕಿದೆ ಎಂದು ಪರಿಸರವಾದಿ ಚಿದಾನಂದ್ ಆಗ್ರಹಿಸಿದ್ದಾರೆ.
ತಾಲೂಕು ಆಡಳಿತದ ವೈಫಲ್ಯ: ಗ್ರಾಮಸ್ಥರ ಆರೋಪ : ನಮ್ಮೂರಿನ ದನ, ಕುರಿಗಳು ಮೇಯುತ್ತಿದ್ದ ಗೋಮಾಳದಲ್ಲಿನ ಮಣ್ಣಿನ ದಿಬ್ಬಗಳು 20 ದಿನಗಳಿಂದ ಈಚೆಗೆ ಕರಗಿ ಹೋಗಿದ್ದು, ಇಡೀ ಪ್ರದೇಶ ಆಟದ ಮೈದಾನದಂತೆ ಆಗಿದೆ. ಇನ್ನು ಕೆಲವು ಕಡೆಗಳಲ್ಲಿ ಬೃಹತ್ ಗಾತ್ರದ ಗುಂಡಿಗಳು ನಿರ್ಮಾಣವಾಗಿವೆ. ಆಳವಾಗಿರುವ ಗುಂಡಿಗಳಿಗೆ ಕಾಲು ಜಾರಿ ಒಳಗೆ ಬಿದ್ದರೆ ಮತ್ತೆ ಮೇಲೆ ಬರಲು ಸಾಧ್ಯವಿಲ್ಲದಾಗಿದೆ. ಟನ್‌ಗಟ್ಟಲೆ ಮಣ್ಣು ತುಂಬಿದ ಲಾರಿಗಳ ಓಡಾಟದಿಂದ ಗ್ರಾಮದ ರಸ್ತೆಗಳು ಹಾಳಾಗಿ ಹೋಗಿವೆ. ಈ ಬಗ್ಗೆ ಪ್ರಶ್ನೆ ಮಾಡುವವರ ವಿರುದ್ಧ ಮಣ್ಣು ಸಾಗಾಣಿಕೆದಾರರು ಕುಡುಕರನ್ನು ಜಗಳಕ್ಕೆ ಕಳಿಸುವ ಮೂಲಕ ಬೆದರಿಸುತ್ತಿದ್ದಾರೆ. ಮಣ್ಣಿನ ಲೂಟಿಗೆ ತಾಲೂಕು ಆಡಳಿತದ ವೈಫಲ್ಯವೇ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.